ಕೆರೆಗೆ ವೈದ್ಯಕೀಯ ತ್ಯಾಜ್ಯ ಸುರಿದ ಪ್ರಕರಣ: ಸಚಿವ ಈಶ್ವರ ಖಂಡ್ರೆ ಸೂಚನೆಯಂತೆ ವೈದ್ಯರ ವಿರುದ್ಧ ಎಫ್ಐಆರ್ ದಾಖಲು

ಸಾಂದರ್ಭಿಕ ಚಿತ್ರ (AI)
ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆ ಯಂಟಗಾನಹಳ್ಳಿ ಕೆರೆಗೆ ವೈದ್ಯಕೀಯ ತ್ಯಾಜ್ಯ ಸುರಿದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ್ ಖಂಡ್ರೆ ಅವರ ಸೂಚನೆ ಮೇರೆಗೆ ಅಧಿಕಾರಿಗಳು ಕ್ರಮ ವಹಿಸಿದ್ದು, ಖಾಸಗಿ ಕ್ಲಿನಿಕ್ನ ವೈದ್ಯರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ಯಂಟಗಾನಹಳ್ಳಿ ಗ್ರಾಮ ಪಂಚಾಯ್ತಿಗೆ ಸಚಿವ ಈಶ್ವರ್ ಖಂಡ್ರೆ ಅವರು ದಿಢೀರ್ ಭೇಟಿ ನೀಡಿದ್ದ ವೇಳೆ ಸಾರ್ವಜನಿಕರು ವೈದ್ಯಕೀಯ ತ್ಯಾಜ್ಯವನ್ನು ಕೆರೆಗೆ ಸುರಿದಿರುವ ಬಗ್ಗೆ ಮಾಹಿತಿ ನೀಡಿದ್ದರು. ಕೂಡಲೇ ತಾಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿಗೆ ಸ್ಥಳ ಪರಿಶೀಲಿಸಿ, ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಸೂಚಿಸಿದ್ದರು.
ಸಚಿವ ಈಶ್ವರ್ ಖಂಡ್ರೆ ಸೂಚನೆಯಂತೆ ಸ್ಥಳ ಪರಿಶೀಲನೆ ನಡೆಸಿದ ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಡಾ.ಬಿಂದು, ಸಚಿತ್ರ ಮಾಹಿತಿ ನೀಡಿದ ತರುವಾಯ ತಾಲೂಕು ವೈದ್ಯಾಧಿಕಾರಿ ಡಾ.ಪದ್ಮಿನಿ ನೆಲಮಂಗಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪಂಚಾಯ್ತಿ ಇಒ ಮತ್ತು ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ ಬಳಸಿದ ಸಿರೆಂಜ್ಗಳು ಹಾಗೂ ರಕ್ತಸಿಕ್ತವಾಗಿದ್ದ ಹತ್ತಿ, ಬ್ಯಾಂಡೇಜ್ಗಳನ್ನು ಸಿಮೆಂಟ್ ಬ್ಯಾಗ್ಗಳಲ್ಲಿ ತುಂಬಿ ಕೆರೆಗೆ ನೀರು ಹೋಗುವ ಕಾಲುವೆಯಲ್ಲಿ ಎಸೆದಿರುವುದು ಪತ್ತೆಯಾಗಿತ್ತು.
ಜನ, ಜಾನುವಾರು ಈ ಕೆರೆಯ ನೀರು ಬಳಸುವ ಕಾರಣ ರೋಗ ಹರಡುವ ಸಾಧ್ಯತೆಯ ಗಂಭೀರತೆಯನ್ನು ಅರಿತು ಖಾಸಗಿ ಕ್ಲಿನಿಕ್ ವೈದ್ಯ ಡಾ.ಅರುಣ್ ಗಿರೀಶ್ ಸಾಗರ್ ವಿರುದ್ದ ಪ್ರಕರಣ ದಾಖಲಿಸಲಾಗಿದೆ. ವೈದ್ಯರು ಇದು ತಮ್ಮ ಆಸ್ಪತ್ರೆಯ ತ್ಯಾಜ್ಯ ಎಂದು ಒಪ್ಪಿಕೊಂಡಿದ್ದಾರೆ ಎಂದು ಎಫ್ಐಆರ್ ನಲ್ಲಿ ಉಲ್ಲೇಖಿಸಲಾಗಿದೆ.






