ʼಮಹಿಳೆಯರ ಪ್ರತಿಭಟನೆಗೆ ಕಿವುಡಾಗಿರುವ ಸರಕಾರʼ: ಆಶಾ ಕಾರ್ಯಕರ್ತೆಯರ ಹೋರಾಟಕ್ಕೆ ವಿಪಕ್ಷ ನಾಯಕ ಆರ್.ಅಶೋಕ್ ಬೆಂಬಲ

ಆರ್. ಅಶೋಕ್
ಬೆಂಗಳೂರು: ‘ಮಹಿಳೆಯರ ಮತಗಳಿಂದ ಅಧಿಕಾರಕ್ಕೆ ಬಂದು, ಆ ಮಹಿಳೆಯರ ಪ್ರತಿಭಟನೆಗೆ ಕಿವುಡಾಗಿರುವ ಸರಕಾರಕ್ಕೆ ಸಂವಿಧಾನದ ದಿನ ಆಚರಿಸುವುದಕ್ಕಿಂತ ಮೊದಲು ಆತ್ಮಾವಲೋಕನ ಮಾಡಿಕೊಳ್ಳುವ ಅಗತ್ಯವಿದೆ. ಭರವಸೆ ಕೊಟ್ಟಿದ್ದು ನೀವು. ಅಧಿಕಾರ ಅನುಭವಿಸುತ್ತಿರುವುದೂ ನೀವೇ. ಹಾಗಿದ್ದ ಮೇಲೆ ಹೊಣೆಗಾರಿಕೆಯಿಂದ ನುಣುಚಿಕೊಳ್ಳುವುದು ಏಕೆ?’ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಪ್ರಶ್ನಿಸಿದ್ದಾರೆ.
ರವಿವಾರ ಎಕ್ಸ್ ನಲ್ಲಿ ಪೋಸ್ಟ್ ಹಾಕಿರುವ ಅವರು, ‘ಮಹಿಳೆಯರಿಗೆ ಕೊಟ್ಟ ಮಾತು ಉಳಿಸಿಕೊಳ್ಳಲು ಸಾಧ್ಯವಾಗದಿದ್ದರೆ, ಕನಿಷ್ಠ ಕೊಟ್ಟ ಮಾತನ್ನು ಕೊಟ್ಟಿದ್ದೇವೆ ಎಂದು ಒಪ್ಪಿಕೊಳ್ಳುವ ಪ್ರಾಮಾಣಿಕತೆಯಾದರೂ ಇರಲಿ. ನಿಮಗೆ ಆತ್ಮಸಾಕ್ಷಿ ಇದ್ದರೆ, ಸಂವಿಧಾನದ ಮೇಲೆ ಕೈಯಿಟ್ಟು ಪ್ರಮಾಣ ಮಾಡಿ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಸುರ್ಜೇವಾಲರೇ, ಸಂವಿಧಾನದ ದಿನದಂದು ಸಂವಿಧಾನದ ಬಗ್ಗೆ ಭಾಷಣ ಮಾಡುವ ಮೊದಲು, ನೀವು ಕರ್ನಾಟಕದ ಸ್ವಾಭಿಮಾನಿ ಮಹಿಳೆಯರಿಗೆ ಕೊಟ್ಟ ಮಾತುಗಳ ಬಗ್ಗೆ ಉತ್ತರಿಸುವ ನೈತಿಕತೆ ತೋರಿಸಿ’ ಎಂದು ಹೇಳಿದ್ದಾರೆ.
