ಮೇ 20ರಂದು ʼಮೆಡಿಕಲ್ ಶಾಪ್ ಬಂದ್’ಗೆ ಕರೆ | ಅಗತ್ಯ ಔಷಧಿಗಳನ್ನು ಖರೀದಿಸಿ ಸಂಗ್ರಹಿಸಿಟ್ಟುಕೊಳ್ಳಲು ಸೂಚನೆ : ಮಾರ್ಗಸೂಚಿ ಪ್ರಕಟಿಸಿದ ಸರಕಾರ

ಸಾಂದರ್ಭಿಕ ಚಿತ್ರ | Image by montypeter on Magnific
ಬೆಂಗಳೂರು : ಔಷಧಿಗಳ ಆನ್ಲೈನ್ ಮಾರಾಟ ಖಂಡಿಸಿ ‘ಆಲ್ ಇಂಡಿಯಾ ಆರ್ಗನೈಸೇಶನ್ ಆಫ್ ಕೆಮಿಸ್ಟ್ ಅಂಡ್ ಡ್ರಗಿಸ್ಟ್ ಸಂಸ್ಥೆ’ಯು ಮೇ 20ರಂದು ರಾಷ್ಟ್ರವ್ಯಾಪಿ ಔಷಧಿ ಮಳಿಗೆಗಳನ್ನು ಬಂದ್ ಮಾಡಲು ಕರೆ ನೀಡಿದೆ. ಹೀಗಾಗಿ ಸಾರ್ವಜನಿಕರು ಅಗತ್ಯ ಮತ್ತು ತುರ್ತು ಔಷಧಿಗಳನ್ನು ಮುಂಚಿತವಾಗಿ ಖರೀದಿಸಿ ಸಂಗ್ರಹಿಸಿಟ್ಟುಕೊಳ್ಳಬೇಕು ಎಂದು ರಾಜ್ಯ ಸರಕಾರವು ಮುನ್ನೆಚ್ಚರಿಕಾ ಕ್ರಮವಾಗಿ ಮಾರ್ಗಸೂಚಿ ಪ್ರಕಟಿಸಿದೆ.
ಸೋಮವಾರ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯ ಆಯುಕ್ತ ಕೆ. ಶ್ರೀನಿವಾಸ್ ಪ್ರಕಟಣೆ ಹೊರಡಿಸಿದ್ದು, ಸಾರ್ವಜನಿಕ ಸುರಕ್ಷತೆ, ಅಗತ್ಯ ಔಷಧಿಗಳ ಲಭ್ಯತೆ ಮತ್ತು ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಉದ್ದೇಶದಿಂದ ಸರಕಾರವು ಮುನ್ನೆಚ್ಚರಿಕಾ ಕ್ರಮವಾಗಿ ಮಾರ್ಗಸೂಚಿ ಹೊರಡಿಸಲಾಗಿದೆ ಎಂದಿದ್ದಾರೆ.
ಮಧುಮೇಹ, ರಕ್ತದೊತ್ತಡ, ಆಸ್ತಮಾ, ಹೃದಯ ಸಂಬಂಧಿತ ಕಾಯಿಲೆಗಳು, ಅಪಸ್ಮಾರ, ಕ್ಯಾನ್ಸರ್ ನಂತಹ ಗಂಭೀರ ರೋಗಗಳಿಂದ ಬಳಲುತ್ತಿರುವ ರೋಗಿಗಳು ಅಗತ್ಯ ಔಷಧಿಗಳನ್ನು ಮುಂಚಿತವಾಗಿ ಖರೀದಿಸಿ ಸಂಗ್ರಹಿಸಿಟ್ಟುಕೊಳ್ಳಬೇಕು. ಇನ್ಸುಲಿನ್, ಇನ್ಹೇಲರ್ಗಳು, ಜೀವ ರಕ್ಷಕ ಔಷಧಿಗಳು ಹಾಗೂ ಮಕ್ಕಳ ಔಷಧಿಗಳನ್ನು ಅಗತ್ಯಕ್ಕೆ ಅನುಗುಣವಾಗಿ ಮುಂಚಿತವಾಗಿಯೇ ಖರೀದಿಸುವುದು ಸೂಕ್ತ ಎಂದು ಮಾರ್ಗಸೂಚಿಯಲ್ಲಿ ತಿಳಿಸಿದ್ದಾರೆ.
