ಝಮೀರ್ ಅಹ್ಮದ್ ಖಾನ್ ಆಪ್ತ ಕಾರ್ಯದರ್ಶಿ ನಿವಾಸದ ಮೇಲೆ ಲೋಕಾಯುಕ್ತ ದಾಳಿ: 14 ಕೋಟಿ ರೂ.ಗಿಂತ ಹೆಚ್ಚಿನ ಮೌಲ್ಯದ ಆಸ್ತಿ ಪತ್ತೆ!

File Photo
ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ ಆರೋಪ ಮೇಲೆ ಸಚಿವ ಝಮೀರ್ ಅಹ್ಮದ್ ಖಾನ್ ಅವರ ಆಪ್ತ ಕಾರ್ಯದರ್ಶಿ ಸರ್ದಾರ್ ಸರ್ಫರಾಝ್ ಖಾನ್ ಅವರಿಗೆ ಸಂಬಂಧಿಸಿದ ಸ್ಥಳಗಳಲ್ಲಿ ಬುಧವಾರದಂದು ಲೋಕಾಯುಕ್ತ ದಾಳಿ ನಡೆದಿದ್ದು, 14 ಕೋಟಿ ರೂ.ಗಿಂತ ಹೆಚ್ಚಿನ ಮೌಲ್ಯದ ಆಸ್ತಿ ಪತ್ತೆಯಾಗಿದೆ.
ವಸತಿ ಮತ್ತು ಅಲ್ಪಸಂಖ್ಯಾಂತರ ಕಲ್ಯಾಣ ಇಲಾಖೆಯ ಸಚಿವರ ಆಪ್ತ ಕಾರ್ಯದರ್ಶಿ ಆಗಿರುವ ಸರ್ಫರಾಜ್ ಖಾನ್ ಅವರು ಆದಾಯದ ಮೂಲಗಳಿಗಿಂತ ಹೆಚ್ಚು ಆಸ್ತಿಯನ್ನು ಹೊಂದಿದ್ದಾರೆ ಎಂದು ಲೋಕಾಯುಕ್ತ ಕಚೇರಿಯಲ್ಲಿ ಪ್ರಕರಣ ದಾಖಲಾಗಿತ್ತು.
ಹೀಗಾಗಿ ಸರ್ಫರಾಝ್ ಖಾನ್ಗೆ ಸಂಬಂಧಿಸಿದ ಬೆಂಗಳೂರಿನ 7 ಮನೆಗಳು, ಕೊಡಗಿನಲ್ಲಿರುವ 2 ಕಾಫಿ ಎಸ್ಟೇಟ್, ಎಚ್.ಡಿ.ಕೋಟೆಯ ಒಂದು ರೆಸಾರ್ಟ್, ಇತರೆ ಸ್ಥಳಗಳು ಸೇರಿದಂತೆ ಒಟ್ಟು 13 ಸ್ಥಳಗಳಲ್ಲಿ ಸುಮಾರು 50ಕ್ಕೂ ಅಧಿಕ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿ, ಪರಿಶೀಲನೆ ನಡೆಸಿದ್ದಾರೆ.
ಅಧಿಕಾರಿಯು 4 ವಾಸದ ಮನೆಗಳು, 37 ಎಕರೆ ಕೃಷಿ ಜಮೀನು ಹೊಂದಿದ್ದು, ಅವರ ಸ್ಥಿರ ಆಸ್ತಿಯ ಅಂದಾಜು ಮೌಲ್ಯ 8,44,33,500 ರೂ. ಆಗಿದೆ. ಇನ್ನು ಪರಿಶೀಲನೆ ವೇಳೆ 66,500 ರೂ. ನಗದು, 2,99,70,500 ರೂ. ಬೆಲೆ ಬಾಳುವ ಚಿನ್ನಾಭರಣಗಳು, 1,64,20,000 ರೂ. ಬೆಲೆ ಬಾಳುವ ವಾಹನಗಳು, 1,29,29,153 ರೂ. ಬೆಲೆ ಬಾಳುವ ಬ್ಯಾಂಕ್ ಠೇವಣಿ ಸೇರಿ ಒಟ್ಟು 5,93,86,153 ರೂ. ಮೌಲ್ಯದ ಚರ ಆಸ್ತಿ ಪತ್ತೆಯಾಗಿದೆ. ಹೀಗಾಗಿ ಅಧಿಕಾರಿಯು ಸ್ಥಿರ ಮತ್ತು ಚರಾಸ್ತಿ ಸೇರಿ ಒಟ್ಟು 14,38,19,653 ರೂ. ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ ಲೋಕಾಯುಕ್ತ ಅಧಿಕಾರಿಗಳು ಪ್ರಕಟನೆಯಲ್ಲಿ ಸ್ಪಷ್ಟಪಡಿಸಿದ್ದಾರೆ.







