ಜಾತಿಗಣತಿ ಮರು ಸಮೀಕ್ಷೆ | ಶಾಲಾ ಶಿಕ್ಷಕರ ಬಳಕೆ ಇಲ್ಲ : ಸಚಿವ ಮಧು ಬಂಗಾರಪ್ಪ

ಶಿವಮೊಗ್ಗ: ರಾಜ್ಯ ಸರಕಾರ ಮತ್ತೊಮ್ಮೆ ನಡೆಸಲಿರುವ ಸಾಮಾಜಿಕ ಮತ್ತು ಶೈಕ್ಷಣಿಕ, ಆರ್ಥಿಕ ಸಮೀಕ್ಷೆಗೆ ಸರಕಾರಿ ಶಾಲಾ ಶಿಕ್ಷಕರನ್ನು ಬಳಕೆ ಮಾಡುವುದಿಲ್ಲ, ಬದಲಿಗೆ ಹೊರಗುತ್ತಿಗೆ ನೀಡಲು ಯೋಚಿಸಲಾಗಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮೀಕ್ಷೆ ಕಾರ್ಯಕ್ಕೆ ಶಿಕ್ಷಕರನ್ನು ನಿಯೋಜಿಸಿದರೆ ವಾರಗಟ್ಟಲೇ ಶಾಲೆಗಳಲ್ಲಿ ಮಕ್ಕಳಿಗೆ ಪಾಠ ಪ್ರವಚನಕ್ಕೆ ತೊಂದರೆಯಾಗಲಿದೆ ಎಂಬುದನ್ನು ಸರಕಾರಕ್ಕೆ ಸ್ಪಷ್ಟಪಡಿಸಿದ್ದೇನೆ. ಹೀಗಾಗಿ ಶಿಕ್ಷಕರ ಬಳಕೆ ಮಾಡುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.
ಎಐಸಿಸಿ ನಾಯಕ ರಾಹುಲ್ ಗಾಂಧಿ ಹಾಗೂ ಜನಾಭಿಪ್ರಾಯದ ಒತ್ತಡಕ್ಕೆ ಮಣಿದಿರುವ ಕೇಂದ್ರ ಸರಕಾರ ಜಾತಿ ಸಮೀಕ್ಷೆಗೆ ಮುಂದಾಗಿದೆ. ಬಿಜೆಪಿ ರಾಜಕೀಯ ಲಾಭದ ಆಶಯದೊದಿಗೆ ಈ ಸಮೀಕ್ಷೆ ನಡೆಸಲಿದೆ. ಆದರೆ, ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಸಂವಿಧಾನತ್ತ ಅವಕಾಶಗಳು ರಾಜ್ಯದ ಕಟ್ಟೆಕಡೆಯ ಮನುಷ್ಯನಿಗೂ ದೊರೆಯಬೇಕು ಎಂಬ ಆಶಯದೊಂದಿಗೆ ಮತ್ತೊಮೆ ಜಾತಿಗಣತಿಗೆ ಮುಂದಾಗಿದೆ. ಹೀಗಾಗಿ ರಾಜ್ಯದ ಜಾತಿಗಣತಿಯೇ ಹೆಚ್ಚು ನಿಖರ, ಸ್ಪಷ್ಟ ಹಾಗೂ ವಿಶ್ವಾಸಾರ್ಹ ಎಂದರು.
ʼಶರಾವತಿ ಸಂತ್ರಸ್ಥರುʼ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಎಲ್ಲಾ ಪ್ರಯತ್ನ :
ಶರಾವತಿ ಮುಳುಗಡೆ ಸಂತ್ರಸ್ಥರಿಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಎಲ್ಲಾ ಪ್ರಯತ್ನಗಳು ನಡೆದಿವೆ. ಈಗಾಗಲೇ ಶೇ.75 ರಷ್ಟು ಕೆಲಸ ಆಗಿದೆ. ಈಗ ಕೋರ್ಟ್ ನಲ್ಲಿ ಎಲ್ಲವೂ ಇತ್ಯರ್ಥವಾಗಬೇಕಿದೆ. ಬ್ಲಾಕ್ ಸಮಸ್ಯೆ ಸೇರಿದಂತೆ ಯಾವುದೇ ಅಹವಾಲು ಇದ್ದರೆ ಸಂತ್ರಸ್ಥರು ತಮ್ಮ ಅಹವಾಲುಗಳನ್ನು ಜಿಲ್ಲಾಧಿಕಾರಿಗಳಿಗೆ ನೀಡಬೇಕು, ಅವು ಸರಕಾರಕ್ಕೆ ಸಲ್ಲಿಕೆಯಾಗಿ ಅಲ್ಲಿಂದ ಕೋರ್ಟ್ ತಲುಪಲಿವೆ ಎಂದರು.
