ಎಸ್‌ಐಆರ್ ಕರ್ತವ್ಯದಿಂದ ಶಿಕ್ಷಕರನ್ನು ಮುಕ್ತಗೊಳಿಸಿ : ಮಧುಬಂಗಾರಪ್ಪ ಆಗ್ರಹ
"ಅನ್ಯಕಾರ್ಯಗಳಿಗೆ ಶಿಕ್ಷಕರ ಬಳಕೆ ತಡೆಗೆ ಮಸೂದೆ"

ಬೆಂಗಳೂರು : ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (SIR) ಕಾರ್ಯಕ್ಕೆ ಸರಕಾರಿ ಹಾಗೂ ಅನುದಾನಿತ ಶಾಲೆಗಳ ಶಿಕ್ಷಕರನ್ನು ನಿಯೋಜಿಸಿರುವುದರಿಂದ ಮಕ್ಕಳ ಶಿಕ್ಷಣಕ್ಕೆ ತೀವ್ರ ತೊಂದರೆಯಾಗುತ್ತಿದೆ. ಈ ಕಾರ್ಯ ವಿಳಂಬವಾಗುತ್ತಲೇ ಇದ್ದು, ಶಾಲೆಗಳಲ್ಲಿ ಸರಿಯಾಗಿ ಪಾಠ ನಡೆಯುತ್ತಿಲ್ಲ. ಹೀಗಾಗಿ ಶಿಕ್ಷಕರನ್ನು ಎಸ್‌ಐಆರ್ ಸೇರಿದಂತೆ ಇತರ ಸರ್ವೇ ಕಾರ್ಯಗಳಿಂದ ಹೊರಗಿಡಬೇಕು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಒತ್ತಾಯಿಸಿದರು.
ಬೆಂಗಳೂರಿನ ಗೃಹ ಕಚೇರಿಯಲ್ಲಿ ಶುಕ್ರವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, “ನಮ್ಮ ಶಿಕ್ಷಕರನ್ನು ಎಸ್‌ಐಆರ್ ಪ್ರಕ್ರಿಯೆಯಿಂದ ಹೊರಗಿಡಿ. ಮಕ್ಕಳ ವಿದ್ಯಾಭ್ಯಾಸಕ್ಕೆ ಬಹಳ ತೊಂದರೆಯಾಗುತ್ತಿದೆ ಎಂದು ಚುನಾವಣೆ ಆಯೋಗಕ್ಕೆ ಪತ್ರ ಬರೆದಿದ್ದರೂ ಯಾವುದೇ ಸ್ಪಂದನೆ ದೊರೆತಿಲ್ಲ. ಚುನಾವಣಾ ಆಯೋಗ ಮಾನವೀಯತೆ ಇಲ್ಲದಂತೆ ವರ್ತಿಸುತ್ತಿದೆ” ಎಂದು ಹೇಳಿದರು.
ಎಸ್‌ಐಆರ್ ಕಾರ್ಯದ ಹೊರೆಯಿಂದಾಗಿ ಶಿಕ್ಷಕರು ಬಳಲಿದ್ದಾರೆ. ಈ ಕಾರ್ಯ ವಿಳಂಬವಾಗುತ್ತಲೇ ಇದ್ದು, ಶಾಲೆಗಳಲ್ಲಿ ಸರಿಯಾಗಿ ಶೈಕ್ಷಣಿಕ ಚಟುವಟಿಕೆಗಳು ನಡೆಯದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಮುಂದಿನ ದಿನಗಳಲ್ಲಿ ಮಕ್ಕಳ ಫಲಿತಾಂಶದ ಮೇಲೂ ಪರಿಣಾಮ ಬೀರುವ ಆತಂಕವಿದೆ ಎಂದು ಸಚಿವರು ಹೇಳಿದರು. ಇದೇ ಕಾರಣಕ್ಕೆ ಜಾತಿ ಗಣತಿ, ವಿವಿಧ ಸಮೀಕ್ಷೆಗಳು ಹಾಗೂ ಆಡಳಿತಾತ್ಮಕ ಸರ್ವೇ ಕಾರ್ಯಗಳಿಗೆ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಶಿಕ್ಷಕರನ್ನು ಬಳಸಿಕೊಳ್ಳದಂತೆ ಹೊಸ ಮಸೂದೆ ರೂಪಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಶಿಕ್ಷಕರಿಗೆ ಪಾಠ ಬೋಧನೆಯೇ ಪ್ರಮುಖ ಜವಾಬ್ದಾರಿ
“ನಮ್ಮ ಶಿಕ್ಷಕರು ನಮಗೆ ಬಹಳ ಸಹಕಾರಿಯಾಗಿದ್ದಾರೆ. ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಮಕ್ಕಳಿಂದ ಉತ್ತಮ ಫಲಿತಾಂಶ ಬರಲು ಶಿಕ್ಷಕರ ಪರಿಣಾಮಕಾರಿ ಬೋಧನೆಯೇ ಪ್ರಮುಖ ಕಾರಣ. ಆದರೆ ಜಾತಿ ಗಣತಿ, ವಿವಿಧ ಸರ್ವೇ ಸೇರಿದಂತೆ ಹಲವು ಕೆಲಸಗಳಿಗೆ ಶಿಕ್ಷಕರನ್ನೇ ಬಳಸಿಕೊಳ್ಳುವ ವ್ಯವಸ್ಥೆ ನಿರ್ಮಾಣವಾಗಿದೆ. ಇದನ್ನು ಬದಲಾಯಿಸಲೇಬೇಕಿದೆ” ಎಂದು ಮಧು ಬಂಗಾರಪ್ಪ ಹೇಳಿದರು.
