ಜಿಬಿಎ | ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆಯನ್ನು ಸಮರ್ಪಕವಾಗಿ ನಡೆಸಲು ಕ್ರಮ: ಮಹೇಶ್ವರ್ ರಾವ್

ಬೆಂಗಳೂರು : ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆಯನ್ನು ಸಮರ್ಪಕವಾಗಿ ನಡೆಸಲು ಅಗತ್ಯವಿರುವ ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ತಿಳಿಸಿದರು.
ಗುರುವಾರ ನಗರದಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ(ಎಸ್‍ಐಆರ್)ಗೆ ಸಂಬಂಧಿಸಿದಂತೆ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಎಸ್‍ಐಆರ್‍ಗಾಗಿ ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು, ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಈಗಾಗಲೇ ಶೇ.72ರಷ್ಟು ಮ್ಯಾಪಿಂಗ್ ಕಾರ್ಯ ಪೂರ್ಣಗೊಂಡಿದೆ. ಉಳಿದಿರುವ ಮ್ಯಾಪಿಂಗ್ ಕಾರ್ಯವನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಸೂಚನೆ ನೀಡಲಾಗಿದೆ ಎಂದು ಹೇಳಿದರು.
ಬೂತ್ ಮಟ್ಟದ ಅಧಿಕಾರಿಗಳು ಮನೆ-ಮನೆ ಭೇಟಿ ನೀಡಿ ಪರಿಶೀಲನೆ ನಡೆಸಿ, ನಮೂನೆಗಳ ಮೂಲಕ ಅಗತ್ಯ ಮಾಹಿತಿಯನ್ನು ಸಂಗ್ರಹಿಸಲಿದ್ದಾರೆ. ಇದಕ್ಕೆ ನಾಗರಿಕರು ಸಂಪೂರ್ಣ ಸಹಕಾರ ನೀಡಬೇಕು. ಬಳಿಕ ದತ್ತಾಂಶವನ್ನು ಪರಿಶೀಲಿಸಿ, ತಾಳೆ ಮಾಡಿ ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುವುದು ಎಂದು ಮಹೇಶ್ವರ್ ರಾವ್ ತಿಳಿಸಿದರು.
ಅರ್ಹ ಮತದಾರರು ಚುನಾವಣಾ ಪ್ರಕ್ರಿಯೆಯಿಂದ ವಂಚಿತರಾಗಬಾರದು ಹಾಗೂ ಯಾವುದೆ ಅನರ್ಹ ಹೆಸರುಗಳು ಮತದಾರರ ಪಟ್ಟಿಯಲ್ಲಿ ಉಳಿಯದಂತೆ ನೋಡಿಕೊಳ್ಳುವ ಉದ್ದೇಶದಿಂದ ಭಾರತೀಯ ಚುನಾವಣಾ ಆಯೋಗವು ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಚುನಾವಣಾ ಆಯೋಗದ ಮಾರ್ಗಸೂಚಿಗಳ ಅನುಸಾರ ಪರಿಷ್ಕರಣೆ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಅವರು ಹೇಳಿದರು.
ನಮೂನೆಗಳ ವಿಲೇವಾರಿಗೆ ಕ್ರಮ: ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ-2026ರ ಪೂರ್ವಭಾವಿ ಚಟುವಟಿಕೆಯ ಅಂಗವಾಗಿ 2002ರ ಮತದಾರರ ಪಟ್ಟಿಗೆ 2025ರ ಮತದಾರರ ಪಟ್ಟಿಯನ್ನು ಮ್ಯಾಪಿಂಗ್ ಮಾಡುವ ಕಾರ್ಯ ಪ್ರಗತಿಯಲ್ಲಿದೆ ಎಂದು ಅವರು ತಿಳಿಸಿದರು.
ಮುಖ್ಯ ಚುನಾವಣಾಧಿಕಾರಿಯ ನಿರ್ದೇಶನದಂತೆ ಜೂ.16ರಂದು ಇ-ಮತದಾರರ ಪಟ್ಟಿ ಸ್ಥಗಿತಗೊಳ್ಳಲಿದೆ. ಆದುದರಿಂದ, ಈ ಅವಧಿಯೊಳಗೆ ಬಾಕಿ ಉಳಿದಿರುವ ನಮೂನೆ-6, 6ಎ, 7 ಹಾಗೂ 8ರ ಅರ್ಜಿಗಳನ್ನು ವಿಲೇವಾರಿ ಮಾಡಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಈ ಕಾರ್ಯಕ್ಕೆ ಸಾರ್ವಜನಿಕರು ಸಹಕಾರ ನೀಡುವಂತೆ ಮಹೇಶ್ವರ್ ರಾವ್ ಕೋರಿದರು.
ಬಿಎಲ್‍ಒ, ಬಿಎಲ್‍ಎಗಳೊಂದಿಗೆ ಸಭೆ: ಮನೆ-ಮನೆ ಸಮೀಕ್ಷೆ ಕಾರ್ಯ ಆರಂಭಿಸುವ ಮುನ್ನ ಮತದಾರರ ನೋಂದಣಾಧಿಕಾರಿಗಳು ಹಾಗೂ ಬೂತ್ ಮಟ್ಟದ ಅಧಿಕಾರಿಗಳು ಬೂತ್ ಮಟ್ಟದ ಏಜೆಂಟ್‍ಗಳೊಂದಿಗೆ ಸಭೆ ನಡೆಸಿ, ಎಸ್‍ಐಆರ್ ವೇಳಾಪಟ್ಟಿ ಹಾಗೂ ಕಾರ್ಯಚಟುವಟಿಕೆಗಳ ಕುರಿತು ಮಾಹಿತಿ ನೀಡಲಿದ್ದಾರೆ ಎಂದು ಅವರು ತಿಳಿಸಿದರು.