‘2023ರ ಚುನಾವಣೆಗೂ ಮುನ್ನ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರ ಪ್ರತಿನಿಧಿಗಳನ್ನು ನೀವು ಪ್ರತ್ಯೇಕವಾಗಿ ಕರೆಸಿ ಸಭೆ ನಡೆಸಿದ್ದು ಸುಳ್ಳಾ?. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಅಂಗನವಾಡಿ ಮತ್ತು ಆಶಾಗಳ ಗೌರವಧನ ಹೆಚ್ಚಿಸುತ್ತೇವೆ ಎಂದು ಭರವಸೆ ನೀಡಿದ್ದು ಸುಳ್ಳಾ?. ಮಹಿಳಾ ಕಾರ್ಯಕರ್ತೆಯರಿಗೆ ನೀಡಿದ ಈ ಭರವಸೆಯನ್ನು ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಸೇರಿಸಿದ್ದು ಸುಳ್ಳಾ?. ಈ ಭರವಸೆಗಳನ್ನೇ ಮುಂದಿಟ್ಟುಕೊಂಡು ಸಾವಿರಾರು ಮಹಿಳೆಯರ ಮತಗಳನ್ನು ಕೇಳಿದ್ದು ಸುಳ್ಳಾ?. ಈ ಪ್ರಶ್ನೆಗಳಿಗೆ ಉತ್ತರಿಸುವ ನೈತಿಕತೆ ಇದೆಯಾ?’ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.
‘ಮಹಿಳೆಯರ ಮತ ಬೇಕಾದಾಗ ಅವರ ಮನೆ ಬಾಗಿಲಿಗೆ ಹೋಗಿ, ಅವರ ಸಮಸ್ಯೆಗಳನ್ನು ಆಲಿಸುವ ನಾಟಕವಾಡಿ, ವೇದಿಕೆಗಳ ಮೇಲೆ ಭರವಸೆಗಳ ಮಳೆ ಸುರಿಸಿ, ಪ್ರಣಾಳಿಕೆಯಲ್ಲಿ ಘೋಷಣೆಗಳನ್ನು ಮುದ್ರಿಸಿ ಅಧಿಕಾರಕ್ಕೆ ಬಂದಿರಿ. ಆದರೆ, ಅಧಿಕಾರ ಸಿಕ್ಕಿದ ಮೇಲೆ ಆ ಮಹಿಳೆಯರೇ ನಿಮಗೆ ನೆನಪಿಲ್ಲ. ಇಂದು ಅದೇ ಆಶಾ, ಅಂಗನವಾಡಿ ಕಾರ್ಯಕರ್ತೆಯರು ತಮ್ಮ ಬೇಡಿಕೆಗಳಿಗಾಗಿ ಬೀದಿಗಿಳಿಯಬೇಕಾಗಿದೆ’ ಎಂದು ಅವರು ತಿಳಿಸಿದ್ದಾರೆ.
‘ಸರಕಾರದ ಗಮನ ಸೆಳೆಯಲು ಮನೆ, ಕುಟುಂಬ ಬಿಟ್ಟು ಬೀದಿಗೆ ಇಳಿಯಬೇಕಾದ ದುಸ್ಥಿತಿಗೆ ಅವರನ್ನು ತಳ್ಳಿದ್ದೀರಿ. ಮತ ಬೇಕಾದಾಗ ಮಹಿಳೆಯರು ದೇವತೆಗಳು, ಅಧಿಕಾರ ಸಿಕ್ಕ ಮೇಲೆ ಅವರ ಬೇಡಿಕೆಗಳು ನಿಮಗೆ ಕಿರಿಕಿರಿಯೇ?. ಇದೇನಾ ನಿಮ್ಮ ಮಹಿಳಾ ಪರ ಕಾಳಜಿ? ಇದೇನಾ ನಿಮ್ಮ ಗ್ಯಾರಂಟಿ ಸರಕಾರದ ಬದ್ಧತೆ? ಇದೇನಾ ಕಾಂಗ್ರೆಸ್ನ ಸಾಮಾಜಿಕ ನ್ಯಾಯ?. ಸಂವಿಧಾನದ ದಿನದಂದು ಸಂವಿಧಾನದ ಮೌಲ್ಯಗಳ ಬಗ್ಗೆ ಮಾತನಾಡುವ ನೈತಿಕತೆ ನಿಮಗಿದೆಯೇ ಎಂಬ ಪ್ರಶ್ನೆ ಸಹಜವಾಗಿಯೇ ಉದ್ಭವಿಸುತ್ತದೆ’ ಎಂದು ಅವರು ಅಕ್ರೋಶ ವ್ಯಕ್ತಪಡಿಸಿದ್ದಾರೆ.
