ಕುಮಾರಸ್ವಾಮಿ ಪ್ರಕೃತಿ, ಪರಿಸರ ಉಳಿಸುವ ಬಗ್ಗೆ ಮಾತನಾಡಲಿ: ಈಶ್ವರ್ ಖಂಡ್ರೆ
ಪ್ರತಾಪ್ ಸಿಂಹ ವಿರುದ್ಧ ಸಿಎಂ ಷಡ್ಯಂತ್ರ ಆರೋಪಕ್ಕೆ ಸಚಿವ ತಿರುಗೇಟು

ಬೆಂಗಳೂರು: ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರು ಪ್ರಕೃತಿ, ಪರಿಸರ ಉಳಿಸುವ ಬಗ್ಗೆ ಮಾತನಾಡಬೇಕು. ಆದರೆ ಅವರು ಯಾಕೆ ಅಕ್ರಮ ಮರಗಳ ಕಡಿತಲೆ ಮಾಡಿದವರ ಪರವಾಗಿ ಮಾತನಾಡಿದ್ದಾರೋ ನನಗೆ ತಿಳಿಯುತ್ತಿಲ್ಲ ಎಂದು ಪರಿಸರ ಸಚಿವ ಈಶ್ವರ್ ಖಂಡ್ರೆ ಪ್ರತಿಕ್ರಿಯಿಸಿದ್ದಾರೆ.
126 ಮರಗಳ ಅಕ್ರಮ ಕಡಿತಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಮಾರಸ್ವಾಮಿ ಅವರು ನಿನ್ನೆ ಪತ್ರಿಕಾಗೋಷ್ಠಿಯಲ್ಲಿ ಮಾಡಿರುವ ಆರೋಪಗಳ ಕುರಿತಂತೆ ಪ್ರತಿಕ್ರಿಯಿಸಿರುವ ಖಂಡ್ರೆ, ಮಾಜಿ ಮುಖ್ಯಮಂತ್ರಿಗಳಿಗೆ ಮಾಹಿತಿಯ ಕೊರತೆ ಇದೆ ಎನಿಸುತ್ತದೆ. “ಮುಖ್ಯಮಂತ್ರಿಗಳೇ ಮರ ಕಡಿಸಿ ಪ್ರತಾಪಸಿಂಹ ಸೋದರನ ಜಾಗದಲ್ಲಿ ಹಾಕುವಂತೆ ಹೇಳಿದ್ದಾರೆ’’ ಎಂದು ಆರೋಪಿಸಿರುವುದು ಹಾಸ್ಯಾಸ್ಪದ ಎಂದು ಹೇಳಿದ್ದಾರೆ.
ಡಿ.16ರಂದು ಘಟನಾ ಸ್ಥಳಕ್ಕೆ ಭೇಟಿ ನೀಡಿ, ಮಹಜರು ಮಾಡಿದ್ದ ಬೇಲೂರು ತಹಶೀಲ್ದಾರ್ ಅವರು 300ಕ್ಕೂ ಹೆಚ್ಚು ಮರಗಳನ್ನು ಅನುಮತಿ ಇಲ್ಲದೆ ಅಕ್ರಮವಾಗಿ ಕಡಿಯಲಾಗಿದೆ. ಸರ್ಕಾರಿ ಜಾಗದಲ್ಲಿದ್ದ ಮರಗಳನ್ನೂ ಕಡಿದಿದ್ದಾರೆ. ಇದರಲ್ಲಿ ಬೀಟೆ, ಸಾಗುವಾನಿ, ಮಹಾಗನಿ ಮೊದಲಾದ ಲಕ್ಷಾಂತರ ರೂ. ಬೆಲೆಬಾಳುವ ಮರ ಕಡಿಯಲಾಗಿದೆ. 25 ಲೋಡ್ ಮರ ಇದೆ ಎಂದು ಹೇಳಿದ್ದಾರೆ. ಕತ್ತರಿಸಿದ ಮರಗಳ ರಾಶಿ ಇರುವ ವಿಡಿಯೋ ಮತ್ತು ಅವರ ಹೇಳಿಕೆ ಮಾಧ್ಯಮಗಳಲ್ಲಿ ಪ್ರಕಟವಾಗಿದೆ. ನೂರಾರು ಮರಗಳನ್ನು ಕಡಿದಿರುವುದು ಮೇಲ್ನೋಟಕ್ಕೇ ಕಾಣುತ್ತಿದೆ. ವಸ್ತು ಸ್ಥಿತಿ ಹೀಗಿರುವಾಗ ಕುಮಾರಸ್ವಾಮಿ ಅವರ ಪರವಾಗಿ ಯಾಕೆ ಮಾತನಾಡುತ್ತಿದ್ದಾರೆ ಎಂಬುದು ತಿಳಿಯದಾಗಿದೆ ಎಂದು ಹೇಳಿದ್ದಾರೆ.
