ಬೆಂಗಳೂರಿನಲ್ಲಿ ಹೊಸ ಕಾನೂನು ವಿವಿ ಬೇಡ: ಹುಬ್ಬಳ್ಳಿ-ಧಾರವಾಡದಲ್ಲಿರುವ ಕಾನೂನು ವಿವಿ ಬಲಪಡಿಸಲು ಸರಕಾರಕ್ಕೆ ಉತ್ತರ ಕರ್ನಾಟಕ ಶಾಸಕರ ಮನವಿ

ಸಾಂದರ್ಭಿಕ ಚಿತ್ರ | PC : Image by magnific
ಬೆಂಗಳೂರು : ಬೆಂಗಳೂರಿನಲ್ಲಿ ಪ್ರತ್ಯೇಕ ಹೊಸ ಕಾನೂನು ವಿಶ್ವವಿದ್ಯಾನಿಲಯವನ್ನು ಸ್ಥಾಪಿಸುವ ಪ್ರಸ್ತಾವನೆಯನ್ನು ಕೈಬಿಟ್ಟು, ಈಗಾಗಲೇ ಹುಬ್ಬಳ್ಳಿ-ಧಾರವಾಡದಲ್ಲಿ ಕಾರ್ಯನಿರ್ವಹಿಸುತ್ತಿರುವ 'ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾನಿಲಯವನ್ನು' (KSLU) ಮತ್ತಷ್ಟು ಬಲಪಡಿಸಬೇಕೆಂದು ಉತ್ತರ ಕರ್ನಾಟಕ ಭಾಗದ ಶಾಸಕರು ಸರಕಾರವನ್ನು ಒತ್ತಾಯಿಸಿದ್ದಾರೆ.
ಈ ಕುರಿತು ವಿಧಾನಸಭೆ ವಿರೋಧ ಪಕ್ಷದ ಉಪ ನಾಯಕ ಅರವಿಂದ ಬೆಲ್ಲದ, ಮಾಜಿ ಸಚಿವ ಸಿ.ಸಿ. ಪಾಟೀಲ್ ಸೇರಿದಂತೆ ಉತ್ತರ ಕರ್ನಾಟಕ ಭಾಗದ ಶಾಸಕರ ನಿಯೋಗವು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ. 2009ರ ಕಾಯ್ದೆಯಂತೆ ಹುಬ್ಬಳ್ಳಿ-ಧಾರವಾಡದಲ್ಲಿ ಸ್ಥಾಪಿತವಾಗಿರುವ ಕೆಎಸ್ಎಲ್ಯು ಇಡೀ ರಾಜ್ಯದ ಕಾನೂನು ಶಿಕ್ಷಣವನ್ನು ನಿರ್ವಹಿಸುವ ಪ್ರಮುಖ ಸಂಸ್ಥೆಯಾಗಿದೆ ಎಂದು ನೆನಪಿಸಿದ್ದಾರೆ.
ಆರ್ಥಿಕ ಹೊರೆ: ಬೆಂಗಳೂರಿನಲ್ಲಿ ಹೊಸ ವಿಶ್ವವಿದ್ಯಾನಿಲಯ ಸ್ಥಾಪಿಸುವುದರಿಂದ ಕಟ್ಟಡ, ಭೂಮಿ, ಸಿಬ್ಬಂದಿ ಹಾಗೂ ಆಡಳಿತಾತ್ಮಕ ವ್ಯವಸ್ಥೆಗೆ ಸರಕಾರದ ಮೇಲೆ ಅನಗತ್ಯ ಹೆಚ್ಚುವರಿ ಆರ್ಥಿಕ ಹೊರೆ ಬೀಳಲಿದೆ.
ವಿಕೇಂದ್ರೀಕರಣ ಮತ್ತು ನಂಜುಂಡಪ್ಪ ವರದಿ: ಹುಬ್ಬಳ್ಳಿ-ಧಾರವಾಡದಲ್ಲಿ ವಿವಿ ಸ್ಥಾಪಿಸಿರುವುದು ಪ್ರಾದೇಶಿಕ ಅಸಮತೋಲನ ನಿವಾರಣೆಯ ನಂಜುಂಡಪ್ಪ ಸಮಿತಿಯ ಶಿಫಾರಸಿಗೆ ಪೂರಕವಾಗಿದೆ. ಬೆಂಗಳೂರಿನಲ್ಲಿ ಮತ್ತೆ ವಿವಿ ಸ್ಥಾಪಿಸಿದರೆ ಶೈಕ್ಷಣಿಕ ಕೇಂದ್ರೀಕರಣ ಹೆಚ್ಚಾಗಲಿದೆ. ಹೊಸ ವಿವಿ ತೆರೆಯುವ ಬದಲು, ಈಗಿರುವ ಕೆಎಸ್ಎಲ್ಯುಗೆ ಅಗತ್ಯ ಮೂಲಸೌಕರ್ಯ, ಬೋಧಕ ಸಿಬ್ಬಂದಿ ಹಾಗೂ ಸಂಶೋಧನಾ ಸೌಲಭ್ಯಗಳನ್ನು ಒದಗಿಸುವುದು ಹೆಚ್ಚು ಅನುಕೂಲವಾಗುತ್ತದೆ ಎಂದು ತಿಳಿಸಿದ್ದಾರೆ.
ವಿಶೇಷ ವಿಭಾಗಗಳ ಅಭಿವೃದ್ಧಿ: ಹುಬ್ಬಳ್ಳಿ-ಧಾರವಾಡದ ವಿಶ್ವವಿದ್ಯಾನಿಲಯದಲ್ಲೇ ಸೈಬರ್ ಕಾನೂನು, ಸಂವಿಧಾನಿಕ ಕಾನೂನು, ವಾಣಿಜ್ಯ ಹಾಗೂ ಅಂತರರಾಷ್ಟ್ರೀಯ ಕಾನೂನು, ಬೌದ್ಧಿಕ ಆಸ್ತಿ ಹಕ್ಕು ಮತ್ತು ಮಾನವ ಹಕ್ಕುಗಳಂತಹ ವಿಶೇಷ ಅಧ್ಯಯನ ವಿಭಾಗಗಳನ್ನು ಆರಂಭಿಸಬಹುದು.
ಹುಬ್ಬಳ್ಳಿ-ಧಾರವಾಡದಲ್ಲಿರುವ ವಿಶ್ವವಿದ್ಯಾನಿಲಯವನ್ನು ದುರ್ಬಲಗೊಳಿಸದೆ, ಅದನ್ನೇ ರಾಜ್ಯದ ಪ್ರಮುಖ ಕಾನೂನು ಶಿಕ್ಷಣ ಮತ್ತು ಸಂಶೋಧನಾ ಕೇಂದ್ರವಾಗಿ ಅಭಿವೃದ್ಧಿಪಡಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಶಾಸಕರಾದ ಮಹೇಶ್ ಟೆಂಗಿನಕಾಯಿ, ಶರಣು ಸಲಗಾರ, ಬಸನಗೌಡ ಪಾಟೀಲ್ ಯತ್ನಾಳ್, ಚಂದ್ರು ಲಮಾಣಿ, ಎಂ.ಆರ್. ಪಾಟೀಲ್, ಸಿದ್ದು ಸವದಿ, ಶೈಲೇಂದ್ರ ಬೆಲ್ದಾಳೆ, ಡಾ.ಅವಿನಾಶ್ ಜಾದವ್ ಸೇರಿದಂತೆ ಹಲವು ಶಾಸಕರು ಸರಕಾರವನ್ನು ಆಗ್ರಹಿಸಿದ್ದಾರೆ.






