ಸಾಮಾಜಿಕ ನ್ಯಾಯದ ಬಗ್ಗೆ ಮಾಧ್ಯಮಗಳು ಜನರಲ್ಲಿ ಜಾಗೃತಿ ಮೂಡಿಸಲಿ : ಸಿಎಂ ಸಿದ್ದರಾಮಯ್ಯ

ಬೆಂಗಳೂರು : ಸರಕಾರದ ಜನಪರ ವಿಚಾರಗಳನ್ನು ಜನರಿಗೆ ತಲುಪಿಸುವ ಜೊತೆಗೆ, ಸಮಾಜದಲ್ಲಿನ ಅಸಮಾನತೆ, ಸಾಮಾಜಿಕ ನ್ಯಾಯ ಕುರಿತು ಜಾಗೃತಿ ಮೂಡಿಸಲು ಮಾಧ್ಯಮಗಳು ಹೆಚ್ಚು ಗಮನ ಹರಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಲಹೆ ನೀಡಿದರು.
ಅವರು ವಾರ್ತಾ ಸೌಧದಲ್ಲಿ ನಡೆದ ವಡ್ಡರ್ಸೆ ರಘುರಾಮ ಶೆಟ್ಟಿ ಸಾಮಾಜಿಕ ನ್ಯಾಯ ಪತ್ರಿಕೋದ್ಯಮ ಪ್ರಶಸ್ತಿ ಹಾಗೂ ಪರಿಸರ-ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.
ಮಾಧ್ಯಮಗಳು ಸತ್ಯ-ಅಸತ್ಯಗಳ ಶೋಧನೆ ನಡೆಸಿ, ಊಹಾಪೋಹಗಳ ಬದಲು ವಾಸ್ತವಾಂಶಗಳನ್ನು ಜನರಿಗೆ ತಲುಪಿಸಬೇಕು. ಸರ್ಕಾರದ ತಪ್ಪುಗಳನ್ನು ಬಿಚ್ಚಿಡುವ ಜೊತೆಗೆ, ಜನಪರ ಕಾರ್ಯಕ್ರಮಗಳನ್ನು ತಿಳಿಸುವ ಕಾರ್ಯವೂ ಪ್ರಾಮಾಣಿಕವಾಗಿ ನಡೆಯಬೇಕು ಎಂದು ಸಿಎಂ ಹೇಳಿದರು.
ಮಾಧ್ಯಮಗಳು ಸತ್ಯ ಅಸತ್ಯದ ಶೋಧನೆ ನಡೆಸಬೇಕು :
ಅಭಿಪ್ರಾಯಗಳು ವಸ್ತುಸ್ಥಿತಿಯಿಂದ ಕೂಡಿರಬೇಕು. ಅನೇಕ ಬಾರಿ ಊಹಾ ಪತ್ರಿಕೋದ್ಯಮ ಆಗಿರುತ್ತದೆ , ಅದು ಆಗಬಾರದು. ಸತ್ಯ ಅಸತ್ಯಗಳನ್ನು ಪತ್ತೆ ಹಚ್ಚಿ, ಸತ್ಯವನ್ನು ಶೋಧನೆ ಮಾಡುವ ಕಾರ್ಯವನ್ನು ಪತ್ರಿಕೋದ್ಯಮ ಮಾಡಬೇಕು. ಯಾವುದೇ ಕಾರಣಕ್ಕೂ ಒಬ್ಬ ವ್ಯಕ್ತಿಯು ತಪ್ಪು ಮಾಡದಿದ್ದರೂ, ಸುಮ್ಮನೆ ಆರೋಪಗಳನ್ನು ಮಾಡಬಾರದು. ಸರ್ಕಾರದಲ್ಲಿ ಎಲ್ಲವೂ ಸರಿಯಾಗಿರುವುದಿಲ್ಲ ನಿಜ, ಆದರೆ ಸರ್ಕಾರದ ಜನಪರ ವಿಚಾರಗಳನ್ನು ಜನರಿಗೆ ತಿಳಿಸುವ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಜನ ವಿರೋಧಿ ಕಾರ್ಯವನ್ನು ಸರ್ಕಾರ ಮಾಡಿದರೆ ಅದನ್ನೂ ಜನರಿಗೆ ತಿಳಿಸುವ ಕಾರ್ಯ ಮಾಡಬೇಕು ಎಂದರು.
