ಸದನದಲ್ಲಿ ವಿಪಕ್ಷ ನಾಯಕ ಆರ್. ಅಶೋಕ್‍ಗೆ ಅಭಿನಂದನೆ

ಬೆಳಗಾವಿ: ವಿಧಾನಸಭೆಯ ವಿರೋಧ ಪಕ್ಷದ ನಾಯಕರಾಗಿ ನೂತನವಾಗಿ ಆಯ್ಕೆಯಾಗಿರುವ ಆರ್.ಅಶೋಕ್ ಅವರನ್ನು ಸೋಮವಾರ ಮಧ್ಯಾಹ್ನ ಭೋಜನ ವಿರಾಮದ ಬಳಿಕ ಸ್ಪೀಕರ್ ಯು.ಟಿ.ಖಾದರ್ ಸೇರಿದಂತೆ ಸಚಿವರು ಹಾಗೂ ಎಲ್ಲ ಪಕ್ಷಗಳ ಸದಸ್ಯರು ಪಕ್ಷಬೇಧ ಮರೆತು ಅಭಿನಂದಿಸಿದರು.
ಆರ್. ಅಶೋಕ್‍ರನ್ನು ವಿರೋಧ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡಿರುವ ವಿಷಯವನ್ನು ಸದನದ ಗಮನಕ್ಕೆ ತಂದು ಮಾತನಾಡಿದ ಸ್ಪೀಕರ್ ಯು.ಟಿ.ಖಾದರ್, ‘ದೀರ್ಘ ಕಾಲದ ರಾಜಕೀಯ ಜೀವನದ ಅನುಭವ ಇರುವ ಅಶೋಕ್, ಹಲವಾರು ಜವಾಬ್ದಾರಿಗಳನ್ನು ನಿರ್ವಹಿಸುದ ಅನುಭವ ಹೊಂದಿದ್ದಾರೆ. ಈಗ ಅವರಿಗೆ ಮತ್ತಷ್ಟು ಮಹತ್ವದ ಸ್ಥಾನ ಸಿಕ್ಕಿದೆ’ ಎಂದರು.
ಆಶೋಕ್ ವಿರೋಧ ಪಕ್ಷದ ನಾಯಕರಾಗಿ ಈ ಸದನವು ಸಮರ್ಥವಾಗಿ, ಸೌಹಾರ್ದಯುತವಾಗಿ ಯಶಸ್ವಿಯಾಗಿ ನಡೆಯಲು ಸಹಕಾರ ಕೊಡುವಂತೆ ಅವರು ಕೋರಿದರು.
ಸರಕಾರದ ಪರವಾಗಿ ವಿಪಕ್ಷ ನಾಯಕ ಆರ್.ಅಶೋಕ್‍ರನ್ನು ಅಭಿನಂದಿಸಿದ ಕಂದಾಯ ಸಚಿವ ಕೃಷ್ಣ ಬೈರೇಗೌಡ, ವಿಪಕ್ಷ ನಾಯಕನ ಸ್ಥಾನ ಅತ್ಯಂತ ಮಹತ್ವದ ಜವಾಬ್ದಾರಿ. ಈ ಸ್ಥಾನವನ್ನು ನಮ್ಮ ಸಂಸದೀಯ ವ್ಯವಸ್ಥೆಯಲ್ಲಿ ಮುಖ್ಯಮಂತ್ರಿ ಹುದ್ದೆಗೆ ಪರ್ಯಾಯ ಹುದ್ದೆ ಎಂದು ಕರೆಯಲಾಗುತ್ತದೆ. ವಿರೋಧ ಮಾಡಲೇಂದೇ ವಿರೋಧಿಸುವುದು ಸರಿಯಲ್ಲ. ವಿಪಕ್ಷಗಳ ಟೀಕೆ, ಟಿಪ್ಪಣಿಗಳು ರಚನಾತ್ಮಕವಾಗಿರಲಿ ಎಂದರು.
ವಿರೋಧ ಪಕ್ಷಗಳು ನಾಡಿನ ಜನತೆಯ ಒಳಿತಿಗಾಗಿ ಉತ್ತಮ ಆಡಳಿತ ನೀಡುವಂತಹ ಸಲಹೆಗಳನ್ನು ನೀಡಿದರೆ ಸರಕಾರ ಮುಕ್ತ ಮನಸ್ಸಿನಿಂದ ಸ್ವೀಕರಿಸುತ್ತದೆ ಎಂದು ಅವರು ಹೇಳಿದರು.
ಬಿಜೆಪಿ ಸದಸ್ಯ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಮಾತನಾಡಿ, 7 ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಆರ್.ಅಶೋಕ್, ಚಿಕ್ಕ ವಯಸ್ಸಿನಿಂದಲೂ ಹಲವಾರು ಹೋರಾಟಗಳಲ್ಲಿ ಭಾಗಿಯಾಗಿದ್ದವರು. ಸಾರಿಗೆ, ಗೃಹ, ಆರೋಗ್ಯ ಸೇರಿದಂತೆ ಅನೇಕ ಸಚಿವ ಸ್ಥಾನದ ಜವಾಬ್ದಾರಿಗಳನ್ನು ನಿರ್ವಹಿಸಿದ್ದಾರೆ. ಅವರು ತಮ್ಮಲ್ಲಿರುವ ಅನುಭವ, ಜ್ಞಾನದ ಆಧಾರದ ಮೇಲೆ ಸರಕಾರಕ್ಕೆ ಸಲಹೆಗಳನ್ನು ನೀಡುತ್ತಾರೆ ಎಂದರು.
ಟೀಕೆಗಾಗಿ ನಾವು ಟೀಕೆ ಮಾಡುವುದಿಲ್ಲ. ಸರಕಾರ ಜನ ವಿರೋಧಿಯಾಗಿ ವರ್ತಿಸಿದರೆ ಅದನ್ನು ಪ್ರಶ್ನಿಸುವುದು ನಮ್ಮ ಕರ್ತವ್ಯ. ಮುಂದಿನ ದಿನಗಳಲ್ಲಿ ರಾಜ್ಯ ಸರಕಾರಕ್ಕೆ ತಿಳುವಳಿಕೆ ನೀಡಲು ಜವಾಬ್ದಾರಿಯುತವಾಗಿ ಕೆಲಸ ಮಾಡುತ್ತೇವೆ ಎಂದರು. ಬಿಜೆಪಿ ಸದಸ್ಯರಾದ ಎಸ್.ಟಿ.ಸೋಮಶೇಖರ್, ಸಿ.ಸಿ.ಪಾಟೀಲ್, ಬಿ.ವೈ.ವಿಜಯೇಂದ್ರ, ಜೆಡಿಎಸ್ ಸದಸ್ಯ ಸಿ.ಎನ್.ಬಾಲಕೃಷ್ಣ, ಕಾಂಗ್ರೆಸ್ ಸದಸ್ಯ ಬಸವರಾಜ ರಾಯರೆಡ್ಡಿ, ಅಶೋಕ್ ಅವರಿಗೆ ಅಭಿನಂದನೆ ಸಲ್ಲಿಸಿದರು.