ಎಸ್‌ಐಆರ್ ಕರ್ತವ್ಯದಿಂದ ಶಿಕ್ಷಕರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಶಾಲಾ ಮಕ್ಕಳು ಮತ್ತು ಪೋಷಕರಿಂದ ದೂರುಗಳು ಬರುತ್ತಿವೆ. ಶಾಲೆಯಲ್ಲಿ ಶಿಕ್ಷಕರೇ ಇಲ್ಲ, ಮಧ್ಯಾಹ್ನದ ಊಟದ ಬಳಿಕ ಮಕ್ಕಳನ್ನು ಮನೆಗೆ ಕಳುಹಿಸಲಾಗುತ್ತಿದೆ ಎಂಬಂತಹ ದೂರುಗಳೂ ಬಂದಿವೆ. ಇಂತಹ ಪರಿಸ್ಥಿತಿ ಮುಂದುವರಿಯಬಾರದು ಎಂದು ಅವರು ಹೇಳಿದರು.
ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ಅವರು ಕೂಡ ಈ ವಿಚಾರವನ್ನು ಹಲವು ಬಾರಿ ಪ್ರಸ್ತಾಪಿಸಿ, ಮೇಲ್ಮನೆಯಲ್ಲಿ ಶಿಕ್ಷಕರನ್ನು ಎಸ್‌ಐಆರ್ ಸೇರಿದಂತೆ ಇತರೆ ಕೆಲಸಗಳಿಂದ ಮುಕ್ತಗೊಳಿಸುವಂತೆ ಒತ್ತಡ ಹಾಕಿದ್ದಾರೆ. ನನ್ನನ್ನು ಭೇಟಿಯಾದ ಪೋಷಕರು, ಶಿಕ್ಷಕರು, ಶಾಸಕರು ಹಾಗೂ ಇತರ ಜನ ಪ್ರತಿನಿಧಿಗಳು ʻಇದು ಅನ್ಯಾಯ, ಶಿಕ್ಷಕರಿಗೆ ಪಾಠ ಮಾಡುವ ಕೆಲಸ ಮಾತ್ರ ಕೊಡಿʼ ಎನ್ನುತ್ತಿದ್ದಾರೆ. ಆದರೆ ನಾವು ಎಷ್ಟೇ ಮನವಿ ಮಾಡಿದರೂ ಚುನಾವಣಾ ಆಯೋಗ ಕೇಳಿಸಿಕೊಳ್ಳುತ್ತಿಲ್ಲ. ಮಾನವೀಯತೆ ಮರೆತು ನಿರ್ಧಾರ ತೆಗೆದುಕೊಳ್ಳುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಶಿಕ್ಷಕರಿಗಾಗಿ ಪ್ರತ್ಯೇಕ ವಿಧೇಯಕ
“ಈ ವಿಚಾರಕ್ಕೆ ಸಂಬಂಧಿಸಿದಂತೆ ಇನ್ನು ಮುಂದೆ ಹೀಗಾಗ ಬಾರದು. ಶಾಲೆಗಳಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆಯಬೇಕಾದರೆ, ಶಿಕ್ಷಕರನ್ನು ಅನ್ಯ ಕೆಲಸಗಳಿಗೆ ಬಳಸಿಕೊಳ್ಳುವುದು ನಿಲ್ಲಬೇಕು. ಇದಕ್ಕಾಗಿ ಹೊಸ ವಿಧೇಯಕ ಸಿದ್ಧಪಡಿಸುತ್ತಿದ್ದೇನೆ. ಈಗಾಗಲೇ ಅಧಿಕಾರಿಗಳೊಂದಿಗೆ ಸಭೆ ನಡೆಸಿ ವಿಧೇಯಕವನ್ನು ಹೇಗೆ ರೂಪಿಸಬೇಕು ಎಂಬುದರ ಕುರಿತು ಚರ್ಚಿಸಿದ್ದೇನೆ. ಸಚಿವ ಸಂಪುಟದ ಮುಂದೆ ತಂದು, ಮುಂದಿನ ದಿನಗಳಲ್ಲಿ ಅಧಿವೇಶನದಲ್ಲಿ ಬಿಲ್ ಜಾರಿಗೆ ತರುವ ಪ್ರಯತ್ನ ಮಾಡುತ್ತೇವೆ” ಎಂದು ಮಧು ಬಂಗಾರಪ್ಪ ಹೇಳಿದರು.
