ಬಹರೈನ್ ಛೇಂಬರ್ ಆಫ್ ಕಾಮರ್ಸ್‍ನೊಂದಿಗೆ ಸಮಾಲೋಚನೆ ನಡೆಸಿದ ಸಚಿವ ಎಂ.ಸಿ.ಸುಧಾಕರ್

ಬೆಂಗಳೂರು : ಕರ್ನಾಟಕ ಉನ್ನತ ಶಿಕ್ಷಣ ಇಲಾಖೆಯೊಂದಿಗೆ ಶೈಕ್ಷಣಿಕ ಒಡಂಬಡಿಕೆ ಮಾಡಿಕೊಳ್ಳಲು ಬಹರೈನ್ ಉತ್ಸುಕವಾಗಿದೆ ಎಂದು ಬಹರೈನ್ ಛೇಂಬರ್ ಆಫ್ ಕಾಮರ್ಸ್‍ನ ಅಧ್ಯಕ್ಷ ಮೊಹಮದ್ ಅಬ್ದುಲ್ ಜಬ್ಬಾರ್ ಅಭಿಪ್ರಾಯಪಟ್ಟಿದ್ದಾರೆ.
ಶುಕ್ರವಾರ ಉನ್ನತ ಶಿಕ್ಷಣ ಪರಿಷತ್ತಿನಲ್ಲಿ ಆಯೋಜಿಸಿದ್ದ ಶೈಕ್ಷಣಿಕ ಸಭೆಯಲ್ಲಿ ಮಾತನಾಡಿದ ಅವರು, ಬಹರೈನ್ ಶಿಕ್ಷಣ, ಆರೋಗ್ಯ, ಆಹಾರ ಭದ್ರತೆ, ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಆದ್ಯತೆ ನೀಡಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕದೊಂದಿಗೆ ಶೈಕ್ಷಣಿಕ ಒಡಂಬಡಿಕೆ ಮಾಡಿಕೊಳ್ಳಲು ಮುಕ್ತವಾಗಿದೆ ಎಂದರು.
ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ಮಾತನಾಡಿ, ರಾಜ್ಯದ ಉನ್ನತ ಶಿಕ್ಷಣ ಇಲಾಖೆಯಲ್ಲಿ ಕೌಶಲ್ಯಾಧಾರಿತ ಶಿಕ್ಷಣ ಕಾರ್ಯಕ್ರಮಗಳಾದ ಕಲಿಕೆ ಜೊತೆ ಕೌಶಲ್ಯ, ಪ್ರೇರಣಾ, ಆವಿಷ್ಕಾರಕ, ಚೆವನಿಂಗ್, ಸ್ಕೌಟ್ಸ್ ಸೇರಿದಂತೆ ಹಲವಾರು ಉಪಕ್ರಮಗಳನ್ನು ಅನುಷ್ಠಾನ ಮಾಡಲಾಗಿದೆ. ಈ ನಿಟ್ಟಿನಲ್ಲಿ ಬಹರೈನ್ ಛೇಂಬರ್ ಆಫ್ ಕಾಮರ್ಸ್‍ನೊಂದಿಗಿನ ಒಡಂಬಡಿಕೆ ಸಹಕಾರಿಯಾಗಲಿದೆ ಎಂದರು.
ಈ ಸಂದರ್ಭದಲ್ಲಿ ಬಹರೈನ್ ಛೇಂಬರ್ ಆಫ್ ಕಾಮರ್ಸ್ ನಿಯೋಗದ ಸದಸ್ಯರು, ಉನ್ನತ ಶಿಕ್ಷಣ ಪರಿಷತ್ತಿನ ಉಪಾಧ್ಯಕ್ಷ ಎಸ್. ಆರ್. ನಿರಂಜನ್, ಕಾರ್ಯನಿರ್ವಾಹಕ ನಿರ್ದೇಶಕ ಚಂದ್ರಶೇಖರ್ ಹಾಗೂ ಇಲಾಖೆಯ ಅಧಿಕಾರಿಗಳು ಪಾಲ್ಗೊಂಡಿದ್ದರು.