‘ಸಂವಿಧಾನ ವೇದಿಕೆಯ ಮೇಲೆ ಪ್ರದರ್ಶನಕ್ಕೆ ಇಡುವ ಪುಸ್ತಕವಲ್ಲ. ಅದು ಅಧಿಕಾರದಲ್ಲಿರುವವವರಿಗೆ ತಮ್ಮ ಕರ್ತವ್ಯ ನೆನಪಿಸುವ ಸಾಕ್ಷಿಪ್ರಜ್ಞೆಯ ಪ್ರತೀಕ. ಹಾಗಾಗಿ ಮತ್ತೊಮ್ಮೆ ಸವಾಲು ಹಾಕುತ್ತಿದ್ದೇನೆ. ನಿಮಗೆ ಆತ್ಮಸಾಕ್ಷಿ ಇದ್ದರೆ, ಸಂವಿಧಾನದ ಮೇಲೆ ಕೈಯಿಟ್ಟು ಪ್ರಮಾಣ ಮಾಡಿ ಹೇಳಿ, ಆಶಾ, ಅಂಗನವಾಡಿ ಕಾರ್ಯಕರ್ತೆಯರ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದ್ದು ನಿಜವೋ, ಸುಳ್ಳೋ?. ಗೌರವಧನ ಹೆಚ್ಚಿಸುವ ಭರವಸೆ ನೀಡಿದ್ದು ನಿಜವೋ, ಸುಳ್ಳೋ?. ಆ ಭರವಸೆಯನ್ನು ಪ್ರಣಾಳಿಕೆಯಲ್ಲಿ ಸೇರಿಸಿದ್ದು ನಿಜವೋ, ಸುಳ್ಳೋ? ಉತ್ತರಿಸಿ. ಇದು ಪ್ರತಿಪಕ್ಷ ಕೇಳುತ್ತಿರುವ ಪ್ರಶ್ನೆಯಲ್ಲ. ನಿಮ್ಮ ಮಾತು ನಂಬಿ ಮತ ಹಾಕಿದ ಸಾವಿರಾರು ಮಹಿಳೆಯರು ಕೇಳುತ್ತಿರುವ ಪ್ರಶ್ನೆ’ ಎಂದು ಅಶೋಕ್ ಸವಾಲು ಹಾಕಿದ್ದಾರೆ.
ನಿಮಗೆ ಆತ್ಮಸಾಕ್ಷಿ ಇದ್ದರೆ, ಸಂವಿಧಾನದ ಮೇಲೆ ಕೈಯಿಟ್ಟು ಪ್ರಮಾಣ ಮಾಡಿ!
ಮುಖ್ಯಮಂತ್ರಿ @DKShivakumar ಅವರೇ, ಮಾಜಿ ಮುಖ್ಯಮಂತ್ರಿ @siddaramaiah ಅವರೇ, ಎಐಸಿಸಿ ಪ್ರಧಾನ ಕಾರ್ಯದರ್ಶಿ @rssurjewala ಅವರೇ,
ಸಂವಿಧಾನದ ದಿನದಂದು ಸಂವಿಧಾನದ ಬಗ್ಗೆ ದೊಡ್ಡ ದೊಡ್ಡ ಭಾಷಣ ಮಾಡುವ ಮೊದಲು, ನೀವು ಕರ್ನಾಟಕದ ಸ್ವಾಭಿಮಾನಿ ಮಹಿಳೆಯರಿಗೆ ಕೊಟ್ಟ ಮಾತುಗಳ ಬಗ್ಗೆ ಉತ್ತರಿಸುವ ನೈತಿಕತೆ ತೋರಿಸಿ.
ನನ್ನದೊಂದು ನೇರ ಸವಾಲು. ಸಂವಿಧಾನದ ಮೇಲೆ ಕೈಯಿಟ್ಟು ಪ್ರಮಾಣ ಮಾಡಿ ಈ ಪ್ರಶ್ನೆಗಳಿಗೆ ಉತ್ತರಿಸಿ:
1. 2023ರ ವಿಧಾನಸಭಾ ಚುನಾವಣೆಗೂ ಮುನ್ನ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರ ಪ್ರತಿನಿಧಿಗಳನ್ನು ನೀವು ಪ್ರತ್ಯೇಕವಾಗಿ ಕರೆಸಿ ಸಭೆ ನಡೆಸಿದ್ದು ಸುಳ್ಳಾ?
2. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರ ಗೌರವಧನ ಹೆಚ್ಚಿಸುತ್ತೇವೆ ಎಂದು ಭರವಸೆ ನೀಡಿದ್ದು ಸುಳ್ಳಾ?
3. ಮಹಿಳಾ ಕಾರ್ಯಕರ್ತೆಯರಿಗೆ ನೀಡಿದ ಈ ಭರವಸೆಯನ್ನು ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿ ಸೇರಿಸಿದ್ದು ಸುಳ್ಳಾ?
4. ಈ ಭರವಸೆಗಳನ್ನೇ ಮುಂದಿಟ್ಟುಕೊಂಡು ಸಾವಿರಾರು ಮಹಿಳೆಯರ ಮತಗಳನ್ನು ಕೇಳಿದ್ದು ಸುಳ್ಳಾ?
ಈ ನಾಲ್ಕು ಪ್ರಶ್ನೆಗಳಿಗೆ ಉತ್ತರಿಸುವ ನೈತಿಕತೆ ಇದೆಯಾ?
ಮಹಿಳೆಯರ ಮತ ಬೇಕಾದಾಗ ಅವರ ಮನೆ ಬಾಗಿಲಿಗೆ ಹೋಗಿ, ಅವರ ಸಮಸ್ಯೆಗಳನ್ನು ಆಲಿಸುವ ನಾಟಕವಾಡಿ, ವೇದಿಕೆಗಳ ಮೇಲೆ ಭರವಸೆಗಳ ಮಳೆ ಸುರಿಸಿ, ಪ್ರಣಾಳಿಕೆಯಲ್ಲಿ ಘೋಷಣೆಗಳನ್ನು ಮುದ್ರಿಸಿ ಅಧಿಕಾರಕ್ಕೆ ಬಂದಿರಿ.
ಆದರೆ ಅಧಿಕಾರ ಸಿಕ್ಕಿದ ಮೇಲೆ ಆ ಮಹಿಳೆಯರೇ ನಿಮಗೆ ನೆನಪಿಲ್ಲ!
ಇಂದು ಅದೇ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ತಮ್ಮ ನ್ಯಾಯಯುತ ಬೇಡಿಕೆಗಳಿಗಾಗಿ ಬೀದಿಗಿಳಿಯಬೇಕಾಗಿದೆ. ಅಹೋರಾತ್ರಿ ಪ್ರತಿಭಟನೆ ನಡೆಸಬೇಕಾಗಿದೆ. ಸರ್ಕಾರದ ಗಮನ ಸೆಳೆಯಲು ಮನೆ, ಕುಟುಂಬ ಬಿಟ್ಟು ಬೀದಿಗೆ ಇಳಿಯಬೇಕಾದ ದುಸ್ಥಿತಿಗೆ ಅವರನ್ನು ತಳ್ಳಿದ್ದೀರಿ.
ಮತ ಬೇಕಾದಾಗ ಮಹಿಳೆಯರು ದೇವತೆಗಳು; ಅಧಿಕಾರ ಸಿಕ್ಕ ಮೇಲೆ ಅವರ ಬೇಡಿಕೆಗಳು ನಿಮಗೆ ಕಿರಿಕಿರಿಯೇ?
ಇದೇನಾ ನಿಮ್ಮ ಮಹಿಳಾ ಪರ ಕಾಳಜಿ? ಇದೇನಾ ನಿಮ್ಮ ಗ್ಯಾರಂಟಿ ಸರ್ಕಾರದ ಬದ್ಧತೆ? ಇದೇನಾ ಕಾಂಗ್ರೆಸ್ನ ಸಾಮಾಜಿಕ ನ್ಯಾಯ?
ಸಂವಿಧಾನದ ದಿನದಂದು ಸಂವಿಧಾನದ ಮೌಲ್ಯಗಳ ಬಗ್ಗೆ ಮಾತನಾಡುವ ನೈತಿಕತೆ ನಿಮಗಿದೆಯೇ ಎಂಬ ಪ್ರಶ್ನೆ ಸಹಜವಾಗಿಯೇ ಉದ್ಭವಿಸುತ್ತದೆ.