ಸಮಾಜದಲ್ಲಿ ಜಾತಿ ವ್ಯವಸ್ಥೆ, ಅಸಮಾನತೆ ಇದೆ. ಸಾಮಾಜಿಕ ಅಸಮಾನತೆ ಬಗ್ಗೆ ಜನರಿಗೆ ತಿಳಿಸುವ ಕಾರ್ಯ ಮಾಡಬೇಕು. ಬಹುಸಂಖ್ಯಾತರಾಗಿರುವ ಜನ ಅಕ್ಷರ ಸಂಸ್ಕೃತಿಯಿಂದ ವಂಚಿತರಾಗಿರುವುದು ಅಸಮಾನತೆಗೆ ಪ್ರಮುಖ ಕಾರಣ. ಇದನ್ನು ನೇರವಾಗಿ ಜನರಿಗೆ ತಿಳಿಸುವ ಪ್ರಯತ್ನದಲ್ಲಿ, ಯಾವುದೇ ರಾಜಿ ಇಲ್ಲದೆ, ಸಾಮಾಜಿಕ ನ್ಯಾಯ ಎಲ್ಲರಿಗೂ ಸಿಕ್ಕಿದೆಯೇ, ಇಲ್ಲವೇ, ಸಮಬಾಳು, ಸಮಪಾಲು ಅನುಷ್ಠಾನಕ್ಕೆ ಬಂದಿದೆಯೇ ಎಂಬುದನ್ನು ಪರಿಶೀಲಿಸಬೇಕು. ಸಾಮಾಜಿಕ ನ್ಯಾಯ ಕೇವಲ ಭಾಷಣಕ್ಕೆ ಮಾತ್ರ ಸೀಮಿತವಾಗಿರಬೇಕಾದ ವಿಚಾರವಲ್ಲ. ಎಲ್ಲರಿಗೂ ದೇಶದ ವ್ಯವಸ್ಥೆಯಲ್ಲಿ ಇನ್ನೂ ಸಹ ಸಮಾನವಾದ ಅವಕಾಶ ಸಿಗದಿರಲು ಕಾರಣಗಳೇನು ಎಂಬ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನು ಮಾಧ್ಯಮ ಮಾಡಬೇಕು ಎಂದರು.
ದಸರಾ- ಸಾಂಸ್ಕೃತಿಕ ನಾಡ ಹಬ್ಬ :
ಇತ್ತೀಚಿಗೆ ಟಿವಿ ಚಾನೆಲ್‌ಗಳು ಇನ್ನೊಬ್ಬರ ಹೇಳಿಕೆ ಬಗ್ಗೆ ಪ್ರತಿಕ್ರಿಯೆಯನ್ನು ಕೇಳಿ ಸುದ್ದಿ ಮಾಡುತ್ತವೆ. ಅದರಲ್ಲಿ ಅನೇಕ ವಿಚಾರಗಳು ಸಮಾಜಕ್ಕೆ ಸಂಬಂಧವೇ ಪಟ್ಟಿರುವುದಿಲ್ಲ. ಸಮಾಜಕ್ಕೆ ಸಂಬಂಧಪಟ್ಟಂತಹ ವಿಚಾರಗಳ ಬಗ್ಗೆ ಪ್ರಶ್ನೆಗಳನ್ನು ಕೇಳಿ. ಭಾನು ಮುಷ್ತಾಕ್ ದಸರಾ ಉದ್ಘಾಟನೆಯನ್ನು ವಿಷಯವನ್ನಾಗಿಸಲು ಹೊರಟರು. ಹೈಕೋರ್ಟ್ ಮತ್ತು ಸುಪ್ರಿಂಕೋರ್ಟ್ ಸಹ ಇದನ್ನು ವಜಾಗೊಳಿಸಿದೆ. ದಸರಾ ಹಬ್ಬ ಧಾರ್ಮಿಕ ವಿಚಾರವಲ್ಲ, ಅದು ನಾಡ ಹಬ್ಬವಾಗಿದ್ದು, ಸಾಂಸ್ಕೃತಿಕ ವಿಚಾರವಾಗಿದೆ. ನಮ್ಮಲ್ಲಿ ಸಹಬಾಳ್ವೆ ಇರಬೇಕು. ಸಮಾಜದಲ್ಲಿ ವೈವಿಧ್ಯತೆಯಲ್ಲಿ ಏಕತೆಯನ್ನು ನಿರ್ಮಾಣ ಮಾಡಬೇಕು. ಅಂಬೇಡ್ಕರ್ ಅವರು ಸ್ವಾತಂತ್ರ್ಯ ದೊರೆತ ಸಂದರ್ಭದಲ್ಲಿ ನಾವು ವೈರುಧ್ಯಗಳಿಂದ ಕೂಡಿದ ಸಮಾಜಕ್ಕೆ ಕಾಲಿಡುತ್ತಿದ್ದೇವೆ. ಸಮಾಜದ ದುರ್ಬಲ ವರ್ಗದವರ ಅಭಿವೃದ್ಧಿಯಾದರೆ ಮಾತ್ರ ನಿಜವಾದ ಅಭಿವೃದ್ಧಿ ಎಂದು ಹೇಳಿದರು.
ವಡ್ಡರ್ಸೆ ರಘುರಾಮ ಶೆಟ್ಟರು ಸಮ ಸಮಾಜ ನಿರ್ಮಾಣದ ಕನಸು ಕಂಡ ಪತ್ರಕರ್ತರು. ಜಾತಿ ಸಮಸ್ಯೆಗಳ ವಿರುದ್ಧ ಬರೆದವರು ಎಂದು ವಿವರಿಸಿದರು.
