ಆದಾಯಕ್ಕಿಂತ ದುಪ್ಪಟ್ಟು ಆಸ್ತಿ ಗಳಿಕೆ ಪ್ರಕರಣ: ತಹಶೀಲ್ದಾರ್ ಅಜಿತ್ ರೈ 7 ದಿನ ಲೋಕಾಯುಕ್ತ ಪೊಲೀಸರ ವಶಕ್ಕೆ
ಬೆಂಗಳೂರು, ಜೂ.30: ಆದಾಯಕ್ಕಿಂತ ದುಪ್ಪಟ್ಟು ಆಸ್ತಿ ಗಳಿಕೆ ಪ್ರಕರಣ ಸಂಬಂದ ಬಂಧನಕ್ಕೊಳಗಾಗಿರುವ ಕೆ.ಆರ್.ಪುರ ತಹಶೀಲ್ದಾರ್ ಅಜಿತ್ ಕುಮಾರ್ ರೈ ನನ್ನು 7 ದಿನಗಳ ಕಾಲ ಲೋಕಾಯುಕ್ತರ ವಶಕ್ಕೆ ನೀಡಿ ನಗರದ 78ನೆ ಸಿಸಿಹೆಚ್ ನ್ಯಾಯಾಲಯ ಆದೇಶಿಸಿದೆ.
ಜೂನ್ 28ರಂದು ಅಜಿತ್ ರೈಗೆ ಸೇರಿದ ಮನೆ ಹಾಗೂ ಕಚೇರಿ ಸೇರಿದಂತೆ 10 ಕಡೆಗಳಲ್ಲಿ ದಾಳಿ ನಡೆಸಿ ರಾತ್ರಿಯವರೆಗೂ ಪರಿಶೀಲನೆ ಮುಂದುವರೆಸಿದ್ದ ಲೋಕಾಯುಕ್ತ ಪೊಲೀಸರು, ಗುರುವಾರ ಬೆಳಗ್ಗೆ ಅವರನ್ನು ವಶಕ್ಕೆ ಪಡೆದಿದ್ದರು.
ಅದರಂತೆ ಶುಕ್ರವಾರ ಬೆಳಗ್ಗೆ ಅಜಿತ್ ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. ತನಿಖೆಯ ಭಾಗವಾಗಿ ಪುತ್ತೂರಿಗೆ ಕರೆದೊಯ್ಯುವ ಅಗತ್ಯವಿರುವುದರಿಂದ 10 ದಿನಗಳ ಕಾಲ ಕಸ್ಟಡಿಗೆ ನೀಡುವಂತೆ ಮನವಿ ಮಾಡಿದ್ದರು. ಆದರೆ, ಜುಲೈ 6ರ ವರೆಗೆ ಅಜಿತ್ ರೈ ಅವರನ್ನು ಲೋಕಾಯುಕ್ತ ಪೊಲೀಸರ ವಶಕ್ಕೆ ನೀಡಿ ನ್ಯಾಯಾಲಯ ಆದೇಶಿಸಿದೆ.
ಇನ್ನೂ, ಆರೋಪಿ ಅಜಿತ್ ಕುಮಾರ್ ಬಳಿ ಐಷಾರಾಮಿ ವಾಹನಗಳು, ಕೈ ಗಡಿಯಾರ, ಸುಮಾರು 18 ಲೀಟರ್ ವಿದೇಶಿ ಮದ್ಯದ ಬಾಟೆಲ್‍ಗಳು ಪತ್ತೆಯಾಗಿವೆ. ಲೋಕಾಯುಕ್ತ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಜತೆಗೆ, ಜಪ್ತಿ ಮಾಡಿರುವ ಚರಾಸ್ತಿ ಹಾಗೂ ಸ್ತಿರಾಸ್ತಿಗಳ ಮೌಲ್ಯಮಾಪನ ನಡೆಸುತ್ತಿದ್ದಾರೆ.
ಅಷ್ಟೇ ಅಲ್ಲದೆ, ತಂದೆಯ ಮರಣದ ಬಳಿಕ ಕಂದಾಯ ಇಲಾಖೆಯಲ್ಲಿ ಅನುಕಂಪದ ಆಧಾರದ ಮೇಲೆ ಎಫ್‍ಡಿಎ ಹುದ್ದೆ ಪಡೆದುಕೊಂಡಿದ್ದ ಅಜಿತ್ ಹಂತ ಹಂತವಾಗಿ ತಹಶೀಲ್ದಾರ್ ಹುದ್ದೆಗೇರಿದ್ದರು. ವೃತ್ತಿ ಜೀವನದ ಬಹುತೇಕ ಅವಧಿಯನ್ನು ದೊಡ್ಡಬಳ್ಳಾಪುರ, ದೇವನಹಳ್ಳಿ ಸುತ್ತಮುತ್ತಲ ಭಾಗಗಳಲ್ಲಿ ಕಳೆದಿದ್ದಾರೆ. ಅದೇ ಭಾಗದಲ್ಲಿ ಸುಮಾರು 150 ಎಕರೆಗಿಂತ ಜಾಸ್ತಿ ಜಮೀನನ್ನು ಬೇನಾಮಿಗಳ ಹೆಸರುಗಳಲ್ಲಿ ಹೊಂದಿದ್ದಾರೆ. ಈವರೆಗೆ ಅವರ ನಿವಾಸಗಳಲ್ಲಿ 200 ಎಕರೆ ಜಮೀನಿಗೆ ಸಂಬಂಧಿಸಿದ 150 ರಿಂದ 160 ಕ್ರಯಪತ್ರಗಳು ದೊರೆತಿವೆ. ಈ ಜಮೀನುಗಳ ಮೌಲ್ಯವು ಸುಮಾರು 100 ಕೋಟಿ ರೂ. ದಾಟಬಹುದು. ಬಹುತೇಕ ಆಸ್ತಿ ಅಜಿತ್ ಆಪ್ತ ಗೌರವ್ ಶೆಟ್ಟಿ ಹೆಸರಿನಲ್ಲಿದೆ ಎಂದು ಹೇಳಲಾಗುತ್ತಿದೆ.