ಮಾಧ್ಯಮ ಅಕಾಡೆಮಿ, ಮದ್ಯಪಾನ ಸಂಯಮ ಮಂಡಳಿ ನೌಕರರು ಪಿಂಚಣಿಗೆ ಅರ್ಹರಲ್ಲ: ಹೈಕೋರ್ಟ್

Photo credit: PTI
ಬೆಂಗಳೂರು: ಕರ್ನಾಟಕ ಮಾಧ್ಯಮ ಅಕಾಡೆಮಿ ಅಥವಾ ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿಯ ನೌಕರರು ಸರ್ಕಾರಿ ನೌಕರರಾಗಿದ್ದರೂ ಪಿಂಚಣಿ ಪಡೆಯಲು ಅರ್ಹರಲ್ಲ ಎಂದು ಹೈಕೋರ್ಟ್ ತೀರ್ಪು ನೀಡಿದೆ.
ಪಿಂಚಣಿ ಮತ್ತು ಭತ್ಯೆಗಳನ್ನು ಬಿಡುಗಡೆ ಮಾಡುವಂತೆ ಏಕಸದಸ್ಯ ನ್ಯಾಯಪೀಠ ಹೊರಡಿಸಿದ್ದ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ಮಾನ್ಯ ಮಾಡಿರುವ ನ್ಯಾಯಮೂರ್ತಿ ಅನು ಶಿವರಾಮನ್ ಹಾಗೂ ನ್ಯಾಯಮೂರ್ತಿ ವಿಜಯಕುಮಾರ್ ಎ. ಪಾಟೀಲ ಅವರಿದ್ದ ವಿಭಾಗೀಯ ನ್ಯಾಯಪೀಠ, ಅಕಾಡೆಮಿ ಮತ್ತು ಮಂಡಳಿಯ ಸಿಬ್ಬಂದಿ ಸರ್ಕಾರಿ ಸಿಬ್ಬಂದಿಯಾಗಿದ್ದರೂ ಸಂಬಂಧಿತ ನಿಯಮಗಳ ಅಡಿಯಲ್ಲಿ ಅವರ ಸೇವೆಯನ್ನು ಪಿಂಚಣಿಗೆ ಅರ್ಹಗೊಳಿಸುವ ಯಾವುದೇ ನಿಬಂಧನೆ ಇಲ್ಲ ಎಂದು ಆದೇಶಿಸಿದೆ.
ಇದೇ ವೇಳೆ, ವಿಷಯದ ಎಲ್ಲ ಸಂಬಂಧಿತ ಅಂಶಗಳನ್ನು ಮತ್ತು ಇತರ ಸಂಸ್ಥೆಗಳಿಗೆ ಸಂಬಂಧಿಸಿದಂತೆ ಹೊರಡಿಸಲಾದ ಆದೇಶಗಳನ್ನು ಗಮನಿಸಿ, ಮಾಹಿತಿಯುಕ್ತ ನಿರ್ಧಾರ ತೆಗೆದುಕೊಳ್ಳುವುದು ಮತ್ತು ಅರ್ಜಿದಾರರ ಉದ್ಯೋಗವನ್ನು ಪಿಂಚಣಿಗೆ ಅರ್ಹಗೊಳಿಸಬೇಕೆ ಎಂದು ನಿರ್ಧಾರ ತೆಗೆದುಕೊಳ್ಳುವುದು ಸರ್ಕಾರದ ವಿವೇಚನೆಗೆ ಬಿಟ್ಟಿದ್ದು ಎಂದಿರುವ ನ್ಯಾಯಪೀಠ, ನಾಲ್ಕು ತಿಂಗಳ ಒಳಗೆ ಮಾಧ್ಯಮ ಅಕಾಡೆಮಿ ಮತ್ತು ಮದ್ಯಪಾನ ಸಂಯಮ ಮಂಡಳಿಯನ್ನು ಆಲಿಸಿದ ನಂತರ ಮಾಹಿತಿಯುಕ್ತ ಆದೇಶ ಹೊರಡಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಿದೆ.
