ರಾಜ್ಯದಲ್ಲಿ ಅಡುಗೆ ಅನಿಲದ ಕೊರತೆಯಿದೆ ಎಂಬುದು ಆಧಾರರಹಿತ ವದಂತಿ: ಸಚಿವ ಕೆ.ಎಚ್. ಮುನಿಯಪ್ಪ

ಸಚಿವ ಕೆ.ಎಚ್. ಮುನಿಯಪ್ಪ
ಬೆಂಗಳೂರು: ರಾಜ್ಯದಲ್ಲಿ ಇತ್ತೀಚೆಗೆ ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲದ (ಎಲ್ಪಿಜಿ) ಕೊರತೆಯಿದೆ ಎಂಬ ಸುಳ್ಳು ಮತ್ತು ಆಧಾರರಹಿತ ವದಂತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿರುವುದನ್ನು ಸರಕಾರವು ಗಂಭೀರವಾಗಿ ಪರಿಗಣಿಸಿದೆ. ಇಂತಹ ವದಂತಿಗಳಿಂದ ಸಾರ್ವಜನಿಕರು ಆತಂಕಕ್ಕೊಳಗಾಗಬಾರದು ಎಂದು ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಹೇಳಿದ್ದಾರೆ.
ಗುರುವಾರ ಪರಿಷತ್ತಿನಲ್ಲಿ ಕಾಂಗ್ರೆಸ್ ಸದಸ್ಯ ರಮೇಶ್ ಬಾಬು, ಐವನ್ ಡಿಸೋಜಾ, ರಾಮೋಜಿಗೌಡ, ಜಗದೇವ ಗುತ್ತೇದಾರ್ ಹಾಗೂ ರಾಜೇಂದ್ರ ರಾಜಣ್ಣ ಅವರು ನಿಯಮ 330 ಅಡಿ ಮಂಡಿಸಲಾದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕೇಂದ್ರ ಸರಕಾರದ ಮಾಹಿತಿಯಂತೆ ದೇಶಾದ್ಯಂತ ಇಂಧನ ಮತ್ತು ಎಲ್ಪಿಜಿ ದಾಸ್ತಾನು ಸಾಕಷ್ಟು ಪ್ರಮಾಣದಲ್ಲಿದೆ. ಪೆಟ್ರೋಲ್ ಬಂಕ್ಗಳು ಮತ್ತು ಎಲ್ಪಿಜಿ ವಿತರಕರಲ್ಲಿ ಯಾವುದೇ ಕೊರತೆ ಉಂಟಾಗಿಲ್ಲ. ಸಾರ್ವಜನಿಕರು ಆತಂಕದಿಂದ ಅತಿಯಾಗಿ ಖರೀದಿಸುವುದರಿಂದ ಸರಬರಾಜು ವ್ಯವಸ್ಥೆಯಲ್ಲಿ ಅನಗತ್ಯ ಅಸ್ತವ್ಯಸ್ತ ಉಂಟಾಗುತ್ತಿದೆ ಎಂದರು.
ಮಾ.9ರ ಕೇಂದ್ರ ಸರಕಾರದ ಆದೇಶದಂತೆ, ಎಲ್ಲ ಸಾರ್ವಜನಿಕ ವಲಯದ ತೈಲ ಕಂಪನಿಗಳು ಉತ್ಪಾದನೆಯಾಗುವ ಅನಿಲವನ್ನು ಮೊದಲು ಗೃಹಬಳಕೆಯ ಎಲ್ಪಿಜಿ ಗ್ರಾಹಕರಿಗೆ ಪೂರೈಸಲು ಬದ್ಧವಾಗಿವೆ. ಹೋಟೆಲ್ಗಳು, ರೆಸ್ಟೋರೆಂಟ್ಗಳು, ಆಸ್ಪತ್ರೆಗಳು ಮತ್ತು ವಿದ್ಯಾರ್ಥಿನಿಲಯಗಳಂತಹ ವಾಣಿಜ್ಯ ಉದ್ದೇಶಗಳಿಗೆ ಅನಿಲ ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿದೆ ಎಂದು ಮುಖ್ಯಮಂತ್ರಿಗಳು ಕೇಂದ್ರ ಸಚಿವರಿಗೆ ಪತ್ರ ಬರೆದಿದ್ದಾರೆ. ವಾಣಿಜ್ಯ ಬಳಕೆಯ ಅನಿಲ ಪೂರೈಕೆಯಲ್ಲಿ ಕೊರತೆಯಾಗದಂತೆ ಮತ್ತು ಅತಿ ಹೆಚ್ಚಿನ ದರ ವಸೂಲಿ ಮಾಡದಂತೆ ತೈಲ ಕಂಪನಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಅವರು ತಿಳಿಸಿದರು.
ಸಿಲಿಂಡರ್ ವಿತರಣೆಯಲ್ಲಿ ವಿಳಂಬ, ಅಕ್ರಮ ದಾಸ್ತಾನು ಅಥವಾ ಹೆಚ್ಚಿನ ದರ ವಸೂಲಿ ಕಂಡುಬಂದಲ್ಲಿ ಸಾರ್ವಜನಿಕರು ತಕ್ಷಣ ದೂರವಾಣಿ ಸಂಖ್ಯೆ 112 ಕ್ಕೆ ಕರೆ ಮಾಡಿ ದೂರು ನೀಡಬಹುದು. ಬುಕಿಂಗ್ ನಂಬರ್ಗಳು ಕೆಲಸ ಮಾಡದಿದ್ದಲ್ಲಿ ಪರ್ಯಾಯ ವಾಟ್ಸಾಪ್ ಮಾರ್ಗಗಳ ಮೂಲಕ ಬುಕ್ ಮಾಡಲು ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಅವರು ತಿಳಿಸಿದರು.
ಕಾಳಸಂತೆಕೋರರ ವಿರುದ್ಧ ಕಾನೂನು ಕ್ರಮ:
ಪರಿಸ್ಥಿತಿಯ ದುರುಪಯೋಗಪಡಿಸಿಕೊಂಡು ಇಂಧನ ಸಂಗ್ರಹಿಸಿ ಕಾಳಸಂತೆಯಲ್ಲಿ ಮಾರಾಟ ಮಾಡುವವರ ವಿರುದ್ಧ ಸರಕಾರವು ಯುದ್ಧೋಪಾದಿಯಲ್ಲಿ ಕ್ರಮ ಕೈಗೊಳ್ಳುತ್ತಿದೆ. ಗೃಹಬಳಕೆಯ ಸಿಲಿಂಡರ್ಗಳನ್ನು ಅಕ್ರಮವಾಗಿ ವಾಣಿಜ್ಯ ಉದ್ದೇಶಕ್ಕೆ ಬಳಸುವವರ ಮೇಲೆ ನಿರಂತರ ದಾಳಿ ಮುಂದುವರೆಸಲಾಗಿದೆ. ಅಕ್ರಮ ರೀಫಿಲ್ಲಿಂಗ್ ಮತ್ತು ಕಡಿಮೆ ತೂಕದ ಅನಿಲ ವಿತರಿಸುವ ಏಜೆನ್ಸಿಗಳ ವಿರುದ್ಧ ಪ್ರಕರಣ ದಾಖಲು ಮಾಡಲಾಗುವುದು.
-ಕೆ.ಎಚ್.ಮುನಿಯಪ್ಪ, ಆಹಾರ ಸಚಿವ







