ಬೆಂಗಳೂರು ಸೇರಿ 13 ಜಿಲ್ಲೆಗಳಲ್ಲಿ ಏಕಕಾಲಕ್ಕೆ 69ಕ್ಕೂ ಹೆಚ್ಚು ಕಡೆಗಳಲ್ಲಿ ಲೋಕಾಯುಕ್ತ ದಾಳಿ: ದಾಖಲೆಗಳ ಪರಿಶೀಲನೆ

ಬೆಂಗಳೂರು, ಅ.30: ಆದಾಯಕ್ಕೂ ಮೀರಿ ಅಧಿಕ ಗಳಿಕೆ, ಅಕ್ರಮ ಆಸ್ತಿ ಸಂಗ್ರಹಣೆ ಆರೋಪದಡಿ ಸರಕಾರಿ ಅಧಿಕಾರಿಗಳ ವಿರುದ್ಧ ದಾಖಲಾದ ಪ್ರಕರಣಗಳಿಗೆ ಸಂಬಂಧಿಸಿದಂತೆ, ಬೆಂಗಳೂರು ನಗರ ಸೇರಿದಂತೆ ರಾಜ್ಯದ 13 ಜಿಲ್ಲೆಗಳ 69ಕ್ಕೂ ಹೆಚ್ಚು ಕಡೆಗಳಲ್ಲಿ ಲೋಕಾಯುಕ್ತ ಪೊಲೀಸರು ಸೋಮವಾರ ವ್ಯಾಪಕ ಶೋಧ ಕಾರ್ಯಾಚರಣೆ ನಡೆಸಿದ್ದಾರೆ.
ಅರಣ್ಯ, ಕಂದಾಯ, ಜಲಸಂಪನ್ಮೂಲ, ಇಂಧನ, ನಗರಾಭಿವೃದ್ಧಿ ಹಾಗೂ ಗ್ರಾಮೀಣಾಭಿವೃದ್ಧಿ ಸೇರಿದಂತೆ ಪ್ರಮುಖ ಇಲಾಖೆಗಳ 17 ಮಂದಿ ಅಧಿಕಾರಿಗಳ ಮನೆ ಹಾಗೂ ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ.
ದಾಳಿ ಎಲ್ಲೆಲ್ಲಿ?
ಬೆಂಗಳೂರು ನಗರ, ತುಮಕೂರು, ಮಂಡ್ಯ, ಚಿತ್ರದುರ್ಗ, ದಾವಣಗೆರೆ, ಉಡುಪಿ, ಹಾಸನ, ಬಳ್ಳಾರಿ, ರಾಯಚೂರು, ಬೆಳಗಾವಿ, ಕಲಬುರಗಿ ಮತ್ತು ರಾಮನಗರ, ಹಾವೇರಿ ಜಿಲ್ಲೆಗಳಲ್ಲಿ ಲೋಕಾಯುಕ್ತ ಪೆÇಲೀಸರು ಅಧಿಕಾರಿಗಳ ಕಚೇರಿ ಮತ್ತು ಮನೆಗಳ ಮೇಲೆ ದಾಳಿ ನಡೆಸಿ ಕಡತಗಳು, ವಿವಿಧ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ವಿವಿಧ ಇಲಾಖೆಗಳಲ್ಲಿ ಗುರುತರ ಹುದ್ದೆಯನ್ನು ಹೊಂದಿರುವ ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯಿದೆ ಪ್ರಕಾರ ದೂರು ದಾಖಲಿಸಲಾಗಿದೆ. ಆರೋಪಿತ ಅಧಿಕಾರಿಗಳು ತಮ್ಮ ನಿಗದಿತ ಆದಾಯದ ಮೂಲಗಳಿಗಿಂತ ಅಧಿಕ ಚರ, ಸ್ಥಿರಾಸ್ತಿ ಗಳಿಸಿದ ಮಾಹಿತಿಯನ್ನು ಲೋಕಾಯುಕ್ತ ಪೊಲೀಸರು ಕಲೆ ಹಾಕಿದ್ದಾರೆ ಎನ್ನಲಾಗಿದೆ.
