ವಿಧಾನ ಪರಿಷತ್ ಅಧಿವೇಶನ| ‘ಸದನದ ನಿಯಮಾವಳಿಗಳ ಪುಸ್ತಕ’ವನ್ನೇ ಹರಿದು ಹಾಕಿದ ಛಲವಾದಿ ನಾರಾಯಣಸ್ವಾಮಿ

ಬೆಂಗಳೂರು, ಜ.28: ‘ನಿಯಮಾವಳಿಗಳಂತೆ ಸದನವು ನಡೆಯುತ್ತಿಲ್ಲ’ ಎಂದು ಆರೋಪಿಸಿ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಪರಿಷತ್ತಿನ ನಿಯಮಾವಳಿಗಳ ಪುಸ್ತಕವನ್ನೇ ಹರಿದು ಹಾಕಿ ಆಕ್ರೋಶ ವ್ಯಕ್ತಪಡಿಸಿದ ಪ್ರಸಂಗ ನಡೆಯಿತು. ಇದನ್ನು ಖಂಡಿಸಿ ಆಡಳಿತ ಪಕ್ಷದ ಸದಸ್ಯರು ವಿಪಕ್ಷ ಸದಸ್ಯರಿಗೆ ಧಿಕ್ಕಾರ ಕೂಗಿದರು.
ಬುಧವಾರ ಮಧ್ಯಾಹ್ನ ಕಲಾಪ ಆರಂಭವಾಗುತ್ತಿದ್ದಂತೆ ಛಲವಾದಿ ನಾರಾಯಣಸ್ವಾಮಿ ಎದ್ದು ನಿಂತು, ‘ನಮ್ಮ ಬೇಡಿಕೆ ಈಡೇರಿಸಬೇಕು. ಸದನವು ಸರಿದಾರಿಯಲ್ಲಿ ಹೋಗಲು ಪ್ರಯತ್ನ ಮಾಡುತ್ತಿದ್ದೇವೆ. ಸದನ ನ್ಯಾಯಬದ್ಧವಾಗಿ ನಡೆಯಬೇಕು. ಆದರೆ, ಈಗ ನ್ಯಾಯಬದ್ಧವಾಗಿ ನಡೆಯುತ್ತಿದೆಯೇ? ನಿಯಮಾವಳಿಗಳ ಪುಸ್ತಕಕ್ಕೆ ಬೆಲೆಯೇ ಇಲ್ಲವೇ? ಹಾಗದರೆ, ನಿಯಮಾವಳಿಗಳ ಪುಸ್ತಕವನ್ನು ಹರಿದು ಬಿಸಾಕಿ’ ಎಂದು ಪುಸ್ತಕವನ್ನು ಹರಿದು ಗಾಳಿಗೆ ತೂರಿದರು.
ಈ ವೇಳೆ ಆಡಳಿತ ಪಕ್ಷದ ಸದಸ್ಯರು ಎದ್ದು ನಿಂತು ಛಲವಾದಿ ನಾರಾಯಣಸ್ವಾಮಿ ಅವರ ವರ್ತನೆಯನ್ನು ತೀವ್ರವಾಗಿ ಖಂಡಿಸಿದರು. ವಿರೋಧ ಪಕ್ಷದ ಸದಸ್ಯರಿಗೆ ಧಿಕ್ಕಾರ ಕೂಗಿದರು. ಈ ವೇಳೆ ಧರಣಿಯಲ್ಲಿದ್ದ ಸದಸ್ಯರನ್ನು ಹಾಗೂ ವಿಪಕ್ಷ ನಾಯಕರ ವರ್ತನೆಗೆ ಧಿಕ್ಕಾರ ಕೂಗುತ್ತಿದ್ದ ಆಡಳಿತ ಸದಸ್ಯರನ್ನು ನಿಯಂತ್ರಿಸಲು ಸಭಾಪತಿ ಬಸವರಾಜ ಹೊರಟ್ಟಿ ಹರಸಾಹಸಪಟ್ಟರು. ಸದನ ಹತೋಟಿಗೆ ಬಾರದ ಕಾರಣ ಸಭಾಪತಿಗಳು ಕಲಾಪವನ್ನು ಮುಂದೂಡಿದರು.





