‘ವಿಧಾನಪರಿಷತ್ ಚುನಾವಣೆ’ : ಬರಪರಿಹಾರಕ್ಕೆ ನೀತಿ ಸಂಹಿತೆ ಅಡ್ಡಿಯಾಗದಂತೆ ನಿರ್ದೇಶನ ಕೋರಿ ರಮೇಶ್ ಬಾಬು ಪತ್ರ

ಬೆಂಗಳೂರು: ರಾಜ್ಯ ವಿಧಾನಪರಿಷತ್ತಿನ ನಾಲ್ಕು ಕ್ಷೇತ್ರಗಳಿಗೆ ಅ.23 ದ್ವೈವಾರ್ಷಿಕ ಚುನಾವಣೆಯ ಹಿನ್ನೆಲೆಯಲ್ಲಿ ಮಾದರಿ ನೀತಿ ಸಂಹಿತೆಯನ್ನು ಸಮರ್ಪಕವಾಗಿ ಜಾರಿಗೊಳಿಸುವುದು, ಬರ ಪರಿಹಾರ, ಕುಡಿಯುವ ನೀರಿನ ಪೂರೈಕೆ, ಪ್ರಜಾಸೇವಾ ಕಾರ್ಯಕ್ರಮ, ತುರ್ತು ಹಾಗೂ ಇತರೆ ಅಗತ್ಯ ಅಭಿವೃದ್ಧಿ ಮತ್ತು ಸಾರ್ವಜನಿಕ ಸೇವಾ ಕಾಮಗಾರಿಗಳಿಗೆ ಅನಗತ್ಯವಾಗಿ ಅಡ್ಡಿಯಾಗದಂತೆ ಸೂಕ್ತ ನಿರ್ದೇಶನ ನೀಡುವಂತೆ ಮುಖ್ಯ ಚುನಾವಣಾಧಿಕಾರಿಗೆ ಕೆಪಿಸಿಸಿ ಮಾಧ್ಯಮ ಮತ್ತು ಸಂವಹನ ವಿಭಾಗದ ಅಧ್ಯಕ್ಷ ರಮೇಶ್ ಬಾಬು ಪತ್ರ ಬರೆದಿದ್ದಾರೆ.
ಭಾರತದ ಚುನಾವಣಾ ಆಯೋಗವು 2016ರ ಡಿ.26ರಂದು ಹೊರಡಿಸಿರುವ ಸೂಚನೆಗಳ ಅನುಸಾರ, ಚುನಾವಣೆಗೆ ಒಳಪಡುವ ಸಂಬಂಧಿತ ಕ್ಷೇತ್ರಗಳು/ಜಿಲ್ಲೆಗಳಲ್ಲಿ ಮಾದರಿ ನೀತಿ ಸಂಹಿತೆ ಅನ್ವಯವಾಗುತ್ತದೆ. ಆದರೆ ಕೆಲವು ಜಿಲ್ಲೆಗಳಲ್ಲಿ ಕೆಲವು ಅಧಿಕಾರಿಗಳು ಮಾದರಿ ನೀತಿ ಸಂಹಿತೆಯನ್ನು ಅತಿಯಾದ ವ್ಯಾಪ್ತಿಯಲ್ಲಿ ಅರ್ಥೈಸಿಕೊಂಡು, ಸರಕಾರದ ಬಹುತೇಕ ಎಲ್ಲ ಸಾಮಾನ್ಯ ಆಡಳಿತಾತ್ಮಕ ಹಾಗೂ ಸಾರ್ವಜನಿಕ ಸೇವಾ ಚಟುವಟಿಕೆಗಳನ್ನೂ ನಿಷೇಧಿತವೆಂದು ಪರಿಗಣಿಸುತ್ತಿರುವುದು ವರದಿಯಾಗಿದೆ ಎಂದು ಅವರು ಗಮನ ಸೆಳೆದಿದ್ದಾರೆ.