ಚುನಾವಣೆ ಕಾರ್ಯಕ್ಕೆ ಕೆಲವೊಮ್ಮೆ ಸರ್ಕಾರಿ ನೌಕರರನ್ನು ಬಳಸಿಕೊಳ್ಳುವುದು ಅನಿವಾರ್ಯವಾಗಬಹುದು. ಆದರೆ ಶಾಲೆಗಳು ನಡೆಯುತ್ತಿರುವ ಸಂದರ್ಭದಲ್ಲಿ ಶಿಕ್ಷಕರನ್ನು ನಿರಂತರವಾಗಿ ಎಸ್‌ಐಆರ್‌ನಂತಹ ಸರ್ವೇ ಕಾರ್ಯಗಳಿಗೆ ನಿಯೋಜಿಸುವುದರಿಂದ ಮಕ್ಕಳ ಶಿಕ್ಷಣಕ್ಕೆ ಧಕ್ಕೆಯಾಗುತ್ತದೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
“ರಾಜ್ಯ ಸರ್ಕಾರದ ವತಿಯಿಂದ ವಿವಿಧ ಸಮೀಕ್ಷೆಗಳನ್ನು ನಡೆಸಿದ್ದೇವೆ. ಆದರೆ ಎಲ್ಲಿಯೂ ಮಕ್ಕಳ ಶಿಕ್ಷಣಕ್ಕೆ ತೊಂದರೆಯಾಗದಂತೆ ವ್ಯವಸ್ಥೆ ಮಾಡಿದ್ದೇವೆ. ಈಗ ಎಸ್‌ಐಆರ್‌ನಿಂದ ಮಾತ್ರ ನಮಗೆ ಸಾಕಷ್ಟು ತೊಂದರೆಯಾಗುತ್ತಿದೆ. ಯಾವುದೇ ಸರ್ಕಾರಿ ನೌಕರರನ್ನು ಕೇಳಿದರೂ ಎಸ್‌ಐಆರ್ ಕೆಲಸದಲ್ಲಿದ್ದೇವೆ ಎಂಬ ಉತ್ತರ ಬರುತ್ತಿದೆ. ಹೀಗಾದರೆ ಜನಸಾಮಾನ್ಯರು ತಮ್ಮ ಸಮಸ್ಯೆಗಳನ್ನು ಯಾರ ಬಳಿ ಹೇಳಿಕೊಳ್ಳಬೇಕು?” ಎಂದು ಪ್ರಶ್ನಿಸಿದರು.
ಶಾಲಾ ಶಿಕ್ಷಕರ ಕೊರತೆ ಮತ್ತು ಎಸ್‌ಐಆರ್ ಕರ್ತವ್ಯದಿಂದ ಬೋಧನೆಗೆ ಆಗುತ್ತಿರುವ ಅಡಚಣೆ ಕುರಿತು ಇತ್ತೀಚೆಗೆ CJP ಕೂಡ ಗಮನ ಸೆಳೆದಿತ್ತು. ಆ ಸಂಸ್ಥೆಯ ಪ್ರತಿನಿಧಿಗಳು ರಾಜ್ಯದ ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿ ಶಿಕ್ಷಕರ ನಿಯೋಜನೆಯಿಂದ ಉಂಟಾಗಿರುವ ಸಮಸ್ಯೆಗಳ ಬಗ್ಗೆ ನನ್ನೊಂದಿಗೆ ಚರ್ಚಿಸಿದ್ದರು. CJPಯ ಆಶುತೋಷ್ ರಾಂಕಾ ಅವರು ತಮ್ಮನ್ನು ಭೇಟಿ ಮಾಡಿ ರಾಜ್ಯದ ಸರ್ಕಾರಿ ಶಾಲೆಗಳ ಸ್ಥಿತಿಗತಿ ಕುರಿತು ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಪ್ರಮುಖವಾಗಿ ಶಿಕ್ಷಕರನ್ನು ಎಸ್‌ಐಆರ್ ಕಾರ್ಯದಿಂದ ಹೊರಗಿಡುವಂತೆ ಮನವಿ ಮಾಡಿದ್ದಾರೆ ಎಂದು ಸಚಿವರು ಹೇಳಿದರು.