ಸರ್ಕಾರಿ ನೌಕರರನ್ನು ಹೊರತುಪಡಿಸಿ ಇತರ ಉದ್ಯೋಗಿಗಳಿಗೆ ಪಿಂಚಣಿ ನಿಯಮಗಳನ್ನು ಅನ್ವಯಿಸುವಂತಹ ಆದೇಶಗಳನ್ನು ಸರ್ಕಾರವು ತನ್ನ ವಿವೇಚನೆ ಬಳಸಿ ಮಾಡಿದೆ. ಆದರೆ, ಅಂತಹ ಆದೇಶಗಳ ಅನುಪಸ್ಥಿತಿಯಲ್ಲಿ, ಮದ್ಯಪಾನ ಸಂಯಮ ಮಂಡಳಿ ಮತ್ತು ಮಾಧ್ಯಮ ಅಕಾಡೆಮಿಯಂತಹ ಸಂಸ್ಥೆಗಳ ನೌಕರರು ಪಿಂಚಣಿಗೆ ಅರ್ಹರು ಎಂದು ಹೇಳಿಕೊಳ್ಳಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಆದೇಶದಲ್ಲಿ ಸ್ಪಷ್ಟಪಡಿಸಿದೆ.
ಪ್ರಕರಣದ ಹಿನ್ನೆಲೆ:
ಮಾಧ್ಯಮ ಅಕಾಡೆಮಿಯ ನಿವೃತ್ತ ಸಿಬ್ಬಂದಿ ಯಲಗಯ್ಯ, ಆರ್.ಜಿ. ಸಿದ್ದರಾಮೇಶ್ ಮತ್ತಿತರರು ಸಲ್ಲಿಸಿದ್ದ ಅರ್ಜಿಯನ್ನು ಮಾನ್ಯ ಮಾಡಿದ್ದ ಏಕಸದಸ್ಯಪೀಠ ಅರ್ಜಿದಾರರಿಗೆ ಪಿಂಚಣಿ ಮತ್ತು ಭತ್ಯೆಯನ್ನು ನೀಡುವಂತೆ ಆದೇಶಿಸಿತ್ತು.
ಇದನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ್ದ ಸರ್ಕಾರ, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಅಥವಾ ಮಾಧ್ಯಮ ಅಕಾಡೆಮಿಯ ನೌಕರರು ಸರ್ಕಾರದ ಸೇವೆಯಲ್ಲಿಲ್ಲ ಹಾಗೂ ಕರ್ನಾಟಕ ನಾಗರಿಕ ಸೇವೆಗಳು (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು (ಕೆಸಿಎಸ್ಆರ್) 1957 ಅಡಿಯಲ್ಲಿ ಒದಗಿಸಲಾದ ವ್ಯಾಖ್ಯಾನದ ಪ್ರಕಾರ ಅವರು ಸರ್ಕಾರಿ ನೌಕರರಲ್ಲ ಎಂದು ವಾದಿಸಿತ್ತು. 2014ರ ಜನವರಿ 29ರ ಅಧಿಸೂಚನೆಯಂತೆ ಕೆಸಿಎಸ್ಆರ್ ನಿಯಮಗಳಿಂದ ನಿಯಮ 2-ಅ ಅನ್ನು ಕೈಬಿಡುವ ಮೂಲಕ, ಸರ್ಕಾರಿ ನೌಕರರಲ್ಲದ ವ್ಯಕ್ತಿಗಳು ನಿವೃತ್ತಿ ಪಿಂಚಣಿಗೆ ಒದಗಿಸುವ ಕೆಸಿಎಸ್ಆರ್ ನಿಯಮ 285ರ ಪ್ರಯೋಜನ ಅಥವಾ ಅನ್ವಯಕ್ಕೆ ಅರ್ಹರಾಗಿರುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ ಎಂದು ಸರ್ಕಾರ ಹೇಳಿತ್ತು.







