ಧರ್ಮಸ್ಥಳ ಸಾಮೂಹಿಕ ಸಮಾಧಿ ಆರೋಪ ಪ್ರಕರಣ: ಎಸ್ಐಟಿ ರಚನೆ ಮಾಡುವಂತೆ ರಾಜ್ಯ ಸರಕಾರಕ್ಕೆ ನಿರ್ದೇಶನ ನೀಡಲು ರಾಹುಲ್ ಗಾಂಧಿಗೆ ಪತ್ರ

ದೂರುದಾರ / ಎಂ. ನಾಗಮಣಿ / ರಾಹುಲ್ ಗಾಂಧಿ
ಬೆಂಗಳೂರು: ರಾಜ್ಯದಲ್ಲಿ ಸಂಚಲನವನ್ನುಂಟು ಮಾಡುತ್ತಿರುವ ಧರ್ಮಸ್ಥಳ ಸಾಮೂಹಿಕ ಸಮಾಧಿ ಆರೋಪಕ್ಕೆ ಸಂಬಂಧಿಸಿದಂತೆ ನ್ಯಾಯ ಒದಗಿಸಲು, ಸಾಂವಿಧಾನಿಕ ಮೌಲ್ಯಗಳನ್ನು ಎತ್ತಿಹಿಡಿಯುವ ಸಲುವಾಗಿ ವಿಶೇಷ ತನಿಖಾ ತಂಡವನ್ನು(ಎಸ್ಐಟಿ) ರಚನೆ ಮಾಡಲು ರಾಜ್ಯ ಸರಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಸಾಮಾಜಿಕ ಕಾರ್ಯಕರ್ತೆ ಎಂ. ನಾಗಮಣಿ ಲೋಕಸಭೆಯ ವಿರೋಧ ಪಕ್ಷದ ನಾಯಕ ಹಾಗೂ ಕಾಂಗ್ರೆಸ್ನ ಮುಖಂಡ ರಾಹುಲ್ ಗಾಂಧಿ ಅವರನ್ನು ಒತ್ತಾಯಿಸಿದ್ದಾರೆ.
ಶುಕ್ರವಾರ ರಾಹುಲ್ ಗಾಂಧಿಗೆ ಪತ್ರ ಬರೆದಿರುವ ಅವರು, ಒಬ್ಬ ಉನ್ನತ ಶ್ರೇಣಿಯ, ಪ್ರಾಮಾಣಿಕ ಮತ್ತು ಭ್ರಷ್ಟಾಚಾರರಹಿತ ಐಪಿಎಸ್ ಅಧಿಕಾರಿಯ ನೇತೃತ್ವದಲ್ಲಿ, ಒಬ್ಬ ಹಾಲಿ ಅಥವಾ ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಮೇಲ್ವಿಚಾರಣೆಯಲ್ಲಿ ಎಸ್ಐಟಿಯನ್ನು ರಚಿಸಿ, ಸಂಪೂರ್ಣ ಪಾರದರ್ಶಕ ಮತ್ತು ತಟಸ್ಥ ತನಿಖೆಯನ್ನು ನಡೆಸಬೇಕು. ದೂರುದಾರನ ಆರೋಪಗಳನ್ನು ಪರಿಶೀಲಿಸಲು ಮತ್ತು ಸತ್ಯವನ್ನು ಬಯಲಿಗೆಳೆಯಲು ಡಿಎನ್ಎ ಮತ್ತು ಡಿಜಿಟಲ್ ಫೊರೆನ್ಸಿಕ್ ವಿಶ್ಲೇಷಣೆಯನ್ನು ನಡೆಸಲು ತನಿಖಾ ತಂಡದಲ್ಲಿ ಫೊರೆನ್ಸಿಕ್ ತಜ್ಞರನ್ನು ಒಳಗೊಂಡಿರಬೇಕು ಎಂದು ಆಗ್ರಹಿಸಿದ್ದಾರೆ.
ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು, ಅದರಲ್ಲಿ ಅತ್ಯಾಚಾರಕ್ಕೊಳಗಾಗಿ ಕೊಲೆಯಾದ ಮಹಿಳೆಯರ ಮತ್ತು ಅಪ್ರಾಪ್ತ ಬಾಲಕಿಯರ ಶವಗಳನ್ನು ವಿಲೇವಾರಿ ಮಾಡಲು ಒತ್ತಾಯಿಸಲ್ಪಟ್ಟಿದ್ದಾಗಿ ವ್ಯಕ್ತಿಯೊಬ್ಬರು ದೂರು ದಾಖಲಿಸಿದ್ದಾರೆ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಪ್ರಭಾವಿ ವ್ಯಕ್ತಿಗಳಿಂದ ಈ ಭೀಕರ ಕೃತ್ಯಗಳು ನಡೆದಿವೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಘಟನೆಗಳನ್ನು ಸುಮಾರು ಎರಡು ದಶಕಗಳವರೆಗೆ ಮರೆಮಾಚಲಾಗಿತ್ತು. ದೂರುದಾರನು ಅಪರಾಧ ಭಾವನೆ ಮತ್ತು ತನ್ನ ಜೀವಕ್ಕೆ ಭಯದಿಂದ 2014ರಲ್ಲಿ ಪರಾರಿಯಾಗಿದ್ದನು. ಆದರೆ 2025ರಲ್ಲಿ ಸಾಕ್ಷ್ಯಗಳೊಂದಿಗೆ ಮರಳಿ ಬಂದು, ಶವಗಳ ಎಲುಬುಗಳನ್ನು ಒದಗಿಸಿದ್ದಾನೆ ಮತ್ತು ನೇತ್ರಾವತಿ ನದಿಯ ಬಳಿಯ ಸಮಾಧಿ ಸ್ಥಳಗಳನ್ನು ಗುರುತಿಸಲು ಸಿದ್ಧನಿದ್ದಾನೆ ಎಂದು ಎಂ. ನಾಗಮಣಿ ಹೇಳಿದ್ದಾರೆ.