ಸಿಕ್ಕಿ ಬಿದ್ದ 17 ಅಧಿಕಾರಿಗಳು:
ಬಿಬಿಎಂಪಿ ದಾಸರಹಳ್ಳಿ ವಲಯದ ಸಹಾಯಕ ಕಂದಾಯ ಅಧಿಕಾರಿ ಚಂದ್ರಪ್ಪ, ದಾವಣಗೆರೆ ಫ್ಯಾಕ್ಟರೀಸ್ ಅಂಡ್ ಬಾಯ್ಲರ್ ನ ಉಪ ನಿರ್ದೇಶಕ ಶ್ರೀನಿವಾಸ, ಉಡುಪಿ ಉಪ ವಿಭಾಗಾಧಿಕಾರಿ ರಾಜೇಶ್, ಚಿತ್ರದುರ್ಗದ ಅರಣ್ಯ ಇಲಾಖೆಯ ಎಸಿಎಫ್ ನಾಗೇಂದ್ರ ನಾಯ್ಕ, ಚಿತ್ರದುರ್ಗದ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ವಿ.ಕೃಷ್ಣ ಮೂರ್ತಿ, ತುಮಕೂರು ಪಿಆರ್‍ಇಡಿ ಉಪ ವಿಭಾಗದ ಸಹಾಯಕ ಇಂಜಿನಿಯರ್ ಎ.ನಾಗೇಂದ್ರಪ್ಪ, ರಾಯಚೂರು ನಿರ್ಮಿತಿ ಕೇಂದ್ರದ ಶರಣಪ್ಪ ಪಟ್ಟೇದ್, ಬಳ್ಳಾರಿಯ ತಹಸೀಲ್ದಾರ್ ಕಚೇರಿಯ ಕಂದಾಯ ಅಧಿಕಾರಿ ಕೆ.ಮಂಜುನಾಥ್, ಉಡುಪಿಯ ವಾಣಿಜ್ಯ ತೆರಿಗೆ ಇಲಾಖೆಯ ಎಸಿ ರಾಜೇಶ್,
ಬೆಂಗಳೂರು ಸ್ಲಮ್ ಬೋರ್ಡ್‍ನ ಮುಖ್ಯ ಇಂಜಿನಿಯರ್ ಎನ್.ಪಿ.ಬಾಲರಾಜು, ಬೆಂಗಳೂರು ನಗರ ಯೋಜನೆ ಕಾರ್ಯಪಾಲಕ ಎಂಜನಿಯರ್ ಶಶಿಕುಮಾರ್, ಕಲಬುರಗಿಯ ಕೃಷ್ಣಾ ಭಾಗ್ಯ ಜಲ ನಿಗಮದ ಇಇ ತಿಪ್ಪನಗೌಡ ಅನ್ನದಾನಿ, ಬೀದರ್ ಆರ್ ಎಫ್‍ಓ ಬಸವರಾಜ್, ಕಲಬುರಗಿಯ ನಗರ ಮತ್ತು ಗ್ರಾಮೀಣ ಯೋಜನಾ ವಿಭಾಗದ ಜಂಟಿ ನಿರ್ದೇಶಕ ಅಪ್ಪಸಾಹೇಬ್ ಸಿದ್ಲಿಂಗ್, ಕಲಬುರಗಿ ತಾ.ಪಂ ಎಇಇ ಮಹದೇವ್, ಹಾಸನದ ಕೆಪಿಟಿಸಿಎಲ್‍ನ ಕಿರಿಯ ಎಂಜಿನಿಯರ್ ನಾರಾಯಣ, ಹಾವೇರಿಯ ಅರಣ್ಯ ಜಲಾನಯನ ಅಧಿಕಾರಿ ಪರಮೇಶ್ವರಪ್ಪ, ಹಾವೇರಿ ಆರ್‍ಎಫ್‍ಓ ಮಹಾಂತೇಶ್ ಸದಾನಂದ ನ್ಯಾಮತಿ ಲೋಕಾಯುಕ್ತ ಪೊಲೀಸರ ದಾಳಿ ಸಿಕ್ಕಿಬಿದ್ದಿದ್ದಾರೆ.
ವಿವಿಧ ಇಲಾಖೆಗಳ ಒಟ್ಟು 17 ಅಧಿಕಾರಿಗಳ ಹೆಸರಿನಲ್ಲಿ ಅಪಾರ ನಗದು, ಚಿನ್ನ, ಬೆಳ್ಳಿ ವಸ್ತುಗಳಲ್ಲದೆ ಬೆಲೆಬಾಳುವ ದ್ವಿಚಕ್ರ ಮತ್ತು ಐಷಾರಾಮಿ ಕಾರುಗಳೂ ಪತ್ತೆಯಾಗಿವೆ. ಕೆಲ ಅಧಿಕಾರಿಗಳ ಲಾಕರುಗಳಲ್ಲಿ ಲಕ್ಷಗಟ್ಟಲೆ ಹಣ ಪತ್ತೆಯಾಗಿದೆ ಎಂದು ಲೋಕಾಯುಕ್ತ ಮೂಲಗಳು ತಿಳಿಸಿವೆ.
ಅಕ್ರಮ ಆಸ್ತಿಗೆ ಸಂಬಂಧಿಸಿದಂತೆ ಪ್ರಮುಖ ದಾಖಲೆಗಳನ್ನು ವಶಪಡಿಸಿಕೊಂಡಿರುವ ಲೋಕಾಯುಕ್ತ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.







