ಬೆಂಗಳೂರು | ನ್ಯಾಯಾಲಯದ ತೀರ್ಪಿಗೆ ಮೊದಲೇ ಮಡಿವಾಳ ಸ್ಫೋಟ ಪ್ರಕರಣದ ವಿಚಾರಣಾಧೀನ ಕೈದಿ ಮೃತ್ಯು

Photo | deccanherald
ಬೆಂಗಳೂರು: 2008ರ ಮಡಿವಾಳ ಸರಣಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ಬಂಧಿತರಾಗಿದ್ದ ವಿಚಾರಣಾಧೀನ ಕೈದಿಯೋರ್ವರು ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಮೃತಪಟ್ಟಿದ್ದಾರೆ.
ಅಬ್ದುಲ್ ಖಾದರ್ (69) ಮೃತಪಟ್ಟ ವಿಚಾರಣಾಧೀನ ಕೈದಿ.
“2010ರಿಂದ ನ್ಯಾಯಾಂಗ ಬಂಧನದಲ್ಲಿದ್ದ ಖಾದರ್ಗೆ ಮುಂಜಾನೆ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿದೆ. ಜೈಲು ಸಿಬ್ಬಂದಿ ಆತನನ್ನು ಚಿಕಿತ್ಸೆಗಾಗಿ ಜಯದೇವ ಆಸ್ಪತ್ರೆಗೆ ರವಾನಿಸಿದ್ದಾರೆ. ಆದರೆ ದಾರಿ ಮಧ್ಯೆ ಹೃದಯಾಘಾತವಾಗಿ ಮೃತಪಟ್ಟಿದ್ದಾರೆ” ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಸಾವಿನ ಕುರಿತು ಜೈಲು ಅಧಿಕಾರಿಗಳು ಅವರ ಕುಟುಂಬದ ಸದಸ್ಯರಿಗೆ ಮಾಹಿತಿ ನೀಡಿದ್ದಾರೆ.
ಈ ಕುರಿತು ಜೈಲು ಅಧಿಕಾರಿಗಳ ದೂರಿನ ಆಧಾರದ ಮೇಲೆ ಅಸ್ವಾಭಾವಿಕ ಸಾವು ಪ್ರಕರಣ ದಾಖಲಾಗಿದೆ. ಶನಿವಾರ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಯಲಿದೆ ಎಂದು ಪೊಲೀಸ್ ಅಧಿಕಾರಿಯೋರ್ವರು ತಿಳಿಸಿದ್ದಾರೆ.
Next Story




