ಮನೋರಂಜನ್ ಸಂಸದ ಪ್ರತಾಪ್‍ಸಿಂಹ ಅವರ ಐಟಿ ಸೆಲ್‍ನಲ್ಲಿ ಕೆಲಸ ಮಾಡುತ್ತಿದ್ದ: ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್

ಬೆಂಗಳೂರು: ಎರಡು ಕೋಮುಗಳು, ಜನಸಾಮಾನ್ಯರ ನಡುವೆ ಕಿಡಿ ಹೊತ್ತಿಸುವುದರಲ್ಲಿ ಸಂಸದ ಪ್ರತಾಪ್ ಸಿಂಹ ಮೊದಲನೇ ಸ್ಥಾನದಲ್ಲಿ ನಿಲ್ಲುತ್ತಾರೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಹೇಳಿದ್ದಾರೆ.
ಶುಕ್ರವಾರ ನಗರದ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ʼಸಂಸತ್ ಭವನಕ್ಕೆ ನುಗ್ಗಿದ್ದ ಆರೋಪಿ ಮನೋರಂಜನ್ ಪ್ರತಾಪ್‍ಸಿಂಹ ಅವರ ಐಟಿ ಸೆಲ್‍ನಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿ. ಈ ಕೂಡಲೇ ಪ್ರತಾಪ್‍ಸಿಂಹ ಅವರ ಜಲದರ್ಶಿನಿ ಕಚೇರಿಯನ್ನು ಸೀಲ್ ಮಾಡಬೇಕು ಎಂದು ಮೈಸೂರು ಜಿಲ್ಲಾ ವರಿಷ್ಠಾಧಿಕಾರಿಗೆ ದೂರು ಸಲ್ಲಿಸಿದ್ದೇವೆʼ ಎಂದು ಅವರು ತಿಳಿಸಿದರು.
ಸಂಸತ್ ಭವನಕ್ಕೆ ನುಗ್ಗಿದ್ದ ಆರೋಪಿಗಳಾದ ಸಾಗರ್ ಶರ್ಮಾ, ಮನೋರಂಜನ್ ಮತ್ತು ಲಲಿತ್ ಝಾ, ಸಂಸದ ಪ್ರತಾಪ್ ಸಿಂಹ ಅವರ ಕಚೇರಿಯಲ್ಲಿ ಅವರ ಜೊತೆಯೇ ಮೂರು ಬಾರಿ ಸಭೆ ನಡೆಸಿದ್ದಾರೆ. ಈ ಕೂಡಲೇ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ವಶಪಡಿಸಿಕೊಳ್ಳಬೇಕು ಎಂದು ಎಂ.ಲಕ್ಷ್ಮಣ್ ಒತ್ತಾಯಿಸಿದರು.
ದೇಶದಲ್ಲಿ ಸಣ್ಣ ಘಟನೆ ನಡೆದರೆ ಸಾಕು ಟ್ವೀಟ್, ಫೇಸ್‍ಬುಕ್ ಲೈವ್ ಮೂಲಕ ಬಂದು ಅರಚಿಕೊಳ್ಳುವ ಸಂಸದ ಪ್ರತಾಪ್‍ಸಿಂಹ, ಈ ಘಟನೆ ಸಂಬಂಧ ಹೇಳಿಕೆಯನ್ನೇ ನೀಡುತ್ತಿಲ್ಲ. ಸಾಗರ್ ಶರ್ಮಾ ಎನ್ನುವ ವ್ಯಕ್ತಿಗೆ ಅವರು ರೇಡಿಯೋ ತಯಾರಿಕಾ ತರಬೇತಿ ಕೊಡಿಸಿದ್ದಾರೆ ಎನ್ನುವ ಮಾಹಿತಿಯಿದ್ದು, ಕೂಡಲೇ ಉತ್ತರ ಕೊಡಬೇಕು ಎಂದು ಎಂ.ಲಕ್ಷ್ಮಣ್ ಆಗ್ರಹಿಸಿದರು.
ಯಾವುದೇ ತನಿಖಾ ಸಂಸ್ಥೆಗೆ ನೀಡಿದರೂ, ಈ ಪ್ರಕರಣವನ್ನು ಬಿಜೆಪಿಯವರು ಮುಚ್ಚಿಹಾಕುತ್ತಾರೆ ಹಾಗೂ ವಿಪಕ್ಷದ ವಿರುದ್ಧವಾಗಿ ಹೇಳಿಕೆ ನೀಡಿ ಇಡೀ ಪ್ರಕರಣದ ದಾರಿ ತಪ್ಪಿಸುತ್ತಾರೆ. ಆದ ಕಾರಣ ಮುಖ್ಯ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸಬೇಕು ಎಂದು ಎಂ.ಲಕ್ಷ್ಮಣ್ ಒತ್ತಾಯಿಸಿದರು.
ಸಂಸತ್ ಒಳಗೆ ನುಗ್ಗಿದವರಲ್ಲಿ ಒಬ್ಬ ವ್ಯಕ್ತಿ ಮುಸ್ಲಿಮ್ ಆಗಿದ್ದರೆ ಅಥವಾ ಕಾಂಗ್ರೆಸ್ ಸಂಸದರು ಪಾಸ್ ನೀಡಿದ್ದರೇ ಇಡೀ ದೇಶದಲ್ಲೇ ದಾಂಧಲೆ ನಡೆಸಲು ಬಿಜೆಪಿಯವರು ಸಜ್ಜಾಗುತ್ತಿದ್ದರು. ಆದರೆ ಈಗ ಏಕೆ ಒಬ್ಬರೂ ಬಾಯಿ ಬಿಡುತ್ತಿಲ್ಲ ಎಂದು ಎಂ.ಲಕ್ಷ್ಮಣ್ ಪ್ರಶ್ನಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ವಿಧಾನಪರಿಷತ್ ಸದಸ್ಯ ರಮೇಶ್ ಬಾಬು, ಮಾಜಿ ಮೇಯರ್ ರಾಮಚಂದ್ರಪ್ಪ ಇದ್ದರು.
ನರೇಂದ್ರ ಮೋದಿಯವರು ಅಪಘಾತವಾಗಿ 4 ಜನ ಮರಣ ಹೊಂದಿದರೂ ಟ್ವೀಟ್ ಮಾಡುತ್ತಾರೆ. ಗೃಹ ಸಚಿವ ಅಮಿತ್ ಶಾ ಅವರೇ ಸಂಸತ್ ಭವನಕ್ಕೆ ದುಷ್ಕರ್ಮಿಗಳು ನುಗ್ಗಿದ್ದ ಪ್ರಕರಣಕ್ಕೆ ನೇರ ಹೊಣೆಯಾಗಿದ್ದಾರೆ. ಆದರೆ, ಈ ಬಗ್ಗೆ ಯಾರೊಬ್ಬರೂ ಕೂಡ ಸಣ್ಣ ಪ್ರತಿಕ್ರಿಯೆಯನ್ನೂ ನೀಡಿಲ್ಲ. ಕೇವಲ ಸುಳ್ಳುಗಳನ್ನೇ ಹಂಚುವ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯನೂ ಒಂದೂ ಟ್ವೀಟ್ ಮಾಡಿಲ್ಲ.
-ಎಂ.ಲಕ್ಷ್ಮಣ್, ಕೆಪಿಸಿಸಿ ವಕ್ತಾರರು.







