ಹಲವು ಬಿಜೆಪಿ ನಾಯಕರು ನನ್ನನ್ನು ಸಂಪರ್ಕಿಸಿದ್ದಾರೆ: ಶಾಸಕ ಲಕ್ಷ್ಮಣ ಸವದಿ

ಬೆಂಗಳೂರು, ಅ.10: ಬಿಜೆಪಿ ಅಂಬಿಗನಿಲ್ಲದ ದೋಣಿಯಾಗಿದ್ದು, ಯಾವ ದಿಕ್ಕಿಗೆ ಹೋಗುತ್ತೋ ಗೊತ್ತಿಲ್ಲ. ಹಾಗಾಗಿ, ಹಲವು ಬಿಜೆಪಿ ನಾಯಕರು ನನ್ನನ್ನು ಸಂಪರ್ಕಿಸಿದ್ದಾರೆ ಎಂದು ಕಾಂಗ್ರೆಸ್ ಶಾಸಕ ಲಕ್ಷ್ಮಣ ಸವದಿ ಹೇಳಿದ್ದಾರೆ.
ಮಂಗಳವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯಲ್ಲಿ ಭವಿಷ್ಯ ಇಲ್ಲ ಎಂದು ಬಹಳ ಜನ ಯೋಚನೆ ಮಾಡುತ್ತಾರೆ. ಇನ್ನೂ, ಲೋಕಸಭೆ ಚುನಾವಣೆ ಬಂದಾಗ ಬಿಜೆಪಿಯವರು ಕಾಂಗ್ರೆಸ್‍ಗೆ ಬರಲಿದ್ದು, ಬಹಳಷ್ಟು ಜನ ನನ್ನ ಸ್ನೇಹಿತರು ಸಂಪರ್ಕದಲ್ಲಿದ್ದಾರೆ ಎಂದರು.
ಬಹುತೇಕ ಮುಂದಿನ ವಿಧಾನಸಭೆ ಚುನಾವಣೆ ವೇಳೆಗೆ ಬಿಜೆಪಿ ಜೊತೆಗೆ ಜೆಡಿಎಸ್ ವಿಲೀನ ಆಗಬಹುದು. ಜೆಡಿಎಸ್ ಹಾಗೂ ಬಿಜೆಪಿ ವಿಲೀನ ಆದಲ್ಲಿ ಕುಮಾರಸ್ವಾಮಿ ಅವರು ವಿರೋಧ ಪಕ್ಷದ ನಾಯಕರಾಗುತ್ತಾರೆ ಎಂದು ಮಾಜಿ ಶಾಸಕರೊಬ್ಬರು ಹಾಸನದಲ್ಲಿ ಹೇಳಿದ್ದಾರೆ ಎಂದ ಅವರು, ಬಿಜೆಪಿ ಸ್ಥಿತಿಗತಿಯ ಬಗ್ಗೆ ಜನ ನೋಡುತ್ತಿದ್ದಾರೆ. ಸದ್ಯ ಆ ಪಕ್ಷ ಯಾವ ದಿಕ್ಕಿಗೆ ಹೋಗುತ್ತೋ ಗೊತ್ತಿಲ್ಲ ಎಂದು ಅವರು ನುಡಿದರು.
Next Story