ಅಕ್ರಮ ಮರ ಕಡಿತಲೆ ಆದಾಗ ವೃಕ್ಷ ಸಂರಕ್ಷಣಾ ಕಾಯಿದೆ ಅಡಿಯಲ್ಲಿ ಭೂಮಿಯ ಮಾಲಿಕರ ವಿರುದ್ಧ ನಮ್ಮ ಇಲಾಖೆಯ ಅಧಿಕಾರಿಗಳು ಡಿ.16ರಂದು ಎಫ್.ಐ.ಆರ್ ದಾಖಲಿಸಿದ್ದಾರೆ. 2 ದಿನಗಳ ಬಳಿಕ ಈ ಭೂಮಿಯಲ್ಲಿ ಶುಂಠಿ ಬೆಳೆಯಲು ವಿಕ್ರಂ ಸಿಂಹ ಎಂಬುವವರು ಕರಾರು ಮಾಡಿಕೊಂಡಿದ್ದಾರೆ ಎಂಬ ಅಂಶ ಬೆಳಕಿಗೆ ಬಂದಿದೆ. ಅವರು ಸಂಸದರ ಸೋದರರೋ ಅಲ್ಲವೋ ಎಂಬುದು ಮುಖ್ಯವಲ್ಲ. ಆ ವಿಷಯ ತಮಗೆ ತಿಳಿದೂ ಇರಲಿಲ್ಲ ಎಂದು ಹೇಳಿದ್ದಾರೆ.
ಭೂ ಮಾಲೀಕರೊಂದಿಗೆ 11.12.2023ರಂದು ಅಗ್ರಿಮೆಂಟ್ ಆಗಿದೆ ಬಳಿಕ ಆ ಜಮೀನಿನಲ್ಲಿ ಮತ್ತು ಪಕ್ಕದ ಗೋಮಾಳದಲ್ಲಿ ಅಕ್ರಮವಾಗಿ ಮರ ಕಡಿಯಲಾಗಿದೆ. ಯಾವುದೇ ಬಡ ರೈತನಿಗೆ ನೂರಾರು ಮರ ಕಡಿಯುವ ಶಕ್ತಿ, ಧೈರ್ಯ ಇರುತ್ತದೆಯೇ? ಪ್ರಭಾವಿಗಳು ಮಾತ್ರ ಇಂತಹ ಕೆಲಸ ಮಾಡಲು ಸಾಧ್ಯ ಎಂದು ನುಡಿದರು.
ಸ್ವತಃ ರೈತ ಕುಟುಂಬದಿಂದ ಬಂದ ಕುಮಾರಸ್ವಾಮಿ ಅವರನ್ನೇ ಕೇಳುತ್ತೇನೆ. ಕಾಡಿನಂತೆ ದಟ್ಟವಾದ ಮರಗಳು ಇರುವ ಸ್ಥಳದಲ್ಲಿ, ನೆರಳಿನಿಂದ ಕೂಡಿದ ನೂರಾರು ಮರ ಬೇರು ಬಿಟ್ಟಿರುವ ಜಮೀನಿನಲ್ಲಿ ಶುಂಠಿ ಬೆಳೆಯಲು ಸಾಧ್ಯವೇ ಎಂಬ ಬಗ್ಗೆ ಉತ್ತರ ನೀಡಲಿ ಎಂದು ಕೋರಿದ್ದಾರೆ.
