ಪ್ರವಾದಿ(ಸ.ಅ)ರ ಜನ್ಮದಿನವು ಪ್ರೀತಿಯ ಸಂದೇಶ ಸಾರುವ ದಿನವಾಗಲಿ: ಸಚಿವ ಯು.ಟಿ. ಖಾದರ್

ಬೆಂಗಳೂರು: ಮೀಲಾದುನ್ನಬಿ ಸಂತೋಷ ಮತ್ತು ಸಂಭ್ರಮದ ಈ ಪವಿತ್ರ ದಿನದಂದು ಸಮಸ್ತ ಕನ್ನಡಿಗರಿಗೆ ಮೀಲಾದುನ್ನಬಿಯ ಹಾರ್ದಿಕ ಶುಭಾಶಯಗಳು. ಪ್ರವಾದಿ ಮುಹಮ್ಮದ್ (ಸ.ಅ) ರವರ ಬದುಕಿನ ಮಹತ್ವದ ಮೌಲ್ಯಗಳಾದ ಕರುಣೆ, ಸಂಯಮ, ಶಿಸ್ತು, ನೆರೆಯವರ ಹಕ್ಕಿನ ಗೌರವ, ದುರ್ಬಲರ ಕಾಳಜಿ ಹಾಗೂ ಸಮಾಜಕ್ಕೆ ಒಳಿತು ಮಾಡುವ ಮನೋಭಾವವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳೋಣ ಎಂದು ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ.
ಪ್ರವಾದಿ (ಸ.ಅ) ರವರನ್ನು ಗೌರವಿಸುವ ಅತ್ಯುತ್ತಮ ಮಾರ್ಗ ಅವರ ಮೌಲ್ಯಗಳನ್ನು ನಮ್ಮ ನಡವಳಿಕೆಯಲ್ಲಿ ಪಾಲಿಸುವುದಾಗಿದೆ. ಈ ದಿನದ ನಮ್ಮ ಆಚರಣೆಗಳು ಜನಸಾಮಾನ್ಯರಿಗೆ ತೊಂದರೆ ಉಂಟುಮಾಡದಿರಲಿ. ರಸ್ತೆಯಲ್ಲಿ ಸಂಚರಿಸುವವರಿಗೆ ಅಡಚಣೆಯಾಗದಿರಲಿ. ವಿದ್ಯಾರ್ಥಿಗಳ ಓದಿಗೆ ಹಾಗೂ ವೃದ್ಧರ ವಿಶ್ರಾಂತಿಗೆ ಭಂಗವಾಗದಂತೆ, ಶಾಂತಿ ಮತ್ತು ಸೌಹಾರ್ದತೆಯಿಂದ ಮೀಲಾದುನ್ನಬಿಯನ್ನು ಆಚರಿಸೋಣ ಎಂದು ಅವರು ಕರೆ ನೀಡಿದ್ದಾರೆ.
ಪ್ರವಾದಿ ಮುಹಮ್ಮದ್ (ಸ.ಅ) ರವರ ಜೀವನ ಸಂದೇಶ ಮತ್ತು ಮಾನವೀಯ ಮೌಲ್ಯಗಳನ್ನು ಜನರಿಗೆ ಪರಿಚಯಿಸುವ ಮೂಲಕ ಪ್ರೀತಿ, ಸಾಮರಸ್ಯ ಮತ್ತು ಭ್ರಾತೃತ್ವದ ಸಮಾಜವನ್ನು ಕಟ್ಟೋಣ. ನೆಮ್ಮದಿಯ ನಾಡು, ಸೌಹಾರ್ದಯುತ ಕರ್ನಾಟಕ, ಬಲಿಷ್ಠ ದೇಶ ನಮ್ಮ ಸಂಕಲ್ಪವಾಗಲಿ ಎಂದು ಯು.ಟಿ.ಖಾದರ್ ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.




