ಮತ್ತೆ ಸಚಿವ ಸಂಪುಟ ದರ್ಜೆ ಸ್ಥಾನಮಾನ ನೀಡಿ : ಸಿಎಂಗೆ ಕಸಾಪ ಅಧ್ಯಕ್ಷ ಮಹೇಶ್ ಜೋಶಿ ಪತ್ರ

ಡಾ.ಮಹೇಶ್ ಜೋಶಿ
ಬೆಂಗಳೂರು : ‘ಕಸಾಪ ಅಧ್ಯಕ್ಷರಿಗೆ ನೀಡಿದ್ದ ಸಚಿವ ಸಂಪುಟ ದರ್ಜೆ ಸ್ಥಾನಮಾನವನ್ನು ಮತ್ತೆ ನೀಡಬೇಕು. ಜತೆಗೆ ಅಧ್ಯಕ್ಷರ ಘನತೆ, ಗೌರವಗಳನ್ನು ಮರಳಿ ಸ್ಥಾಪಿಸಬೇಕು’ ಎಂದು ಕಸಾಪ ಅಧ್ಯಕ್ಷ ಡಾ.ಮಹೇಶ್ ಜೋಶಿ ಕೋರಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವ ಮಹೇಶ್ ಜೋಶಿ, ಸಚಿವ ಸಂಪುಟ ದರ್ಜೆ ಸ್ಥಾನಮಾನವನ್ನು ಮರಳಿ ನೀಡುವ ಮೂಲಕ ಕನ್ನಡ ಸಾಹಿತ್ಯ ಪರಿಷತ್ ಮತ್ತು ಕರ್ನಾಟಕ ಸರಕಾರದ ನಡುವಿನ ಸೌಹಾರ್ದವನ್ನು ಕಾಪಾಡಬೇಕೆಂದು ಕನ್ನಡಿಗರ ಪರವಾಗಿ ವಿನಂತಿ ಮಾಡುತ್ತೇನೆ ಎಂದು ಅವರು ಉಲ್ಲೇಖಿಸಿದ್ದಾರೆ.
ಪರಿಷತ್ ಅಧ್ಯಕ್ಷರಿಗೆ ಇತಿಹಾಸದಲ್ಲಿಯೇ ಮೊದಲ ಬಾರಿ ಸಚಿವ ಸಂಪುಟ ದರ್ಜೆ ಸ್ಥಾನಮಾನವನ್ನು ನೀಡಲಾಗಿದೆ. ಸಚಿವ ಸ್ಥಾನಮಾನಕ್ಕೆ ದೊರಕುವ ಇಂಧನ ಭತ್ಯೆ, ನೀರು, ವಿದ್ಯುತ್ ಸೌಲಭ್ಯ, ಸಿಬ್ಬಂದಿ ನೇಮಕಾತಿ ಮುಂತಾದ ಸೌಲಭ್ಯಗಳನ್ನು ಬಳಸಿಕೊಳ್ಳದೇ, ಕೇವಲ ಶಿಷ್ಟಾಚಾರ ಹಾಗೂ ಕನ್ನಡದ ಹಿತದೃಷ್ಠಿಯಿಂದ ಅನಿವಾರ್ಯತೆ ಬಂದಾಗ ಮಾತ್ರ ಕೆಲವು ಸೌಲಭ್ಯಗಳನ್ನು ಬಳಸಿ ಕೊಂಡಿದ್ದು, ಇದರಿಂದ ಕಸಾಪಗೆ ಯಾವುದೇ ಆರ್ಥಿಕ ಹೊರೆಯಾಗಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಸಚಿವ ಸಂಪುಟ ಸ್ಥಾನಮಾನದ ಆದೇಶವನ್ನು ಹಿಂಪಡೆಯುವಾಗ ರಾಜ್ಯ ಸರಕಾರ ಸೌಜನ್ಯಕ್ಕಾದರೂ ನನ್ನ ಪ್ರತಿಕ್ರಿಯೆ ಕೇಳದೆ ಏಕಮುಖ ಚಿಂತನೆಯಿಂದ ಕೈಗೊಂಡ ಕ್ರಮವು ‘ನೈಸರ್ಗಿಕ ನ್ಯಾಯ ಪ್ರಕ್ರಿಯೆಗೆ’ ವಿರುದ್ಧವಾಗಿದೆ. ನನಗೆ ನೀಡಿದ ‘ವೈಯಕ್ತಿಕ ಸ್ಥಾನಮಾನವಾಗಿರದೆ ಕಸಾಪ ಅಧ್ಯಕ್ಷರಿಗೆ ನೀಡಿದ ಸ್ಥಾನಮಾನವಾಗಿದೆ ಎಂದು ಅವರು ಹೇಳಿದ್ದಾರೆ.
ಕಸಾಪ ಅಧ್ಯಕ್ಷರ ಚುನಾವಣೆಯ ಸಂದರ್ಭದಿಂದಲೂ, ಹಿರಿಯ ಸಾಹಿತಿಗಳಾದ ಪ್ರೊ.ಎಸ್.ಜಿ. ಸಿದ್ದರಾಮಯ್ಯ, ಜಾಣಗೆರೆ ವೆಂಕಟರಾಮಯ್ಯ, ಡಾ.ಬಂಜಗೆರೆ ಜಯಪ್ರಕಾಶ್, ಜಯಪ್ರಕಾಶ ಗೌಡ, ಮೀರಾ ಶಿವಲಿಂಗಯ್ಯ, ಸಿ.ಕೆ.ರಾಮೇಗೌಡ, ಆರ್.ಜಿ.ಹಳ್ಳಿ ನಾಗರಾಜ್, ವಿಮಲಾ ಕೆ.ಎಸ್., ಸುನಂದ ಜಯರಾಂ ಮುಂತಾದವರ ಒಂದು ಗುಂಪು ನನ್ನ ಬಗ್ಗೆ ಅಸಹನೆಯಿಂದ ಯಾವಾಗಲೂ ನನ್ನ ವಿರುದ್ಧ ವೈಯಕ್ತಿಕವಾಗಿ ವಿರೋಧ ಮಾಡುತ್ತಾ ಮಾಧ್ಯಮಗಳಲ್ಲಿ ಅಪಪ್ರಚಾರ ಮಾಡುತ್ತಿದೆ ಎಂದು ಮಹೇಶ್ ಜೋಶಿ ದೂರಿದ್ದಾರೆ.







