ವಿಧಾನ ಪರಿಷತ್ ಚುನಾವಣೆ | ನಾಲ್ಕು ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದ ಕಾಂಗ್ರೆಸ್

ಸಾಂದರ್ಭಿಕ ಚಿತ್ರ | Photo Credit : PTI
ಬೆಂಗಳೂರು : ರಾಜ್ಯ ವಿಧಾನ ಪರಿಷತ್ತಿನ ಶಿಕ್ಷಕರ ಮತ್ತು ಪದವೀಧರ ಕ್ಷೇತ್ರಗಳ ನಾಲ್ಕು ಸ್ಥಾನಗಳಿಗೆ ನಡೆಯುವ ಚುನಾವಣೆಗಾಗಿ ಕಾಂಗ್ರೆಸ್ ಪಕ್ಷವು ತನ್ನ ಅಭ್ಯರ್ಥಿಗಳನ್ನು ಮಂಗಳವಾರ ಘೋಷಣೆ ಮಾಡಿದೆ.
2026ರ ನವೆಂಬರ್ ವೇಳೆಗೆ ತೆರವಾಗಲಿರುವ ನಾಲ್ಕು ಸ್ಥಾನಗಳಿಗೆ ಕೈ ಅಭ್ಯಥಿಗಳನ್ನು ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಪ್ರಕಟಿಸಿದ್ದು, ಆ ಪೈಕಿ ಮೂರು ಮಂದಿ ಮಾಜಿ ವಿಧಾನ ಪರಿಷತ್ ಸದಸ್ಯರಿಗೆ ಟಿಕೆಟ್ ನೀಡಲಾಗಿದ್ದು, ಒಂದು ಕ್ಷೇತ್ರಕ್ಕೆ ಹೊಸಬರಿಗೆ ಮಣೆ ಹಾಕಲಾಗಿದೆ.
ಪಶ್ಚಿಮ ಪದವೀಧರ ಕ್ಷೇತ್ರದಲ್ಲಿ ಬಿಜೆಪಿಯ ಎಸ್.ವಿ.ಸಂಕನೂರು, ಆಗ್ನೇಯ ಪದವೀಧರ ಕ್ಷೇತ್ರದಲ್ಲಿ ಪಕ್ಷೇತರ ಸದಸ್ಯರಾದ ಚಿದಾನಂದ ಎಂ. ಗೌಡ, ಈಶಾನ್ಯ ಶಿಕ್ಷಕರ ಕ್ಷೇತ್ರದಲ್ಲಿ ಬಿಜೆಪಿಯ ಶಶಿಲ್ ನಮೋಶಿ, ಬೆಂಗಳೂರು ಪದವೀಧರ ಕ್ಷೇತ್ರದಲ್ಲಿ ಕಾಂಗ್ರೆಸ್ನ ಪುಟ್ಟಣ್ಣ ಸದಸ್ಯರಾಗಿದ್ದಾರೆ. 2026ರ ನವೆಂಬರ್ 11ಕ್ಕೆ ಈ ಮೇಲ್ಕಂಡ ನಾಲ್ವರು ಸದಸ್ಯರ ಅವಧಿ ಮುಕ್ತಾಯಗೊಳ್ಳಲಿದೆ. ಅದಕ್ಕೂ ಮೊದಲೇ ಚುನಾವಣೆ ನಡೆದು ಪರಿಷತ್ ಸದಸ್ಯರ ಆಯ್ಕೆಯಾಗಬೇಕಿದೆ.
ಹುಬ್ಬಳ್ಳಿ-ಧಾರವಾಡ ಭಾಗದ ಪಶ್ಚಿಮ ಪದವೀಧರ ಕ್ಷೇತ್ರದಲ್ಲಿ ವಿಧಾನ ಪರಿಷತ್ತಿನ ಮಾಜಿ ಸದಸ್ಯ ಮೋಹನ್ ಲಿಂಬೆಕಾಯಿ ಅವರನ್ನು ಕಣಕ್ಕಿಳಿಸುತ್ತಿದೆ. ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ ಸೇರಿ ಮಧ್ಯ ಕರ್ನಾಟಕ ಭಾಗದ ಆಗ್ನೇಯ ಪದವೀಧರ ಕ್ಷೇತ್ರದಲ್ಲಿ ಶಶಿ ಹುಲಿಕುಂಟೆಮಠ ಅವರನ್ನು, ಕಲಬುರಗಿ ಹಾಗೂ ಅಕ್ಕಪಕ್ಕದ ಜಿಲ್ಲೆಗಳ ವ್ಯಾಪ್ತಿಯ ಈಶಾನ್ಯ ಶಿಕ್ಷಕರ ಕ್ಷೇತ್ರಕ್ಕೆ ಶರಣಪ್ಪ ಮಟ್ಟೂರ ಅವರನ್ನು ಹಾಗೂ ಬೆಂಗಳೂರು ಪದವೀಧರರ ಕ್ಷೇತ್ರದಲ್ಲಿ ಹಾಲಿ ಸದಸ್ಯ ಪುಟ್ಟಣ್ಣ ಅವರಿಗೆ ಮರು ಸ್ಪರ್ಧೆಗೆ ಕಲ್ಪಿಸಲಾಗಿದೆ.