ಶರಾವತಿ ಸಂತ್ರಸ್ಥರಿಗೆ ಭೂಮಿ ಹಕ್ಕು ಸಮಸ್ಯೆಗೆ ಶಾಶ್ವತ ಪರಿಹಾರ ನೀಡಬೇಕೆನ್ನುವ ವಿಚಾರದಲ್ಲಿ ನಮ್ಮ ಸರಕಾರ ಬದ್ದವಾಗಿದೆ. ಇದು ತುಂಬಾ ಹಿಂದಿನ ಸಮಸ್ಯೆ. ಕಾಗೋಡು ತಿಮ್ಮಪ್ಪ ಅವರು ಒಂದು ಹಂತದಲ್ಲಿ ಹೋರಾಟ ನಡೆಸಿ, ಸಂತ್ರಸ್ಥರಿಗೆ ಭೂಮಿಹಕ್ಕು ನೀಡುವ ವಿಚಾರಕ್ಕೆ ಕಾನೂನು ರೂಪ ನೀಡುವ ಹಂತದಲ್ಲಿ ಅದಕ್ಕೆ ಅಡ್ಡವಾಗಿದ್ದೇ ಬಿಜೆಪಿಯವರು. ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದಾಗ ಅದನ್ನು ಹಾಳುಮಾಡಿದರು. ಶರಾವತಿ ಸಂತ್ರಸ್ಥರ ಸಮಸ್ಯೆ ಬಿಜೆಪಿಯ ಪಾಪದ ಕೂಸು. ಅದನ್ನು ಸರಿಪಡಿಸುವ ಕೆಲಸವನ್ನು ಕಾಂಗ್ರೆಸ್ ಸರಕಾರ ಮಾಡುತ್ತಿದೆ ಎಂದರು.
ರಾಜ್ಯದಲ್ಲಿ ಕರ್ನಾಟಕ ಪಬ್ಲಿಕ್ ಸ್ಕೂಲ್ ಗಳಿಗೆ ಬೇಡಿಕೆ ಹೆಚ್ವಾಗಿದೆ. ಹಾಗಾಗಿ ಇಲ್ಲಿ ನಮಕ್ಕಳ ಪ್ರವೇಶಾತಿ ಸಂಖ್ಯೆಯನ್ನು 30 ರಿಂದ 50ಕ್ಕೆ ಹೆಚ್ಚಿಸಲಾಗಿದೆ. ಹಾಗೆಯೇ ಪ್ರತಿವಿಧಾನ ಸಭಾ ಕ್ಷೇತ್ರದಲ್ಲೂ ಕನಿಷ್ಟ 2 ರಿಂದ 3 ಕರ್ನಾಟಕ ಪಬ್ಲಿಕ್ ಸ್ಕೂಲ್ ಪ್ರಾರಂಭಿಸಲು ಉದ್ದೇಶಿಸಲಾಗಿದೆ. ಮುಂದೆ ಈ ಸಂಖ್ಯೆ ಹೆಚ್ವಾಗಬಹುದು. ಆದರೂ ಸರಕಾರಿ ಶಾಲೆಗಳಿಗೆ ದಕ್ಕೆಯಾಗದಂತೆ ಸಮತೋಲನ ಕಾಯ್ದುಕೊಳ್ಳಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಕೆ.ಪಿ.ಶ್ರೀಪಾಲ್, ಜಿ.ಡಿ. ಮಂಜುನಾಥ್, ಶ್ವೇತಾ ಬಂಡಿ, ಆದರ್ಶ್ ಹುಂಚದಕಟ್ಟೆ, ತೇಜಪ್ಪ, ರವಿ ಎಂ.ಡಿ ಇದ್ದರು.







