‘ಮಂಗಳೂರು ಐಟಿ ಪಾರ್ಕ್’ ನಿಯಮ ಸರಳೀಕರಿಸಲು ಕ್ರಮ: ಸಚಿವ ಪ್ರಿಯಾಂಕ್ ಖರ್ಗೆ

ಬೆಳಗಾವಿ(ಸುವರ್ಣ ವಿಧಾನಸೌಧ): ಉಡುಪಿ, ಮಂಗಳೂರು ಮತ್ತು ಮಣಿಪಾಲದಲ್ಲಿ ಬಂಡವಾಳ ಹೂಡಿಕೆ ಮತ್ತು ಉದ್ಯೋಗ ಸೃಷ್ಟಿಸಲು ವಿಫುಲ ಅವಕಾಶಗಳಿವೆ. ಆ ಹಿನ್ನೆಲೆಯಲ್ಲಿ ಸಾರ್ವಜನಿಕ ಖಾಸಗಿ ಸಹಭಾಗಿತ್ವ(ಪಿಪಿಪಿ)ದಲ್ಲಿ ವಾಣಿಜ್ಯ ಕಚೇರಿ ಟೆಕ್ ಪಾರ್ಕ್(ಐಟಿ ಪಾರ್ಕ್) ಸ್ಥಾಪಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಬುಧವಾರ ವಿಧಾನಸಭೆ ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿ ಸದಸ್ಯ ಡಾ. ವೈ ಭರತ್ ಶೆಟ್ಟಿ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಅವರು, ಮಂಗಳೂರು ನಗರದ ಕಸಬಾ ಹೋಬಳಿ ದೇರೇಬೈಲು (ಬ್ಲೂಬೆರಿ ಹಿಲ್ಸ್ ರಸ್ತೆ) ಗ್ರಾಮದಲ್ಲಿ ಐಟಿ ಪಾರ್ಕ್ ಸ್ಥಾಪಿಸಲು ಟೆಂಡರ್ ಆಹ್ವಾನಿಸಲಾಗಿದೆ. ಕಟ್ಟಡ ವಿನ್ಯಾಸ ನಿರ್ಮಾಣ, ಹಣಕಾಸು ಕಾರ್ಯಾಚರಣೆ ಮತ್ತು ವರ್ಗಾವಣೆಗಾಗಿ 30 ವರ್ಷಗಳನ್ನು ನಿಗದಿಪಡಿಸಲಾಗಿದೆ. ಡಿಸೆಂಬರ್ 15ಕ್ಕೆ ಟೆಂಡರ್ ಬಿಡ್ ನಡೆಯಲಿದೆ ಎಂದರು.
ಉದ್ದೇಶಿತ ಐಟಿ ಪಾರ್ಕ್ ಸ್ಥಾಪಿಸುವ ಮೊದಲೇ ಆ ಭಾಗದಲ್ಲಿ ಐಟಿ ಕಂಪೆನಿಗಳು, ಶಿಕ್ಷಣ ಸಂಸ್ಥೆಗಳು, ಉದ್ಯಮಿಗಳು, ಶಾಸಕರು ಸೇರಿದಂತೆ ಎಲ್ಲರೊಂದಿಗೆ ಸಮಾಲೋಚನೆ ನಡೆಸಿದ್ದು, ಉಡುಪಿ, ಮಂಗಳೂರು ಮತ್ತು ಮಣಿಪಾಲ ಮೂರು ನಗರಗಳನ್ನು ಸೇರಿಸಿ ಒಂದು ಕ್ಲಷ್ಟರ್ ಮಾಡಲಾಗಿದೆ. ಉದ್ಯೋಗ ಸೃಷ್ಟಿಸುವುದರಿಂದ ಸರಕಾರಕ್ಕೆ ಲಾಭವಾಗಲಿದೆ ಎಂದು ಪ್ರಿಯಾಂಕ್ ಖರ್ಗೆ ವಿವರ ನೀಡಿದರು.
ಆರಂಭಕ್ಕೆ ವಿಷಯ ಪ್ರಸ್ತಾಪಿಸಿದ ಬಿಜೆಪಿ ಸದಸ್ಯ ಭರತ್ ಶೆಟ್ಟಿ, ಮಂಗಳೂರಿನ ಐಟಿ ಪಾರ್ಕ್ ಯೋಜನೆ ಮತ್ತು ಪ್ರಾದೇಶಿಕ ಆರ್ಥಿಕ ಅಭಿವೃದ್ಧಿಗೆ ಅನುಕೂಲಕರ. ಆದರೆ, ಭೂಮಿ ಮೌಲ್ಯದ ಶೇ.50ರಷ್ಟು ಠೇವಣಿ ಕೇಳುವುದರಿಂದ ನಿರ್ಮಾಣ ಮಾಡುವವರಿಗೆ ಬ್ಯಾಂಕ್ ಸಾಲ ಸಿಗುವುದಿಲ್ಲ. ಸರಕಾರಿ ಆಸ್ತಿಗಳಲ್ಲಿ ಇಂತಹ ನಿಯಮಗಳು ಕಾರ್ಯಸಾಧ್ಯವಲ್ಲ, ಆದುದರಿಂದ ಈ ನೀತಿಯನ್ನು ಮರುಪರಿಶೀಲಿಸಬೇಕು ಎಂದು ಮನವಿ ಮಾಡಿದರು. ಡಿ.15ಕ್ಕೆ ಟೆಂಡರ್ ಪ್ರಕ್ರಿಯೆ ನಡೆಯಲಿದ್ದು, ಅದು ಪೂರ್ಣಗೊಳ್ಳಲಿ. ಆ ಬಳಿಕ ಅಗತ್ಯವಿದ್ದರೆ ಮರು ಪರಿಶೀಲನೆ ನಡೆಸಲಾಗುವುದು ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.







