ಕಾರು ಚಾಲಕನ ಆತ್ಮಹತ್ಯೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಲು ಸಂಸದ ಡಾ.ಕೆ.ಸುಧಾಕರ್ ಸಿದ್ದರಿದ್ದಾರೆಯೇ?: ಶಾಸಕ ಪ್ರದೀಪ್ ಈಶ್ವರ್

ಬೆಂಗಳೂರು: ‘ಚಿಕ್ಕಬಳ್ಳಾಪುರದ ಕಾರು ಚಾಲಕನ ಆತ್ಮಹತ್ಯೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಲು ಸಂಸದ ಡಾ.ಕೆ.ಸುಧಾಕರ್ ಸಿದ್ದರಿದ್ದಾರೆಯೇ?. ಕೇಂದ್ರದಲ್ಲಿ ಅವರದೇ ಪಕ್ಷ ಅಧಿಕಾರದಲ್ಲಿದ್ದು ಸಿಬಿಐ ತನಿಖೆಗೆ ವಹಿಸಲಿ, ಅದಕ್ಕೂ ಮೊದಲು ಸುಧಾಕರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿ’ ಎಂದು ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಸವಾಲು ಹಾಕಿದ್ದಾರೆ.
ಶುಕ್ರವಾರ ಇಲ್ಲಿನ ಫ್ರೀಡಂ ಪಾರ್ಕ್‍ನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಕಾರು ಚಾಲಕ ಬಾಬು ಡೆತ್‍ನೋಟ್‍ನಲ್ಲಿ ನನ್ನ ಸಾವಿಗೆ ಸಂಸದರೇ ಕಾರಣ ಎಂದು ಬರೆದಿದ್ದಾನೆ. ಆ ಹಿನ್ನೆಲೆಯಲ್ಲಿ ಪೊಲೀಸರು ಕ್ರಮ ಕೈಗೊಂಡಿದ್ದು, ಆ ವ್ಯಕ್ತಿ ದಲಿತ ಸಮುದಾಯಕ್ಕೆ ಸೇರಿದ್ದಾನೆ. ಪದೇ ಪದೇ ಹಣಕ್ಕಾಗಿ ಪೀಡಿಸುತ್ತಿದ್ದರಿಂದ ಮನನೊಂದು ಒತ್ತಡದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾನೆ’ ಎಂದು ಆರೋಪಿಸಿದ್ದಾರೆ.
ಮೃತ ವ್ಯಕ್ತಿ ಬಾಬು ಮನೆಯವರು ದೂರು ನೀಡಿದ್ದು, ಎಸ್‍ಸಿ ಎಸ್‍ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಕೆಲಸ ಕೊಡಿಸುವ ನೆಪದಲ್ಲಿ ಹಣವನ್ನು ಪಡೆದು ವಂಚನೆ ಮಾಡಲಾಗಿದೆ ಎಂಬ ಆರೋಪವಿದೆ. ಒಬ್ಬರು-ಇಬ್ಬರ ಹತ್ತಿರ ‘ವ್ಯವಹಾರ’ ನಡೆಸಿದರೆ ಅವರು ಯಾರು ಎಂದು ಗೊತ್ತಿರುತ್ತದೆ. ನಿತ್ಯ ನೂರಾರು ಜನರನ್ನು ಡೀಲ್ ಮಾಡುವವರಿಗೆ ಆತ್ಮಹತ್ಯೆ ಮಾಡಿಕೊಂಡ ಬಾಬು ಹೇಗೆ ನೆನಪಿರಲು ಸಾಧ್ಯ? ಎಂದು ಪ್ರದೀಪ್ ಈಶ್ವರ್, ಡಾ.ಕೆ.ಸುಧಾಕರ್ ಗೆ ತಿರುಗೇಟು ನೀಡಿದರು.
ಮೃತಪಟ್ಟ ವ್ಯಕ್ತಿಯ ಸಾವಿಗೆ ಸಂಸದರೆ ಕಾರಣ ಎಂದು ಡೆತ್‍ನೋಟ್‍ನಲ್ಲಿ ಉಲ್ಲೇಖಿಸಲಾಗಿದೆ. ಆದರೆ, ಅವರು (ಸಂಸದರು) ನಮ್ಮನ್ನು ಏಕೆ ಮಧ್ಯದಲ್ಲಿ ತರುತ್ತಾರೇ?. ಆತ್ಮಹತ್ಯೆ ಶರಣಾದ ವ್ಯಕ್ತಿಯೇ ಸಂಸದರ ಹೆಸರು ಉಲ್ಲೇಖಿಸಿದ್ದಾನೆ. ಡೆತ್‍ನೋಟ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಅಲ್ಲದೆ, ಆತನ ಪತ್ನಿಯೂ ದೂರು ನೀಡಿದ್ದಾರೆ ಎಂದು ಈಶ್ವರ್ ತಿಳಿಸಿದರು.