ವಿರೋಧಿಗಳ ಧ್ವನಿ ಅಡಗಿಸಲು ಕಾಂಗ್ರೆಸ್ ನವರು ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಕುಮಾರಸ್ವಾಮಿ ಸುಖಾ ಸುಮ್ಮನೆ ಆರೋಪಿಸಿದ್ದಾರೆ. ನೂರಾರು ಮರಗಳು ಧರೆಗೆ ಉರುಳಿರುವ ದೃಶ್ಯ ನೋಡಿದರೆ ಕಣ್ಣೀರು ಬರತ್ತೆ. ಒಂದು ಮರ ಬೆಳೆಸಲು ಹಲವು ವರ್ಷ ಬೇಕು. ನಾವು ರಾಜ್ಯದ ಹಸಿರು ಹೊದಿಕೆ ಹೆಚ್ಚಿಸಲು 5 ಕೋಟಿ ಗಿಡ ನೆಡುವ ಕಾರ್ಯಕ್ರಮ ಹಾಕಿಕೊಂಡಿದ್ದೇವೆ ಎಂದರು.
ಕೆಲವರು ತಮ್ಮ ಸ್ವಾರ್ಥಕ್ಕಾಗಿ ಬಡವರಿಗೆ 75 ಸಾವಿರ, 1 ಲಕ್ಷ ರೂ. ಗುತ್ತಿಗೆ ಹಣದ ಆಸೆ ತೋರಿಸಿ ಅಲ್ಲಿರುವ ಲಕ್ಷಾಂತರ ರೂ. ಮೌಲ್ಯದ ಮರ ಕಡಿಯುತ್ತಿದ್ದಾರೆ. ಶುಂಠಿ ಬೆಳೆ ಹೆಸರಲ್ಲಿ ಮರ ಕಡಿಯುವ ಮಾಫಿಯಾ ರಾಜ್ಯದಲ್ಲಿ ಇತ್ತೀಚೆಗೆ ಹೆಚ್ಚಾಗುತ್ತಿದೆ. ಇದಕ್ಕೆ ಕಡಿವಾಣ ಹಾಕದಿದ್ದರೆ ಅರಣ್ಯವೇ ಉಳಿಯುವುದಿಲ್ಲ. ಇಂತಹ ಅಕ್ರಮ ಮಾಡುವವರ ಪರ ಯಾರೂ ಬ್ಯಾಟಿಂಗ್ ಮಾಡುವುದು ಸರಿಯಲ್ಲ. ಬಿಜೆಪಿಯವರೇ ಪ್ರತಾಪ ಸಿಂಹ ಪರ ನಿಲ್ಲದಿರುವಾಗ ಎಚ್.ಡಿ.ಕೆ. ಏಕೆ ಅವರ ಪರ ವಕಾಲತ್ತು ವಹಿಸುತ್ತಿದ್ದಾರೆ ಎಂಬುದು ಅಚ್ಚರಿ ತಂದಿದೆ ಎಂದು ಈಶ್ವರ ಖಂಡ್ರೆ ಹೇಳಿದ್ದಾರೆ.
ಅಮಾನತು ಖಂಡ್ರೆ ಸಮರ್ಥನೆ:
ಇನ್ನು ಅಧಿಕಾರಿಗಳ ಅಮಾನತಿನ ಬಗ್ಗೆ ವಿವರಣೆ ನೀಡಿ, ಅಮಾನತು ಆದವರಲ್ಲಿ ಎಲ್ಲ ಜಾತಿ, ಸಮುದಾಯದವರೂ ಇದ್ದಾರೆ. ಆದರೆ ಕುಮಾರಸ್ವಾಮಿ ಅವರು ಒಂದು ಜಾತಿಯ ಪ್ರಸ್ತಾಪ ಮಾಡಿರುವುದು ಸರಿಯಲ್ಲ. ಎಲ್ಲ ಜಾತಿ, ಸಮುದಾಯದಲ್ಲೂ ದಕ್ಷ ಅಧಿಕಾರಿಗಳಿರುತ್ತಾರೆ, ಭ್ರಷ್ಟರೂ ಇರುತ್ತಾರೆ. ಈ ರೀತಿ ಜಾತಿ ಪ್ರಸ್ತಾಪ ಮಾಡಿರುವುದು ದುರ್ದೈವ ಎಂದು ಈಶ್ವರ ಖಂಡ್ರೆ ಅಭಿಪ್ರಾಯಪಟ್ಟಿದ್ದಾರೆ.