ಇದರ ಪರಿಣಾಮವಾಗಿ ಬರ ಪರಿಹಾರ ಕ್ರಮಗಳು, ಕುಡಿಯುವ ನೀರಿನ ವ್ಯವಸ್ಥೆಗಳು, ಪ್ರಜಾಸೇವಾ ಕಾರ್ಯಕ್ರಮಗಳು, ತುರ್ತು ಕಾಮಗಾರಿಗಳು ಹಾಗೂ ಅಗತ್ಯ ಸಾರ್ವಜನಿಕ ಸೇವಾ ಚಟುವಟಿಕೆಗಳು ಕೂಡ ಮಾದರಿ ನೀತಿ ಸಂಹಿತೆಯ ಹೆಸರಿನಲ್ಲಿ ವಿಳಂಬವಾಗುತ್ತಿವೆ ಅಥವಾ ಸ್ಥಗಿತಗೊಳ್ಳುತ್ತಿವೆ ಎಂದು ರಮೇಶ್ ಬಾಬು ತಿಳಿಸಿದ್ದಾರೆ.
ಬರ ಪರಿಸ್ಥಿತಿ ಹಾಗೂ ಕುಡಿಯುವ ನೀರಿನ ತೀವ್ರ ಅಗತ್ಯವಿರುವ ಸಂದರ್ಭದಲ್ಲಿ ಕೇವಲ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದೆ ಎಂಬ ಕಾರಣಕ್ಕೆ ಟ್ಯಾಂಕರ್‍ಗಳ ಮೂಲಕ ಅಥವಾ ಇತರೆ ವ್ಯವಸ್ಥೆಗಳ ಮೂಲಕ ತುರ್ತು ಕುಡಿಯುವ ನೀರಿನ ಪೂರೈಕೆ, ಕುಡಿಯುವ ನೀರಿನ ಮೂಲಸೌಕರ್ಯ ಹಾಗೂ ನೀರು ಪೂರೈಕೆ ವ್ಯವಸ್ಥೆಗಳ ದುರಸ್ತಿ ಮತ್ತು ನಿರ್ವಹಣೆ, ಬರ ಪರಿಹಾರ ಹಾಗೂ ಬರ ಪರಿಸ್ಥಿತಿ ನಿವಾರಣೆಗೆ ಸಂಬಂಧಿಸಿದ ಕ್ರಮಗಳನ್ನು ಕೈಗೊಳ್ಳಲು ಅನಗತ್ಯ ವಿಳಂಬ ಮಾಡಬಾರದು ಎಂದು ಅವರು ಕೋರಿದ್ದಾರೆ.
ನೀರಿನ ಕೊರತೆ ಹಾಗೂ ಇತರೆ ಪ್ರಕೃತಿ ವಿಕೋಪಗಳಿಗೆ ಸಂಬಂಧಿಸಿದ ತುರ್ತು ಕ್ರಮಗಳು, ಅಗತ್ಯ ಸಾರ್ವಜನಿಕ ಆರೋಗ್ಯ ಮತ್ತು ನೈರ್ಮಲ್ಯಕ್ಕೆ ಸಂಬಂಧಿಸಿದ ಕ್ರಮಗಳು ಮತ್ತು ಪ್ರಜಾಸೇವಾ ಕಾರ್ಯಕ್ರಮ, ಅಗತ್ಯ ಅನುಮೋದನೆಗಳನ್ನು ಪಡೆದು ಈಗಾಗಲೇ ಸ್ಥಳದಲ್ಲಿ ಪ್ರಾರಂಭಗೊಂಡಿರುವ ಕಾಮಗಾರಿಗಳು, ಆಡಳಿತಾತ್ಮಕ, ತಾಂತ್ರಿಕ ಮತ್ತು ಆರ್ಥಿಕ ಅನುಮೋದನೆಗಳನ್ನು ಈಗಾಗಲೇ ಪಡೆದುಕೊಂಡಿರುವ ಹಾಗೂ ಚುನಾವಣಾ ಆಯೋಗವು ನಿಗದಿಪಡಿಸಿರುವ ಷರತ್ತುಗಳಿಗೆ ಅನುಗುಣವಾಗಿರುವ ಕಾಮಗಾರಿಗಳಿಗೆ ಅಡ್ಡಿಪಡಿಸಬಾರದು ಎಂದು ಅವರು ಮನವಿ ಮಾಡಿದ್ದಾರೆ.
