ಅನುದಾನಿತ ಖಾಸಗಿ ಶಿಕ್ಷಣ ಸಂಸ್ಥೆ ಸಿಬ್ಬಂದಿ ವಿರುದ್ಧವೂ ಲೋಕಾಯುಕ್ತ ತನಿಖೆ ನಡೆಸಬಹುದು : ಹೈಕೋರ್ಟ್

ಬೆಂಗಳೂರು: ಸರಕಾರದಿಂದ ಅನುದಾನ ಪಡೆಯುತ್ತಿರುವ ಖಾಸಗಿ ಶಿಕ್ಷಣ ಸಂಸ್ಥೆಗಳ ಸಿಬ್ಬಂದಿಯನ್ನೂ ಸರಕಾರದ ಸಿಬ್ಬಂದಿಯ ಭಾಗವೆಂದೇ ಪರಿಗಣಿಸಬಹುದಾಗಿದ್ದು, ಅವರ ವಿರುದ್ಧವೂ ಲೋಕಾಯುಕ್ತರು ತನಿಖೆ ನಡೆಸಬಹುದು ಎಂದು ಹೈಕೋರ್ಟ್ ಆದೇಶಿಸಿದೆ.
ಲೋಕಾಯುಕ್ತರು ಸಲ್ಲಿಸಿದ್ದ ವರದಿ ಆಧರಿಸಿ, ಕೈಗೊಂಡಿದ್ದ ತನಿಖೆ ಪ್ರಶ್ನಿಸಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ಬೈರಶೆಟ್ಟಿಹಳ್ಳಿಯ ಶ್ರೀ ಬಾಲಾಂಜನೇಯ ಹೈಸ್ಕೂಲ್‌ನ ಗ್ರಂಥಪಾಲಕ ಹಾಗೂ ಗುಮಾಸ್ತ ಬಿ. ಲಕ್ಷ್ಮೇನಾರಾಯಣ ಸಲ್ಲಿಸಿದ್ದ ಮೇಲ್ಮನವಿ ವಜಾಗೊಳಿಸಿರುವ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ನೇತೃತ್ವದ ವಿಭಾಗೀಯ ನ್ಯಾಯಪೀಠ ಈ ಆದೇಶ ಮಾಡಿದೆ.
ಸರಕಾರದಿಂದ ಅನುದಾನ ಪಡೆಯುವ ಶಿಕ್ಷಣ ಸಂಸ್ಥೆಗಳ ಸಿಬ್ಬಂದಿಯನ್ನು ಕೆಲ ಉದ್ದೇಶಗಳಿಗಾಗಿ ಸರಕಾರದ ಸಿಬ್ಬಂದಿಯ ಭಾಗವೆಂದೇ ಪರಿಗಣಿಸಲಾಗುವುದೆಂದು ಹೈಕೋರ್ಟ್ ಹಲವು ಸಂದರ್ಭಗಳಲ್ಲಿ ತೀರ್ಪು ನೀಡಿದೆ. ಅವರ ವೇತನ, ಭತ್ಯೆ ಮತ್ತು ಸೇವಾ ಷರತ್ತುಗಳನ್ನು ಸರಕಾರ ನಿಯಂತ್ರಿಸುತ್ತದೆ. ಆದ್ದರಿಂದ, ಅರ್ಜಿದಾರರ ವಿರುದ್ಧವೂ ಲೋಕಾಯುಕ್ತ ತನಿಖೆ ನಡೆಸಬಹುದು ಎಂದು ಹೈಕೋರ್ಟ್ ಆದೇಶಿಸಿದೆ.
ಲೋಕಾಯುಕ್ತ ಕಾಯ್ದೆ ಸೆಕ್ಷನ್ 12(3)ರ ಅಡಿ ನೀಡಿರುವ ವರದಿ ಹಾಗೂ ಸಿಸಿಎ ನಿಯಮ 14ಎ ಅಡಿ ಸರಕಾರ ತನಿಖೆ ನಡೆಸಲು ಹೊರಡಿಸಿರುವ ಆದೇಶ ಸರಿಯಾಗಿಯೇ ಇದೆ. ಲೋಕಾಯುಕ್ತರು ಭ್ರಷ್ಟಾಚಾರ ನಿಗ್ರಹ ಕಾಯ್ದೆ (ಪಿಸಿ) ಸೆಕ್ಷನ್ 12(3)ರ ಪ್ರಕಾರ ವರದಿ ಸಲ್ಲಿಸಿದ್ದು, ಅದರಲ್ಲಿ ಮೇಲ್ನೋಟಕ್ಕೆ ಅರ್ಜಿದಾರರು ಆಸ್ತಿ ವಿವರಗಳನ್ನು ಸಲ್ಲಿಕೆ ಮಾಡದಿರುವುದು ದೃಢಪಟ್ಟಿದೆ ಎನ್ನಲಾಗಿದೆ. ನಿಯಮದ ಪ್ರಕಾರ ಹಿರಿಯ ಅಧಿಕಾರಿಗಳ ಅನುಮತಿ ಪಡೆಯದೆ ಅರ್ಜಿದಾರರು ಭೂಮಿ ಖರೀದಿ ಮಾಡಿದ್ದಾರೆ. ಆದ್ದರಿಂದ, ಅವರ ವಿರುದ್ಧ ತನಿಖೆ ಮುಂದುವರಿಸುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ.
ಪ್ರಕರಣವೇನು?
ಶಾಲಾ ಆಡಳಿತ ಮಂಡಳಿಯಿಂದ ಅಗತ್ಯ ಅನುಮತಿ ಪಡೆಯದೆ ಬಿ.ಲಕ್ಷ್ಮೇನಾರಾಯಣ ಮತ್ತಿತರ ನಾಲ್ವರು 2004 ಮತ್ತು 2005ರಲ್ಲಿ ವಾಜರಹಳ್ಳಿ ಮತ್ತು ನೆಲಮಂಗಲ ಪಟ್ಟಣದಲ್ಲಿ ಭೂಮಿ ಖರೀದಿ ಮಾಡಿದ್ದಾರೆಂದು 2013ರಲ್ಲಿ ಲೋಕಾಯುಕ್ತದಲ್ಲಿ ದೂರು ಸಲ್ಲಿಕೆಯಾಗಿತ್ತು. ಬಿ.ಲಕ್ಷ್ಮೇನಾರಾಯಣ ವಾಜರಹಳ್ಳಿಯ ತಮ್ಮ ಪಾಲಿನ 2.83 ಕೋಟಿ ರೂ. ಪಡೆದುಕೊಂಡಿದ್ದಾರೆ. ನಿಯಮದಂತೆ ಆಸ್ತಿ ವಿವರ ಸಲ್ಲಿಕೆ ಮಾಡಿಲ್ಲಎಂದು ದೂರುದಾರರು ಆರೋಪಿಸಿದ್ದರು. ಲೋಕಾಯುಕ್ತರು ಪ್ರಾಥಮಿಕ ತನಿಖೆ ನಡೆಸಿ ಸರಕಾರಕ್ಕೆ ಸಲ್ಲಿಸಿದ್ದ ವರದಿ ಆಧರಿಸಿ ಸರಕಾರ ಸಿಸಿಎ ನಿಯಮಗಳಡಿ ಪೂರ್ಣಪ್ರಮಾಣದ ತನಿಖೆ ನಡೆಸಲು ಪ್ರಕರಣವನ್ನು ಲೋಕಾಯುಕ್ತಕ್ಕೆ ವಹಿಸಿಕೊಟ್ಟಿತ್ತು. ಇದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.







