ವಿಧಾನ ಪರಿಷತ್ ಚುನಾವಣೆ : 5ನೇ ಅಭ್ಯರ್ಥಿಯನ್ನು ಘೋಷಿಸಿದ ಕಾಂಗ್ರೆಸ್

ಸಾಂದರ್ಭಿಕ ಚಿತ್ರ | PTI
ಬೆಂಗಳೂರು: ವಿಧಾನಸಭೆಯಿಂದ ವಿಧಾನ ಪರಿಷತ್ತಿನ ಏಳು ಸ್ಥಾನಗಳಿಗೆ ನಡೆಯಲಿರುವ ದೈವಾರ್ಷಿಕ ಚುನಾವಣೆಗೆ ಆಡಳಿತಾರೂಢ ಕಾಂಗ್ರೆಸ್ ಪಕ್ಷವು, ಅಚ್ಚರಿಯ ರೀತಿಯಲ್ಲಿ 5ನೆ ಅಭ್ಯರ್ಥಿಯಾಗಿ ವಿನಯ್ ಕಾರ್ತಿಕ್ ಅವರನ್ನು ಕಣಕ್ಕಿಳಿಸಿದೆ.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ವಿನಯ್ ಕಾರ್ತಿಕ್, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ (ಕೆಪಿಸಿಸಿ) ಖಜಾಂಚಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಇದಕ್ಕೂ ಮುನ್ನ ಬುಧವಾರವಷ್ಟೇ ಎಐಸಿಸಿ ಮೊದಲ ಪಟ್ಟಿ ಬಿಡುಗಡೆ ಮಾಡಿತ್ತು. ಅದರಲ್ಲಿ ಬಿ.ಕೆ.ಹರಿಪ್ರಸಾದ್, ತಿಪ್ಪಣ್ಣಪ್ಪ ಕಮಕನೂರ, ಪಿ.ವಿ.ಮೋಹನ್ ಹಾಗೂ ಶಿವಣ್ಣ ಮಳವಳ್ಳಿ ಅವರನ್ನು ಅಭ್ಯರ್ಥಿಗಳನ್ನಾಗಿ ಘೋಷಿಸಿ ಆದೇಶ ಹೊರಡಿಸಲಾಗಿತ್ತು. ಇದೀಗ ವಿನಯ್ ಕಾರ್ತಿಕ್ ಅವರ ಸೇರ್ಪಡೆಯೊಂದಿಗೆ ಕಾಂಗ್ರೆಸ್ ಅಭ್ಯರ್ಥಿಗಳ ಒಟ್ಟು ಸಂಖ್ಯೆ 5ಕ್ಕೆ ಏರಿಕೆಯಾದಂತಾಗಿದೆ.
ವಿಧಾನಸಭೆಯಿಂದ ವಿಧಾನ ಪರಿಷತ್ನ ಏಳು ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದ್ದು, ಜೂ.1ರಂದು ಚುನಾವಣೆಯ ಅಧಿಸೂಚನೆ ಪ್ರಕಟಿಸಿದ್ದು, ಜೂ.8ಕ್ಕೆ ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದ್ದು, ಜೂ.18ಕ್ಕೆ ಚುನಾವಣೆ ನಡೆಯಲಿದೆ.
ಪ್ರಸ್ತುತ ವಿಧಾನಸಭೆಯಲ್ಲಿರುವ ಸಂಖ್ಯಾಬಲದ ಆಧಾರದ ಮೇಲೆ ಒಬ್ಬ ಅಭ್ಯರ್ಥಿ ಸುಲಭವಾಗಿ ಗೆದ್ದು ಬರಲು ಕನಿಷ್ಠ 29 ಶಾಸಕರ ಮತಗಳ ಅವಶ್ಯಕತೆಯಿದೆ. ಕಾಂಗ್ರೆಸ್ ಪಕ್ಷವು ತನ್ನ ಮೊದಲ ನಾಲ್ಕು ಅಭ್ಯರ್ಥಿಗಳನ್ನು ಸುರಕ್ಷಿತವಾಗಿ ಗೆಲ್ಲಿಸಿಕೊಳ್ಳಲು ಒಟ್ಟು 116 ಮತಗಳು ಸಾಕು.
ಕಾಂಗ್ರೆಸ್ನ ಶಾಸಕರು 136 ಇದ್ದು, 3 ಪಕ್ಷೇತರರು ಬೆಂಬಲ ನೀಡಿದ್ದಾರೆ. ಹಾಗಾಗಿ ಒಟ್ಟು ಬಲ 139 ಆಗುತ್ತದೆ.
ಈ 139 ಮತಗಳಲ್ಲಿ ಮೊದಲ ನಾಲ್ಕು ಅಭ್ಯರ್ಥಿಗಳ ಗೆಲುವಿಗೆ 116 ಮತಗಳನ್ನು ಮೈನಸ್ ಮಾಡಿದರೆ, ಕಾಂಗ್ರೆಸ್ ಬಳಿ ಕೇವಲ 23 ಹೆಚ್ಚುವರಿ ಮತಗಳು ಉಳಿಯಲಿವೆ. ಐದನೇ ಅಭ್ಯರ್ಥಿಯಾದ ಗೆಲುವಿಗೆ ಇನ್ನೂ 6 ಮತಗಳ ಕೊರತೆಯಿದೆ. ಹೀಗಾಗಿ ಶಾಸಕರ ಅಡ್ಡ ಮತದಾನ ಸಾಧ್ಯತೆ ಇದೆ.