ಭಯಭೀತರಾಗಿ ಔಷಧಿಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಖರೀದಿಸುವುದು ಅಥವಾ ಸಂಗ್ರಹಿಸುವುದನ್ನು ತಪ್ಪಿಸಬೇಕು. ನಿಯಂತ್ರಿತ ಔಷಧಿಗಳಿಗಾಗಿ ನೋಂದಾಯಿತ ವೈದ್ಯರ ಸಲಹಾ ಚೀಟಿಗಳನ್ನು ಹೊಂದಿರಬೇಕು ಹಾಗೂ ಔಷಧ ಅಂಗಡಿ ಸಿಬ್ಬಂದಿಯೊಂದಿಗೆ ಸಹಕರಿಸಬೇಕು. ವೈದ್ಯಕೀಯ ತುರ್ತು ಪರಿಸ್ಥಿತಿಗಳಲ್ಲಿ ಸಮೀಪದ ಆಸ್ಪತ್ರೆಗಳು, ತುರ್ತು ವೈದ್ಯಕೀಯ ಸೇವೆಗಳು ಅಥವಾ ಸರಕಾರಿ ಆರೋಗ್ಯ ಕೇಂದ್ರಗಳನ್ನು ತಕ್ಷಣ ಸಂಪರ್ಕಿಸಬೇಕು ಎಂದು ಅವರು ತಿಳಿಸಿದ್ದಾರೆ.
ಸಾರ್ವಜನಿಕ ಹಿತದೃಷ್ಟಿಯಿಂದ ಅಗತ್ಯ ಮತ್ತು ಜೀವ ರಕ್ಷಕ ಔಷಧಿಗಳನ್ನು ಪೂರೈಸಲು ಹಾಗೂ ತುರ್ತು ವೈದ್ಯಕೀಯ ಸೇವೆಗಳಿಗೆ ಔಷಧ ಕೊರತೆ ಆಗದಂತೆ ಸಹಕರಿಸಬೇಕು. ಸಾಮಾಜಿಕ ಜಾಲತಾಣಗಳು ಅಥವಾ ಇತರೆ ಮಾಧ್ಯಮಗಳ ಮೂಲಕ ಯಾವುದೇ ರೀತಿಯ ವದಂತಿ ಅಥವಾ ತಪ್ಪು ಮಾಹಿತಿಯನ್ನು ಹರಡಬಾರದು ಎಂದು ಕೆ. ಶ್ರೀನಿವಾಸ್ ತಿಳಿಸಿದ್ದಾರೆ.
ಔಷಧ ಆಡಳಿತ ಅಧಿಕಾರಿಗಳ ಜವಾಬ್ದಾರಿ: ರಾಜ್ಯಾದ್ಯಂತ ಅಗತ್ಯ ಮತ್ತು ಜೀವ ರಕ್ಷಕ ಔಷಧಿಗಳ ಲಭ್ಯತೆಯನ್ನು ಮೇಲ್ವಿಚಾರಣೆ ಮಾಡಬೇಕು. ಆಸ್ಪತ್ರೆಗಳು, ತುರ್ತು ಔಷಧ ಅಂಗಡಿಗಳು, ಸಗಟು ವ್ಯಾಪಾರಿಗಳು ಮತ್ತು ಜಿಲ್ಲಾಡಳಿತದೊಂದಿಗೆ ಸಮನ್ವಯ ಸಾಧಿಸಿ ಅಗತ್ಯ ಔಷಧಿಗಳ ಕೊರತೆ ಉಂಟಾಗದಂತೆ ನೋಡಿಕೊಳ್ಳಬೇಕು. ಔಷಧ ಪೂರೈಕೆ ಮತ್ತು ಸಾರ್ವಜನಿಕ ಆರೋಗ್ಯ ಪರಿಸ್ಥಿತಿಗಳ ಕುರಿತು ಮೇಲಾಧಿಕಾರಿಗಳಿಗೆ ಪ್ರತಿ ಎರಡು ಗಂಟೆಗೊಮ್ಮೆ ಕೇಂದ್ರ ಕಚೇರಿಯಲ್ಲಿ ಸ್ಥಾಪಿಸಿರುವ ಹೆಲ್ಪ್ಲೈನ್ಗೆ ವರದಿಗಳನ್ನು ಸಲ್ಲಿಸಬೇಕು ಎಂದು ನಿರ್ದೇಶನ ನೀಡಿದ್ದಾರೆ.
ಪೊಲೀಸ್ ಇಲಾಖೆಗೆ ಮುನ್ನೆಚ್ಚರಿಕೆಗಳು: ಬಲವಂತದ ಅಂಗಡಿ ಮುಚ್ಚುವಿಕೆ, ಬೆದರಿಕೆ ಹಾಗೂ ಸಾರ್ವಜನಿಕರಿಗೆ ಅಡ್ಡಿಪಡಿಸುವುದನ್ನು ತಡೆಗಟ್ಟಲು ಅಗತ್ಯ ಕ್ರಮ ಕೈಗೊಳ್ಳಬೇಕು. ಆಂಬುಲೆನ್ಸ್ ಗಳು, ತುರ್ತು ಔಷಧ ಪೂರೈಕೆ ವಾಹನಗಳು ಮತ್ತು ಆರೋಗ್ಯ ಸಿಬ್ಬಂದಿಯ ಸುಗಮ ಸಂಚಾರಕ್ಕೆ ನೆರವಾಗಬೇಕು ಎಂದು ಅವರು ಪೊಲೀಸ್ ಇಲಾಖೆಗೆ ಮನವಿ ಮಾಡಿದ್ದಾರೆ.






