ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಸುಪ್ರೀಂಕೋರ್ಟ್‌ಗೆ ಮೆರವಣಿಗೆ: ಬಿ.ಕೆ.ಹರಿಪ್ರಸಾದ್
"ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಸರ್ವಾಧಿಕಾರಿ ಧೋರಣೆ ತೋರುತ್ತಿದ್ದಾರೆ"

ದೆಹಲಿ : ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸರ್ವಾಧಿಕಾರಿ ಧೋರಣೆ ತೋರುತ್ತಿದ್ದಾರೆ. ಚುನಾವಣಾ ಆಯೋಗ ಏಕಪಕ್ಷೀಯವಾಗಿ ನಡೆದುಕೊಳ್ಳುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಆರೋಪಿಸಿದರು.
ದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಂವಿಧಾನ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಕಾಪಾಡುವ ವಿಚಾರದಲ್ಲಿ ಸುಪ್ರೀಂಕೋರ್ಟ್ ಕೂಡ ತಟಸ್ಥವಾಗಿದೆ. ಹೀಗಾಗಿ, ಮುಖ್ಯ ನ್ಯಾಯಮೂರ್ತಿಗಳಿಗೆ ಮನವಿ ಸಲ್ಲಿಸಲು ಮುಂದಾಗಿದ್ದೇವೆ. ಕಾಂಗ್ರೆಸ್ ನಾಯಕರೆಲ್ಲರೂ ಒಟ್ಟಾಗಿ ಸುಪ್ರೀಂಕೋರ್ಟ್‌ಗೆ ಮೆರವಣಿಗೆ ನಡೆಸುತ್ತಿದ್ದೇವೆ ಎಂದು ತಿಳಿಸಿದರು.
ಅರಾಜಕತೆಯನ್ನು ಸೃಷ್ಟಿಸಿದ್ದು ಬಿಜೆಪಿ. ನಾವಲ್ಲ. ಬಿಜೆಪಿ ಹುಟ್ಟಿರುವುದೇ ಅರಾಜಕತೆಯಿಂದ. ಸುಪ್ರೀಂಕೋರ್ಟ್ ಮುಚ್ಚಳಿಕೆ ಬರೆದುಕೊಟ್ಟು, ಅದರ ವಿರುದ್ಧವಾಗಿ ನಡೆದುಕೊಂಡಿದೆ. ಸಂವಿಧಾನ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಗೆ ಬಿಜೆಪಿ ಹಾಗೂ ಆರೆಸ್ಸೆಸ್ ವಿರುದ್ಧವಾಗಿವೆ ಎಂದು ಅವರು ಆರೋಪಿಸಿದರು.
ಸಾಮಾನ್ಯ ನಾಯಕರು ಸಲ್ಲಿಸುವ ಮನವಿಗಳನ್ನೂ ಸುಪ್ರೀಂಕೋರ್ಟ್ ಪರಿಗಣಿಸಬೇಕು. ಹಿಂದೆ ಪೋಸ್ಟ್‌ಕಾರ್ಡ್ ಮೂಲಕ ದೂರು ನೀಡಿದಾಗಲೂ ನ್ಯಾಯಾಲಯ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡ ಉದಾಹರಣೆಗಳಿವೆ. ಈಗ ವಿದ್ಯಾರ್ಥಿಗಳು ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ನಡೆಸುತ್ತಿರುವಾಗ ನ್ಯಾಯಾಲಯ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಬಿ.ಕೆ. ಹರಿಪ್ರಸಾದ್ ಮನವಿ ಮಾಡಿದರು.