ಸಿಜೆಪಿ ಅವರಿಗೆ ನಾನು ಉತ್ತರಿಸಿ, “ಇದು ರಾಷ್ಟ್ರೀಯ ವಿಷಯ. ಬರೀ ನಮ್ಮ ರಾಜ್ಯಕ್ಕೆ ಮಾತ್ರ ಸೀಮಿತವಾದ ಸಮಸ್ಯೆಯಲ್ಲ. ಕೇಂದ್ರ ಸರ್ಕಾರ ಮತ್ತು ಚುನಾವಣೆ ಆಯೋಗ ಈ ವಿಚಾರದಲ್ಲಿ ಮಾನವೀಯವಾಗಿ ನಡೆದುಕೊಳ್ಳಬೇಕು. ಶಿಕ್ಷಕರನ್ನು ಈ ರೀತಿಯಲ್ಲಿ ಬಳಸಿಕೊಳ್ಳುವುದನ್ನು ಶಿಕ್ಷಕರ ದುರ್ಬಳಕೆ ಎನ್ನದೇ ಬೇರೆ ವಿಧಿಯಿಲ್ಲ” ಎಂದು ಉತ್ತರಿಸಿದ್ದೇನೆ ಎಂದರು.
ಶೂ-ಸಾಕ್ಸ್ ಗುಣಮಟ್ಟ ಕಳಪೆ ಎಂಬುದು ಸುಳ್ಳು
ಶಾಲಾ ಮಕ್ಕಳಿಗೆ ವಿತರಿಸಲಾಗುತ್ತಿರುವ ಶೂ ಮತ್ತು ಸಾಕ್ಸ್‌ಗಳ ಗುಣಮಟ್ಟ ಕಳಪೆಯಾಗಿದೆ ಎಂಬ ಆರೋಪದ ಕುರಿತು ಪ್ರತಿಕ್ರಿಯಿಸಿದ ಸಚಿವರು, “ಶೂ-ಸಾಕ್ಸ್ ಗುಣಮಟ್ಟ ಕಳಪೆ ಎಂಬುದು ಸುಳ್ಳು. ಆದರೆ ಸೈಜ್‌ನಲ್ಲಿ ವ್ಯತ್ಯಾಸವಾಗಿರುವುದನ್ನು ಒಪ್ಪಿಕೊಳ್ಳುತ್ತೇನೆ” ಎಂದರು.
ಲೋಕಾಯುಕ್ತರು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸುವ ಎರಡು ದಿನಗಳ ಮುನ್ನವೇ ತಾವು ಈ ಕುರಿತು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾಗಿ ತಿಳಿಸಿದ ಅವರು, ಎಲ್ಲಾ ಜಿಲ್ಲೆಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ನೇತೃತ್ವದಲ್ಲಿ ಸಮಿತಿ ರಚಿಸಿ, ಶಾಲೆಗಳಿಗೆ ಭೇಟಿ ನೀಡಿ ವರದಿ ನೀಡುವಂತೆ ಸೂಚಿಸಲಾಗಿದೆ ಎಂದರು.
“ಯಾವ ಮಕ್ಕಳಿಗೆ ಸೈಜ್ ಸಮಸ್ಯೆ ಇದೆಯೋ ಅಂತಹ ಮಕ್ಕಳಿಗೆ ಬೇರೆ ಶೂ ಮತ್ತು ಸಾಕ್ಸ್ ವಿತರಿಸುವಂತೆ ಸೂಚಿಸಲಾಗಿದೆ. ಮಕ್ಕಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು” ಎಂದು ಮಧು ಬಂಗಾರಪ್ಪ ಹೇಳಿದರು.






