ಪಹಣಿ ಜೊತೆಗೆ ಆಧಾರ್ ಜೋಡಿಸಿ: ಸಚಿವ ಕೃಷ್ಣ ಭೈರೇಗೌಡ

ಬೆಂಗಳೂರು: ನಕಲಿ ವಹಿವಾಟು ತಪ್ಪಿಸಿ ಆಸ್ತಿ ಮಾಲಕತ್ವವನ್ನು ಮತ್ತಷ್ಟು ಸುಭದ್ರಗೊಳಿಸಲು ಸಾರ್ವಜನಿಕರು ತಮ್ಮ ಪಹಣಿಯ ಜೊತೆಗೆ ಆಧಾರ್ ಜೋಡಣೆಗೊಳಿಸಬೇಕು ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಕರೆ ನೀಡಿದ್ದಾರೆ.
ಮಂಗಳವಾರ ವಿಕಾಸಸೌಧದಲ್ಲಿ ನಡೆದ ಕಾರ್ಯಕ್ರಮದಲ್ಲಿ ನೂತನ ಆಟೋ ಮ್ಯುಟೇಶನ್ ತಂತ್ರಾಂಶಕ್ಕೆ ಚಾಲನೆ ನೀಡಿದ ಅವರು, ಪಹಣಿಯ ಜೊತೆಗೆ ಆಧಾರ್ ಜೋಡಣೆಯಾದರೆ ಪಹಣಿಯಲ್ಲಿ ಏನೇ ಬದಲಾವಣೆ ಆದರೂ ಆ ಸಂದೇಶವನ್ನು ಆಸ್ತಿ ಮಾಲಕರ ಮೊಬೈಲ್‍ಗೆ ಕಳುಹಿಸಲಾಗುತ್ತದೆ. ಆಗ ಆಸ್ತಿ ಮಾಲಕರ ಗಮನಕ್ಕೆ ಬಾರದೆ ನಡೆಯುವ ಖಾತೆ ಬದಲಾವಣೆ ಅಥವಾ ಮಾರಾಟವನ್ನು ತಡೆಯಬಹುದು ಎಂದರು.
ಇದಲ್ಲದೆ, ನ್ಯಾಯಾಲಯ ಆದೇಶ ನಮೂದಿಸಿದರೆ ಅಥವಾ ಪಹಣಿಯಲ್ಲಿ ಬೇರೆಯವರ ಹೆಸರು ಸೇರಿಸಿದರೂ ಸಹ ಎಸ್‍ಎಂಎಸ್ ಮೂಲಕ ಮಾಹಿತಿ ಬರಲಿದೆ. ಆಧಾರ್ ಜೋಡಣೆ ಮಾಡದಿದ್ದರೆ ಆಸ್ತಿ ಮಾಲಕರ ಗಮನಕ್ಕೆ ಬಾರದೆ ಖಾತೆ ಬದಲಾವಣೆ ಆಗುವಂತಹ ಅಪರೂಪದ ಸಾಧ್ಯತೆಗಳಿವೆ. ಹೀಗಾಗಿ ಮಾಲಕತ್ವ ಸುಭದ್ರವಾಗಿರಬೇಕಾದರೆ ಮೊದಲು ಪಹಣಿ ಜೊತೆಗೆ ಆಧಾರ್ ಜೋಡಿಸಿ ಎಂದು ಸಚಿವರು ಕರೆ ನೀಡಿದರು.
Next Story