ಪತ್ರಕರ್ತರು ಪರಿಸರ ನ್ಯಾಯಕ್ಕೆ ಬದ್ಧವಾಗಿರಬೇಕು :
ಪರಿಸರ ಅಭಿವೃದ್ಧಿ ಸಂರಕ್ಷಣೆಗೆ ಮಾಧ್ಯಮಗಳು ಹೆಚ್ಚು ಒತ್ತು ನೀಡಬೇಕು. ಪತ್ರಕರ್ತರು ಪರಿಸರ ನ್ಯಾಯಕ್ಕೆ ಬದ್ಧವಾಗಿರಬೇಕು. ಸ್ವಾತಂತ್ರ್ಯ ಪೂರ್ವದ ಮಾಧ್ಯಮ ರಂಗಕ್ಕೂ ಇಂದಿನ ಮಾಧ್ಯಮ ರಂಗಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಸ್ವಾತಂತ್ರ್ಯೋತ್ತರ ಪತ್ರಿಕೋದ್ಯಮ ಶ್ರೀಮಂತರ ಕೈಗಳಿಗೆ ಸಿಕ್ಕಿಹಾಕಿಕೊಂಡಿದೆ. ಪತ್ರಕರ್ತರು ಇದನ್ನು ಅರ್ಥ ಮಾಡಿಕೊಂಡು ಕರ್ತವ್ಯ ನಿರ್ವಹಿಸಬೇಕಿದೆ ಎಂದರು.
ನಮ್ಮ ಸಮಾಜದಲ್ಲಿ ಜಾತಿ ವ್ಯವಸ್ಥೆ ಹೇಗೆ ಬೇರು ಬಿಟ್ಟಿದೆ ಎಂದರೆ ಐದಾರು ವರ್ಷಗಳಲ್ಲಿ, ಹತ್ತಿಪ್ಪತ್ತು ವರ್ಷಗಳಲ್ಲಿ ಹೋಗುವಂತದ್ದಲ್ಲ. ಆದರೆ ಅಸಮಾನತೆಯ ಮಟ್ಟವನ್ನು ಕಡಿಮೆ ಮಾಡಿ ಸಮ ಸಮಾಜ ನಿರ್ಮಾಣಕ್ಕೆ ನಮ್ಮ ಸರ್ಕಾರ ಅನೇಕ ಜನಪರ ಕಾರ್ಯಕ್ರಮಗಳನ್ನು ಹಾಕಿಕೊಂಡಿದೆ. ಮಹಿಳೆಯರಿಗೂ ಸಮಾನತೆ ಬರಬೇಕು ಎನ್ನುವ ನಿಟ್ಟಿನಲ್ಲಿ ಮಹಿಳಾ ಸಬಲೀಕರಣಕ್ಕೂ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಎಲ್ಲರ ಅಭಿವೃದ್ಧಿಯೇ ನಿಜವಾದ ಅಭಿವೃದ್ಧಿ , ದುರ್ಬಲ ವರ್ಗದವರ ಅಭಿವೃದ್ಧಿಯೇ ನಿಜವಾದ ಅಭಿವೃದ್ಧಿ ಎಂದರು.
ಶಾಲಾ-ಕಾಲೇಜುಗಳಲ್ಲಿ ಸಂವಿಧಾನ ಪೀಠಿಕೆ :
ಬಹಳಷ್ಟು ಜನರು ಸಂವಿಧಾನವನ್ನೇ ಓದಿರುವುದಿಲ್ಲ ಇದೇ ಕಾರಣಕ್ಕೆ ನಮ್ಮ ಸರ್ಕಾರ, ಶಾಲಾ-ಕಾಲೇಜುಗಳಲ್ಲಿ ಸಂವಿಧಾನ ಪೀಠಿಕೆ ಓದುವಂತಹ ಕಾರ್ಯಕ್ರಮ ಹಮ್ಮಿಕೊಂಡಿತು. ಸಂವಿಧಾನದ ಕರ್ತವ್ಯಗಳನ್ನು, ಹಕ್ಕುಗಳನ್ನು ತಿಳಿದುಕೊಂಡಲ್ಲಿ ಜನರ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಲು ಸಹಾಯಕವಾಗುತ್ತದೆ ಸಂವಿಧಾನದ ಆಶಯಗಳಿಗೆ ಅನುಗುಣವಾಗಿ ಕೆಲಸ ಮಾಡಿದರೆ ಸಮಾಜ, ನಾಡು ದೇಶ ಎಲ್ಲದಕ್ಕೂ ಒಳ್ಳೆಯದಾಗುತ್ತದೆ ಎಂದರು.
ಸುಮಾರು 2017ರಿಂದ ಬಾಕಿ ಇದ್ದ ಪ್ರಶಸ್ತಿಗಳನ್ನು ಇಂದು ಪ್ರದಾನ ಮಾಡಲಾಗಿದೆ. ಆಯಾ ವರ್ಷದ ಪ್ರಶಸ್ತಿಗಳನ್ನು ಆಯಾ ವರ್ಷವೇ ನೀಡಿದರೆ ಉತ್ತಮ. ಅನೇಕ ವರ್ಷಗಳ ಪ್ರಶಸ್ತಿಗಳನ್ನು ಒಟ್ಟಿಗೆ ನೀಡುವುದು ಒಳ್ಳೆಯ ಪದ್ಧತಿಯಲ್ಲ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದರು.







