ಕೃಷ್ಣಾ ಮೇಲ್ದಂಡೆ : ವಿಜಯಪುರ ಜಿಲ್ಲೆಯ 3 ಲಕ್ಷ ಹೆಕ್ಟೇರ್ ಜಮೀನಿಗೆ ನೀರು : ಸಚಿವ ಎಂ.ಬಿ.ಪಾಟೀಲ್

ಬೆಂಗಳೂರು, ಸೆ. 17: ಕೃಷ್ಣಾ ಮೇಲ್ದಂಡೆ ಮೂರನೇ ಹಂತದ ಯೋಜನೆಯಿಂದ ವಿಜಯಪುರ ಜಿಲ್ಲೆಯ 3ಲಕ್ಷ ಹೆಕ್ಟೇರ್ ಕೃಷಿ ಜಮೀನಿಗೆ ನೀರಾವರಿ ಸೌಲಭ್ಯ ಸಿಗಲಿದೆ. ಯೋಜನೆಯ ವ್ಯಾಪ್ತಿಯಲ್ಲಿ 9ಉಪ ಯೋಜನೆಗಳಿದ್ದು, ಬಾಗಲಕೋಟೆ, ಕೊಪ್ಪಳ ಮುಂತಾದ ಜಿಲ್ಲೆಗಳಿಗೂ ಲಾಭವಿದೆ. ಇದೀಗ ಸರಕಾರವು ಯೋಜನೆಗೆ ಬೇಕಾದ ಜಮೀನಿಗೆ ಪರಿಹಾರ ದರ ನಿಗದಿ ಮಾಡಿದ್ದು, ಇದೊಂದು ಐತಿಹಾಸಿಕ ತೀರ್ಮಾನವಾಗಿದೆ ಎಂದು ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.
ಬುಧವಾರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಈ ಯೋಜನೆ ಜಾರಿಗೆ ನೆರವಾದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ಸಚಿವ ಸಂಪುಟದ ಎಲ್ಲ ಸದಸ್ಯರಿಗೂ ಈ ಸಂದರ್ಭದಲ್ಲಿ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಹೇಳಿದರು.
ಈಗಾಗಲೇ ಕೃಷ್ಣಾ ನ್ಯಾಯಾಧಿಕರಣ ತನ್ನ ಅಂತಿಮ ತೀರ್ಪು ನೀಡಿ ಹಲವು ವರ್ಷಗಳೇ ಕಳೆದಿವೆ. ಕೇಂದ್ರ ಸರಕಾರ ತ್ವರಿತವಾಗಿ ಇದರ ಗೆಜೆಟ್ ಅಧಿಸೂಚನೆ ಹೊರಡಿಸಬೇಕು. ಮೂರನೇ ಹಂತದ ಕೃಷ್ಣಾ ಮೇಲ್ದಂಡೆ ಯೋಜನೆಯಿಂದ ಒಟ್ಟು 5.94ಲಕ್ಷ ಹೆಕ್ಟೇರ್ ಜಮೀನಿಗೆ ನೀರು ಕೊಡಬಹುದು ಎಂದು ಅವರು ತಿಳಿಸಿದರು.
ರಾಜ್ಯದ ಒಟ್ಟು ಭೂಮಿಯ ಶೇ.62ರಷ್ಟು ಪ್ರದೇಶ ಕೃಷ್ಣಾ ಕಣಿವೆಯಲ್ಲಿದೆ. ಯೋಜನೆಗೆ ಒಟ್ಟು 1.33ಲಕ್ಷ ಎಕರೆ ಭೂಮಿ ಬೇಕಾಗಿದ್ದು, ಇದರಲ್ಲಿ 75,563 ಎಕರೆ ಮುಳುಗಡೆ ಪ್ರದೇಶವಾಗಲಿದೆ. ಮುಳುಗಡೆ ಆಗಲಿರುವ 20 ಹಳ್ಳಿಗಳ ಪುನರ್ವಸತಿ ಸಮರ್ಪಕವಾಗಿ ನಡೆಯಬೇಕಾಗಿದೆ ಎಂದು ಪಾಟೀಲ್ ಅಭಿಪ್ರಾಯಪಟ್ಟರು.
.