ರಾಜಕೀಯ ಪಕ್ಷಗಳು ಎಸ್‍ಐಆರ್ ಕಾರ್ಯಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಆಯೋಗವು ಅವಕಾಶ ಕಲ್ಪಿಸಿದೆ. ಕರಡು ಮತದಾರರ ಪಟ್ಟಿ ಪ್ರಕಟಿಸುವವರೆಗೆ ಪ್ರತಿದಿನ 50 ನಮೂನೆಗಳನ್ನು ಬಿಎಲ್‍ಒಗಳಿಗೆ ಸಲ್ಲಿಸಲು ಅವಕಾಶವಿದ್ದು, ಕರಡು ಮತದಾರರ ಪಟ್ಟಿ ಪ್ರಕಟವಾದ ನಂತರ ದಿನಕ್ಕೆ 10 ನಮೂನೆಗಳನ್ನು ಮೀರದಂತೆ ಸಲ್ಲಿಸಲು ಅವಕಾಶವಿರುತ್ತದೆ ಎಂದು ಮಹೇಶ್ವರ್ ರಾವ್ ಹೇಳಿದರು.
ಬೂತ್ ಲೆವಲ್ ಏಜೆಂಟ್‍ಗಳ ಪಟ್ಟಿ ನೀಡಿ: ನೋಂದಾಯಿತ ಹಾಗೂ ಮಾನ್ಯತೆ ಪಡೆದ ರಾಜಕೀಯ ಪಕ್ಷಗಳು ಪ್ರತಿ ಮತಗಟ್ಟೆಗೆ ಒಬ್ಬರಂತೆ ಬೂತ್ ಲೆವಲ್ ಏಜೆಂಟ್‍ಗಳನ್ನು (ಬಿಎಲ್‍ಎ) ನೇಮಕ ಮಾಡಿ, ಅವರ ಪಟ್ಟಿಯನ್ನು ಕೂಡಲೇ ಸಲ್ಲಿಸಬೇಕು. ಮತಗಟ್ಟೆ ಅಧಿಕಾರಿಗಳಿಗೆ ಎಲ್ಲಾ ಅರ್ಹ ಮತದಾರರ ನೋಂದಣಿ ಕಾರ್ಯದಲ್ಲಿ ಸಹಕಾರ ನೀಡುವಂತೆ ಕೋರಲಾಗಿದೆ ಎಂದು ಅವರು ತಿಳಿಸಿದರು.
ಸ್ವೀಪ್ ಚಟುವಟಿಕೆಗಳಿಗೆ ಚಾಲನೆ: ಬೆಂಗಳೂರು ನಗರದಲ್ಲಿ ಎಸ್‍ಐಆರ್ ಕುರಿತು ನಾಗರಿಕರಲ್ಲಿ ಅರಿವು ಮೂಡಿಸಲು ಎಲ್ಲ ನಗರ ಪಾಲಿಕೆಗಳಲ್ಲಿ ಐಇಸಿ ಹಾಗೂ ಸ್ವೀಪ್ ಚಟುವಟಿಕೆಗಳನ್ನು ಆರಂಭಿಸಲು ನಿರ್ದೇಶನ ನೀಡಲಾಗುವುದು. ಅಲ್ಲದೆ, ಆಟೋ ಟಿಪ್ಪರ್‍ಗಳಲ್ಲಿ ಧ್ವನಿವರ್ಧಕಗಳ ಮೂಲಕ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಮಹೇಶ್ವರ್ ರಾವ್ ತಿಳಿಸಿದರು.
ಸಹಕಾರ ನೀಡಲು ಮನವಿ: ಎಲ್ಲ ಅರ್ಹ ಮತದಾರರನ್ನು ಮತದಾರರ ಪಟ್ಟಿಯಲ್ಲಿ ಸೇರಿಸಲು ಹಾಗೂ ದೋಷರಹಿತ ಮತದಾರರ ಪಟ್ಟಿಯನ್ನು ಸಿದ್ಧಪಡಿಸಲು ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುವುದು. ಈ ಕಾರ್ಯದಲ್ಲಿ ಸಾರ್ವಜನಿಕರು ತಮ್ಮ ಸಹಕಾರ ನೀಡುವಂತೆ ಅವರು ಮನವಿ ಮಾಡಿದರು.
ಈ ವೇಳೆ ಚುನಾವಣಾ ವಿಭಾಗದ ವಿಶೇಷ ಆಯುಕ್ತರಾದ ಸುಷ್ಮಾ ಗೋಡಬೋಲೆ, ಅಪರ ಜಿಲ್ಲಾ ಚುನಾವಣಾಧಿಕಾರಿ ಜಗದೀಶ್, ಸಹಾಯಕ ಆಯುಕ್ತ ಎಂ.ಶ್ರೀನಿವಾಸ್ ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.
ಬೆಂಗಳೂರು ವ್ಯಾಪ್ತಿಯಲ್ಲಿ ಮ್ಯಾಪಿಂಗ್ ವಿವರ: ಬೆಂಗಳೂರು ಜಿಲ್ಲೆ : ಶೇ.78.93, ಕೇಂದ್ರ ನಗರ ಜಿಲ್ಲೆ : ಶೇ.67.53, ದಕ್ಷಿಣ ನಗರ ಜಿಲ್ಲೆ : ಶೇ.67.93, ಉತ್ತರ ನಗರ ಜಿಲ್ಲೆ : ಶೇ.69.23. ಒಟ್ಟಾರೆ ಒಟ್ಟು ಶೇ.72ರಷ್ಟು ಮ್ಯಾಪಿಂಗ್ ಪ್ರಗತಿಯಾಗಿದೆ.






