ಮಾವಳ್ಳಿ ಶಂಕರ್ ಗೆ ‘ಡಾ.ಕಲಬುರ್ಗಿ ಪ್ರಗತಿಪರ ಚಿಂತಕ ಪ್ರಶಸ್ತಿ’

ಮಾವಳ್ಳಿ ಶಂಕರ್
ಬೆಂಗಳೂರು: ಲಂಡನ್ನ ಬಸವ ಅಂತರ ರಾಷ್ಟ್ರೀಯ ಪ್ರತಿಷ್ಠಾನ ನೀಡುವ ‘ಡಾ.ಎಂ.ಎಂ. ಕಲಬುರ್ಗಿ ಪ್ರಗತಿಪರ ಚಿಂತಕ ಪ್ರಶಸ್ತಿ'ಗೆ ದಸಂಸ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್ ಆಯ್ಕೆಯಾಗಿದ್ದು, ನಾಳೆ(ಫೆ.24) ಸಂಜೆ 5:30ಕ್ಕೆ ನಗರದ ಚಿತ್ರಕಲಾ ಪರಿಷತ್ತು ಆವರಣದಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಈ ಪ್ರಶಸ್ತಿಯು 25 ಸಾವಿರ ರೂ.ನಗದು, ಪ್ರಶಸ್ತಿ ಫಲಕ ಹೊಂದಿದೆ. ಕಾರ್ಯಕ್ರಮವನ್ನು ಯೋಜನಾ ಮತ್ತು ನೀತಿ ಆಯೋಗದ ಉಪಾಧ್ಯಕ್ಷ ಬಿ.ಆರ್.ಪಾಟೀಲ್ ಉದ್ಘಾಟಿಸಲಿದ್ದು, ಕುವೆಂಪು ಭಾಷಾ ಭಾರತಿ ಮಾಜಿ ಅಧ್ಯಕ್ಷ ಪ್ರೊ.ಕೆ.ಮರುಳಸಿದ್ದಪ್ಪ, ಮಾವಳ್ಳಿ ಶಂಕರ್ಗೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಚ್.ಎಂ.ರೇವಣ್ಣ, ಚಿತ್ರಕಲಾ ಪರಿಷತ್ತಿನ ಅಧ್ಯಕ್ಷ ಬಿ.ಎಲ್.ಶಂಕರ್, ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ.ಸಿ.ಸೋಮಶೇಖರ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.
ಬಸವ ಅಂತರರಾಷ್ಟ್ರೀಯ ಪ್ರತಿಷ್ಠಾನ ಅಧ್ಯಕ್ಷ ಎಸ್.ಮಹದೇವಯ್ಯ, ನಾಟಕ ಅಕಾಡೆಮಿ ಅಧ್ಯಕ್ಷ ಕೆ.ವಿ. ನಾಗರಾಜ ಮೂರ್ತಿ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.





