ಬೆಂಗಳೂರಿನಲ್ಲಿ 2ನೇ ವಿಮಾನ ನಿಲ್ದಾಣ | ಎರಡು-ಮೂರು ದಿನಗಳಲ್ಲಿ ಎಎಐ ವರದಿ : ಸಚಿವ ಎಂ.ಬಿ.ಪಾಟೀಲ್

ಸಚಿವ ಎಂ.ಬಿ.ಪಾಟೀಲ್
ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿ ಎರಡನೆಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಿಸುವ ಸಂಬಂಧ ಸ್ಥಳ ಪರಿಶೀಲನೆ ಮಾಡಿಕೊಂಡು ಹೋಗಿರುವ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರವು(ಎಎಐ) ಇನ್ನು ಎರಡು ಅಥವಾ ಮೂರು ದಿನಗಳಲ್ಲಿ ವರದಿ ಕೊಡಲಿದೆ. ಆ ಬಳಿಕ ಸಚಿವ ಸಂಪುಟದಲ್ಲಿ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.
ಗುರುವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಬೆಂಗಳೂರು ನಗರದಲ್ಲಿ ಎರಡನೆಯ ವಿಮಾನ ನಿಲ್ದಾಣ ನಿರ್ಮಾಣಕ್ಕೆ ನಮಗೆ 2033ರ ವರೆಗೂ ನಿರ್ಬಂಧವಿದೆ. ಆದರೆ, ಈಗಿನಿಂದಲೇ ಅಗತ್ಯ ಪ್ರಕ್ರಿಯೆಗಳನ್ನು ಆರಂಭಿಸಿದರೆ ಅಷ್ಟು ಹೊತ್ತಿಗೆ ಮುಗಿಸಬಹುದು. ಒಂದು ವಿಮಾನ ನಿಲ್ದಾಣ ನಿರ್ಮಿಸಲು ಕನಿಷ್ಠ ಪಕ್ಷ ಐದಾರು ವರ್ಷಗಳಾದರೂ ಬೇಕಾಗುತ್ತದೆ ಎಂದು ಹೇಳಿದರು.
ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರವು ತಾನು ಪರಿಶೀಲಿಸಿರುವ ಎರಡು ಸ್ಥಳಗಳಿಗೂ ಹಸಿರು ನಿಶಾನೆ ತೋರಿಸಬಹುದು. ನಾವೂ ಒಂದು ಕಡೆ ಐದಾರು ಸಾವಿರ ಎಕರೆ ಭೂಮಿ ಕೊಡಬಹುದು. ಆದರೆ, ವಿಮಾನ ನಿಲ್ದಾಣ ನಿರ್ಮಾಣ ಸಂಸ್ಥೆಗಳು ಇದು ಆರ್ಥಿಕವಾಗಿ ಲಾಭದಾಯಕವೇ ಎನ್ನುವಂತಹ ಅಂಶಗಳನ್ನು ನೋಡುತ್ತವೆ. ಇದೊಂದು ಜಟಿಲವಾದ ಕೆಲಸ ಎನ್ನುವುದು ನನಗೆ ಎಲ್ಲರಿಗಿಂತ ಚೆನ್ನಾಗಿ ಗೊತ್ತಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ದೇಶದಲ್ಲಿ ಹೊಸದಿಲ್ಲಿ (ನೋಯಿಡಾ) ಮತ್ತು ಮುಂಬೈ (ನವೀ ಮುಂಬೈ) ನಗರಗಳು ಮಾತ್ರ ಎರಡೆರಡು ವಿಮಾನ ನಿಲ್ದಾಣ ಹೊಂದಿವೆ. ಆ ವಿಮಾನ ನಿಲ್ದಾಣಗಳನ್ನು ಅಭಿವೃದ್ಧಿ ಪಡಿಸಿದ ಸಂಸ್ಥೆಗಳ ಜತೆಯೂ ನಾವು ಮಾತನಾಡುತ್ತೇವೆ. ತಮಿಳುನಾಡು ಸರಕಾರವು ಹೊಸೂರಿನಲ್ಲಿ ವಿಮಾನ ನಿಲ್ದಾಣ ನಿರ್ಮಿಸಲಿರುವ ವಿಚಾರವೂ ಗಮನದಲ್ಲಿದೆ ಎಂದು ಅವರು ತಿಳಿಸಿದರು.
ಉತ್ತರ ಕರ್ನಾಟಕದ ಶಾಸಕರು ತುಮಕೂರಿಗೆ ಸಮೀಪದಲ್ಲಿ ವಿಮಾನ ನಿಲ್ದಾಣ ಬರಲಿ ಎನ್ನುತ್ತಿದ್ದಾರೆ. ಇನ್ನು ಕೆಲವರು ಬೆಂಗಳೂರಿನ ದಕ್ಷಿಣ ಭಾಗದಲ್ಲಿ ಈ ಯೋಜನೆ ಬಂದರೆ ಅನುಕೂಲ ಎನ್ನುತ್ತಿದ್ದಾರೆ. ಪ್ರಯಾಣಿಕರ ದಟ್ಟಣೆ, ಕೈಗಾರಿಕಾ ಅಗತ್ಯ ಇತ್ಯಾದಿಗಳು ಇದರಲ್ಲಿ ಪರಿಗಣನೆಗೆ ಬರಲಿವೆ. ಅಗತ್ಯ ಮತ್ತು ಅನುಕೂಲ ಎರಡನ್ನೂ ಪರಿಗಣಿಸಿ ಸೂಕ್ತ ಜಾಗದಲ್ಲಿ ವಿಮಾನ ನಿಲ್ದಾಣ ನಿರ್ಮಿಸುವ ನಿಟ್ಟಿನಲ್ಲಿ ಕ್ರಮ ವಹಿಸಲಾಗುವುದು ಎಂದು ಎಂ.ಬಿ.ಪಾಟೀಲ್ ತಿಳಿಸಿದರು.