ಇನ್ನು ಪ್ರಕರಣಕ್ಕೆ ಸಂಬಂಧಿಸಿ ದೂರುದಾರನ ಗೌಪ್ಯ ಹೇಳಿಕೆ ಮತ್ತು ವೈಯಕ್ತಿಕ ವಿವರಗಳನ್ನು ಸೋರಿಕೆ ಮಾಡಿದ ಪೊಲೀಸ್ ಅಧಿಕಾರಿಗಳ ವಿರುದ್ಧ ತಕ್ಷಣವೇ ಶಿಸ್ತುಕ್ರಮ ಮತ್ತು ಕಾನೂನು ಕ್ರಮಕೈಗೊಳ್ಳಬೇಕು. ಉತ್ಖನನ ಮತ್ತು ಸ್ಥಳ ಭೇಟಿಗಳ ವಿಳಂಬಕ್ಕೆ ಕಾರಣರಾದ ಅಧಿಕಾರಿಗಳನ್ನು ಜವಾಬ್ದಾರರನ್ನಾಗಿಸಬೇಕು. ಸಮಾಧಿ ಸ್ಥಳಗಳು ಸಾಕ್ಷ್ಯಗಳನ್ನು ಸಂರಕ್ಷಿಸಲು ನಿರ್ಣಾಯಕವಾಗಿದ್ದು, ಸಾಕ್ಷ್ಯಗಳ ಮತ್ತಷ್ಟು ನಾಶವನ್ನು ತಡೆಯಲು ಪೊಲೀಸರು ತಕ್ಷಣ ಕ್ರಮಕೈಗೊಳ್ಳುವಂತೆ ನಿರ್ದೇಶಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
‘ಧರ್ಮಸ್ಥಳ ಸಾಮೂಹಿಕ ಸಮಾಧಿ ಆರೋಪ ಪ್ರಕರಣವು ಭಾರತದ ಇತಿಹಾಸದಲ್ಲಿ ಮೊದಲ ಬಾರಿಗೆ ಕಂಡುಬಂದಿರುವಂತಹ ಪ್ರಕರಣವಾಗಿದ್ದು, ನಮ್ಮ ರಾಷ್ಟ್ರದ ನ್ಯಾಯ, ಸಮಾನತೆ ಮತ್ತು ಕಾನೂನಿನ ಆಡಳಿತದ ಬದ್ಧತೆಗೆ ಒಂದು ಪರೀಕ್ಷೆಯಾಗಿದೆ. ಹಾಗೆಯೇ ಒಂದು ಪವಿತ್ರ ಯಾತ್ರಾಸ್ಥಳದಲ್ಲಿ ಭೀಕರ ಅಪರಾಧಗಳ ವ್ಯವಸ್ಥಿತ ಮರೆಮಾಚುವಿಕೆಯನ್ನು ಬಹಿರಂಗಪಡಿಸುತ್ತದೆ. ಈ ಆರೋಪಗಳು ಮಾನವ ಹಕ್ಕುಗಳ ಗಂಭೀರ ಉಲ್ಲಂಘನೆಯನ್ನು, ವಿಶೇಷವಾಗಿ ದುರ್ಬಲ ಮಹಿಳೆಯರ, ಅಪ್ರಾಪ್ತರ ಮತ್ತು ದೀನದಲಿತರ ವಿರುದ್ಧ ಮತ್ತು ಪ್ರಭಾವಿ ಅಧಿಕಾರದ ದುರುಪಯೋಗದ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತುತ್ತವೆ. ಹೀಗಾಗಿ ದುರ್ಬಲರನ್ನು ರಕ್ಷಿಸಲು, ತಪ್ಪಿತಸ್ಥರನ್ನು ಶಿಕ್ಷಿಸಲು ಸರಕಾರವು ನಿರ್ಣಾಯಕವಾಗಿ ಕಾರ್ಯನಿರ್ವಹಿಸಬೇಕಿದೆ’
-ಎಂ. ನಾಗಮಣಿ, ಸಾಮಾಜಿಕ ಕಾರ್ಯಕರ್ತೆ