ಸಂವಿಧಾನ ಕೇವಲ ವೇದಿಕೆಯ ಮೇಲೆ ಪ್ರದರ್ಶನಕ್ಕೆ ಇಡುವ ಪುಸ್ತಕವಲ್ಲ. ಅದು ಅಧಿಕಾರದಲ್ಲಿರುವವವರಿಗೆ ತಮ್ಮ ಕರ್ತವ್ಯ ನೆನಪಿಸುವ ಸಾಕ್ಷಿಪ್ರಜ್ಞೆಯ ಪ್ರತೀಕ.
ಹಾಗಾಗಿ ಮತ್ತೊಮ್ಮೆ ಸವಾಲು ಹಾಕುತ್ತಿದ್ದೇನೆ.
ನಿಮಗೆ ಆತ್ಮಸಾಕ್ಷಿ ಇದ್ದರೆ, ಸಂವಿಧಾನದ ಮೇಲೆ ಕೈಯಿಟ್ಟು ಪ್ರಮಾಣ ಮಾಡಿ ಹೇಳಿ:
❓ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದ್ದು ನಿಜವೋ, ಸುಳ್ಳೋ?
❓ಗೌರವಧನ ಹೆಚ್ಚಿಸುವ ಭರವಸೆ ನೀಡಿದ್ದು ನಿಜವೋ, ಸುಳ್ಳೋ?
❓ಆ ಭರವಸೆಯನ್ನು ಚುನಾವಣಾ ಪ್ರಣಾಳಿಕೆಯಲ್ಲಿ ಸೇರಿಸಿದ್ದು ನಿಜವೋ, ಸುಳ್ಳೋ?
ಉತ್ತರಿಸಿ ಮುಖ್ಯಮಂತ್ರಿಗಳೇ! ಉತ್ತರಿಸಿ ಸುರ್ಜೆವಾಲ ಅವರೇ!
ಇದು ಪ್ರತಿಪಕ್ಷ ಕೇಳುತ್ತಿರುವ ಪ್ರಶ್ನೆಯಲ್ಲ. ನಿಮ್ಮ ಮಾತು ನಂಬಿ ಮತ ಹಾಕಿದ ಸಾವಿರಾರು ಮಹಿಳೆಯರು ಕೇಳುತ್ತಿರುವ ಪ್ರಶ್ನೆ.
ಮಹಿಳೆಯರ ಮತಗಳಿಂದ ಅಧಿಕಾರಕ್ಕೆ ಬಂದು, ಅದೇ ಮಹಿಳೆಯರ ಪ್ರತಿಭಟನೆಗೆ ಕಿವುಡಾಗಿರುವ ಸರ್ಕಾರಕ್ಕೆ ಸಂವಿಧಾನದ ದಿನ ಆಚರಿಸುವುದಕ್ಕಿಂತ ಮೊದಲು ಆತ್ಮಾವಲೋಕನ ಮಾಡಿಕೊಳ್ಳುವ ಅಗತ್ಯವಿದೆ.
ಭರವಸೆ ಕೊಟ್ಟಿದ್ದು ನೀವು. ಪ್ರಣಾಳಿಕೆಯಲ್ಲಿ ಮುದ್ರಿಸಿದ್ದು ನೀವು. ಅಧಿಕಾರ ಅನುಭವಿಸುತ್ತಿರುವುದೂ ನೀವೇ.
ಹಾಗಿದ್ದ ಮೇಲೆ ಹೊಣೆಗಾರಿಕೆಯಿಂದ ನುಣುಚಿಕೊಳ್ಳುವುದು ಏಕೆ?
ಮಹಿಳೆಯರಿಗೆ ಕೊಟ್ಟ ಮಾತು ಉಳಿಸಿಕೊಳ್ಳಲು ಸಾಧ್ಯವಾಗದಿದ್ದರೆ, ಕನಿಷ್ಠ ಕೊಟ್ಟ ಮಾತನ್ನು ಕೊಟ್ಟಿದ್ದೇವೆ ಎಂದು ಒಪ್ಪಿಕೊಳ್ಳುವ ಪ್ರಾಮಾಣಿಕತೆಯಾದರೂ ಇರಲಿ!
#CongressFailsKarnataka
— R. Ashoka (@RAshokaBJP) November 22, 2026