ಈಗಾಗಲೇ ಪೂರ್ಣಗೊಂಡಿರುವ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಅನ್ವಯಿಸುವ ನಿಯಮಗಳ ಪ್ರಕಾರ ಬಿಡುಗಡೆ ಮಾಡಬೇಕಾದ ಪಾವತಿಗಳು, ಆಡಳಿತದ ಸಾಮಾನ್ಯ ಕಾರ್ಯನಿರ್ವಹಣೆಗೆ ಅಗತ್ಯವಿರುವ ಶಾಸನಬದ್ಧ ಹಾಗೂ ಅತ್ಯಾವಶ್ಯಕ ಸರಕಾರಿ ಸೇವೆಗಳು ಮತ್ತು ಚುನಾವಣೆಗೆ ಸಂಬಂಧಿಸಿದ ಯಾವುದೇ ಹೊಸ ಘೋಷಣೆ, ಪ್ರಲೋಭನೆ, ಪ್ರಚಾರ ಅಥವಾ ಮತದಾರರ ಮೇಲೆ ಪ್ರಭಾವ ಬೀರುವ ಉದ್ದೇಶವನ್ನು ಹೊಂದಿರದ ಇತರೆ ಅಗತ್ಯ ಸಾರ್ವಜನಿಕ ಹಾಗೂ ಅಭಿವೃದ್ಧಿ ಕಾಮಗಾರಿಗಳು ಅನಗತ್ಯವಾಗಿ ವಿಳಂಬಗೊಳಿಸಬಾರದು ಅಥವಾ ಸ್ಥಗಿತಗೊಳಿಸಬಾರದು ಎಂದು ರಮೇಶ್ ಬಾಬು ಮನವಿ ಮಾಡಿದ್ದಾರೆ.
ಚುನಾವಣೆ ನಡೆಯುವ ವ್ಯಾಪ್ತಿಯಲ್ಲಿ ಮತದಾರರ ಮೇಲೆ ಪ್ರಭಾವ ಬೀರುವ ಅಥವಾ ಯಾವುದೇ ರಾಜಕೀಯ ಪಕ್ಷ ಅಥವಾ ಅಭ್ಯರ್ಥಿಗೆ ಅನ್ಯಾಯವಾದ ಅನುಕೂಲ ಒದಗಿಸುವ ಸಾಧ್ಯತೆಯಿರುವ ಚಟುವಟಿಕೆಗಳಿಗೆ ಮಾದರಿ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಅನುಸರಿಸುವುದು ಅಗತ್ಯವಾಗಿದೆ. ಆದುದರಿಂದ ಎಲ್ಲ ಜಿಲ್ಲೆಗಳಲ್ಲಿಯೂ ಜಿಲ್ಲಾ ಚುನಾವಣಾಧಿಕಾರಿಗಳು/ಉಪ ಆಯುಕ್ತರು ಹಾಗೂ ಇತರೆ ಸಂಬಂಧಿತ ಅಧಿಕಾರಿಗಳಿಗೆ ಸ್ಪಷ್ಟ ಮತ್ತು ಏಕರೂಪದ ನಿರ್ದೇಶನಗಳನ್ನು ನೀಡುವುದು ಅತ್ಯಂತ ಅಗತ್ಯವಾಗಿದೆ. ಇದರಿಂದ ಜಿಲ್ಲೆಯಿಂದ ಜಿಲ್ಲೆಗೆ ವಿಭಿನ್ನ ರೀತಿಯ ವ್ಯಾಖ್ಯಾನ ಅಥವಾ ಅನುಷ್ಠಾನ ನಡೆಯುವುದನ್ನು ತಪ್ಪಿಸಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಇತ್ತೀಚಿಗೆ ಚಿತ್ರದುರ್ಗದ ಜಿಲ್ಲಾಧಿಕಾರಿಗಳು ಮಾದರಿ ನೀತಿ ಸಂಹಿತೆಯ ಹೆಸರಿನಲ್ಲಿ ಪೌರಾಡಳಿತ ಸಚಿವ ಬಾಲಕೃಷ್ಣ ನಡೆಸಲು ಉದ್ದೇಶಿಸಿದ್ದ ‘ಪ್ರಜಾಸೇವಾ’ ಸರಕಾರಿ ಕಾರ್ಯಕ್ರಮಕ್ಕೆ ಅನುಮತಿ ನೀಡಿಲ್ಲ ಎಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ, ಚುನಾವಣಾ ಆಯೋಗವು ಈ ವಿಷಯವನ್ನು ಪರಿಶೀಲಿಸಿ, ಸಂಬಂಧಪಟ್ಟ ಜಿಲ್ಲಾಧಿಕಾರಿಗಳ ಕ್ರಮದ ಕುರಿತು ಸೂಕ್ತ ವಿಚಾರಣೆ ನಡೆಸುವಂತೆ ರಮೇಶ್ ಬಾಬು ಕೋರಿದ್ದಾರೆ.






