ಒಂದು ವೇಳೆ ಸಿಎಂ ಬದಲಾವಣೆ ಹಂತಕ್ಕೆ ಬಂದರೆ ಮಲ್ಲಿಕಾರ್ಜುನ ಖರ್ಗೆ ಅವರನ್ನು ಮುಖ್ಯಮಂತ್ರಿ ಮಾಡಬೇಕು: ಬಸವರಾಜ ರಾಯರಡ್ಡಿ

ಬಸವರಾಜ ರಾಯರೆಡ್ಡಿ
ಬೆಂಗಳೂರು/ಕೊಪ್ಪಳ: ಈಗಿನ ಪರಿಸ್ಥಿತಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬದಲಾವಣೆ ಮಾಡುವುದಿಲ್ಲ. ಆದರೆ, ಒಂದು ವೇಳೆ ಬದಲಾವಣೆ ಹಂತಕ್ಕೆ ಬಂದರೆ ಅವರಿಗೆ ಪರ್ಯಾಯವಾಗಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ಮುಖ್ಯಮಂತ್ರಿ ಮಾಡಬೇಕು ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ತಿಳಿಸಿದ್ದಾರೆ.
ರವಿವಾರ ಇಲ್ಲಿನ ಕೋಳೂರು-ಕಾಟ್ರಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಅವರನ್ನು ಬದಲಾವಣೆ ಮಾಡಬೇಕೆಂದು ಪಕ್ಷ ನಿರ್ಧರಿಸಿದರೆ ಕಡ್ಡಾಯವಾಗಿ ಶಾಸಕರ ಅಭಿಪ್ರಾಯ ಕೇಳಬೇಕು ಎಂದು ಉಲ್ಲೇಖಿಸಿದರು.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗಬಾರದು ಎಂದು ನಾನು ಹೇಳಿಲ್ಲ, ಸಿಎಂ ಆಗುತ್ತೇನೆ ಎಂದು ಶಿವಕುಮಾರ್ ಎಲ್ಲಿಯಾದರೂ ಹೇಳಿದ್ದಾರೆಯೇ ಎಂದು ಪ್ರಶ್ನಿಸಿದ ಅವರು, ನಾನು ಯಾರ ಬೆಂಬಲಿಗನೂ ಅಲ್ಲ. ಕಾಂಗ್ರೆಸ್ ಪಕ್ಷದ ಬೆಂಬಲಿಗ, ಸಿದ್ದರಾಮಯ್ಯನವರ ಆಡಳಿತ ವೈಖರಿ ಚೆನ್ನಾಗಿದ್ದು, ಅವರ ಬಗ್ಗೆ ಪ್ರೀತಿಯಿದೆ. ಆದ್ದರಿಂದ ಅವರ ಪರವಾಗಿ ಮಾತನಾಡುತ್ತೇನೆ ಎಂದು ಅವರು ನುಡಿದರು.
ಕಳೆದ ವಾರ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾಗಿ ರಾಜಕೀಯ ವಿಚಾರಗಳನ್ನು ಚರ್ಚಿಸಿದ್ದೇನೆ. ರಾಜ್ಯದಲ್ಲಿ ಅನಗತ್ಯವಾಗಿ ಸೃಷ್ಟಿಯಾಗುತ್ತಿರುವ ಗೊಂದಲಗಳಿಗೆ ಅಂತ್ಯ ಹಾಡಬೇಕು ಎಂದು ಮನವಿ ಮಾಡಿದ್ದೇನೆ. ಸಚಿವ ಸಂಪುಟ ಪುನರ್ ರಚನೆ ಮಾಡಿ 25 ಜನ ಸಚಿವರನ್ನು ತೆಗೆದು ಹೊಸಬರು ಹಾಗೂ ಹಿರಿಯರಿಗೆ ಅವಕಾಶ ಕೊಡುವಂತೆ ಕೇಳಿದ್ದೇನೆ ಎಂದೂ ರಾಯರೆಡ್ಡಿ ಹೇಳಿದರು.






