ಸರ್ವಪಕ್ಷಗಳ ನಿಯೋಗದೊಂದಿಗೆ ಪ್ರಧಾನಿ ಭೇಟಿ: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್

ಬೆಂಗಳೂರು, ಅ.19: ರಾಜ್ಯದಲ್ಲಿನ ಬರ ಪರಿಸ್ಥಿತಿಯ ವಿಚಾರಕ್ಕೆ ಸಂಬಂಧಿಸಿದಂತೆ ಸರ್ವಪಕ್ಷಗಳ ನಿಯೋಗದೊಂದಿಗೆ ಮುಂದಿನ ವಾರ ಪ್ರಧಾನಿ ಮೋದಿಯನ್ನು ಭೇಟಿಯಾಗಿ ಅಗತ್ಯ ನೆರವು ಕೋರಿ ಮನವಿ ಸಲ್ಲಿಸಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.
ಸೋಮವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿರೋಧ ಪಕ್ಷದವರೂ ಕೂಡ ನಮ್ಮ ಜೊತೆಗೆ ಬರುತ್ತೇವೆ ಎಂದು ಹೇಳಿದ್ದಾರೆ. ಈಗ ಏಕೆ ಸುಮ್ಮನೆ ಇದ್ದೇನೆ ಎಂದರೆ, ಬರಗಾಲ ರಾಜ್ಯಕ್ಕೆ ಮಾತ್ರ ಸೀಮಿತವಾಗಿಲ್ಲ. ದೇಶದ ಎಲ್ಲ ಕಡೆ ಇದೆ. ದಸರಾ ಮುಗಿದು ರಾಜ್ಯೋತ್ಸವದ ನಡುವೆ ಮಧ್ಯದಲ್ಲಿ ಪ್ರಧಾನಿ ಸಮಯ ಕೊಟ್ಟರೆ ಹೋಗಿ ಮಾತನಾಡುತ್ತೇನೆ ಎಂದರು.
ಕಬ್ಬು ಬೆಳೆಗಾರರ ವಿಚಾರವಾಗಿ ಪ್ರಧಾನಿಗೆ ಪತ್ರ ಬರೆದಿದ್ದೇನೆ. ಅವರಿಂದ ಪ್ರಯೋಜನವಾಗುವ ಬಗ್ಗೆ ನನಗೆ ವಿಶ್ವಾಸವಿದೆ. ಕಬ್ಬು ಬೆಳೆಗಾರರ ಹಿತ ಕಾಪಾಡಲು ನಾನು ಪ್ರಯತ್ನ ಪಟ್ಟಿದ್ದೇನೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಪ್ರಯತ್ನ ಪಟ್ಟು, ಕೊನೆಗೆ ಮತ್ತೆ ಕಾಂಗ್ರೆಸ್ ಮೇಲೆ ಹಾಕಿದ್ದಾರೆ. ಕೇಂದ್ರ ಸರಕಾರದ ಬಗ್ಗೆ ಈಗ ಏನು ಮಾತನಾಡುವುದಿಲ್ಲ. ಕಬ್ಬು ಬೆಳೆಗಾರರ ಸಮಸ್ಯೆಯನ್ನು ಎಲ್ಲರೂ ಸೇರಿ ಬಗೆಹರಿಸಬೇಕು ಎಂದು ಮುಖ್ಯಮಂತ್ರಿ ಹೇಳಿದರು.
ರೈತರ ವಿಚಾರದಲ್ಲಿ ರಾಜಕಾರಣ ಮಾಡಲು ಇಷ್ಟವಿಲ್ಲ:
ನನಗೆ ಈ ವಿಚಾರವಾಗಿ ರಾಜಕಾರಾಣ ಮಾಡೋಕೆ ಇಷ್ಟ ಇಲ್ಲ. ರೈತರ ಹತ್ತಿರ ಏನು ರಾಜಕಾರಣ ಮಾಡ್ತೀರಾ? ರಾಜಕಾರಣ ಮಾಡೋಕೆ ಬೇರೆ ಜನ ಇದ್ದಾರೆ. ಅವರು ಮಾಡುತ್ತಾರೆ. ಅವರು ಟೀಕೆ ಮಾಡುತ್ತಿರಲಿ. ಅದಕ್ಕೆಲ್ಲ ನಾವು ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ ಎಂದು ತಮ್ಮ ರಾಜಕೀಯ ವಿರೋಧಿಗಳಿಗೆ ಡಿಕೆಶಿ ತಿರುಗೇಟು ನೀಡಿದರು.
10 ದಿನಗಳ ಕಾಲ ದಸರಾ ದೀಪಾಲಂಕಾರ ಮುಂದುವರಿಕೆ:
ಮೈಸೂರಿನಲ್ಲಿ ದಸರಾ ದೀಪಾಲಂಕಾರ ನೋಡುವುದಕ್ಕಾಗಿ ಹೆಚ್ಚಿನ ಜನ ಸೇರುತ್ತಿರುವುದರಿಂದ ಸಂಚಾರ ದಟ್ಟಣೆ ಆಗುತ್ತಿದೆ. ಇದನ್ನು ಮತ್ತಷ್ಟು ದಿನ ವಿಸ್ತರಿಸುವ ಚಿಂತನೆ ಇದೆಯೇ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿ, ದಸರಾ ದೀಪಾಲಂಕಾರವನ್ನು 10 ದಿನಗಳ ಕಾಲ ಮುಂದುವರಿಸುವ ಯೋಜನೆ ಇದೆ. ಸದ್ಯದಲ್ಲಿಯೇ ಈ ಬಗ್ಗೆ ಘೋಷಣೆಯಾಗಲಿದೆ ಎಂದು ಮಾಹಿತಿ ನೀಡಿದರು.
ದಸರಾಕ್ಕೆ ವಿಜಯನಗರ ಕಾಲದಿಂದ ಅರಸು ಕಾಲದ ತನಕ ಇತಿಹಾಸ ಇದೆ. ಕಂಬಳ ಕದ್ರಿ ಮಂಜುನಾಥ ದೇವರಿಗಾಗಿ ಶುರುಮಾಡಿದ್ದು. ವಿಜಯನಗರ ಕಾಲದಿಂದಲೂ ಕೋಣಗಳಿಗೆ ಗೌರವ ಕೊಡುವ ಪದ್ಧತಿ ಇದೆ. ಚಾಮುಂಡಿಗೆ ತೆಂಗಿನ ಕಾಯಿ ಹೊಡೀತಿವಲ್ಲ. ಆ ಕಾಯನ್ನು ಕಂಬಳಕ್ಕೆ ಬಹುಮಾನವಾಗಿ ನೀಡುತ್ತಿದ್ದರು. ಈಗ ಚಿನ್ನದ ನಾಣ್ಯ ಕೊಡುತ್ತಾರೆ. ಅದನ್ನು ಮಾರಾಟ ಮಾಡುವುದಿಲ್ಲ. ಮದುವೆಗೆ ದಾನವಾಗಿ ಕೊಡುತ್ತಾರೆ ಎಂದು ಪ್ರಶ್ನೆಯೊಂದಕ್ಕೆ ಮುಖ್ಯಮಂತ್ರಿ ಉತ್ತರಿಸಿದರು.
ಕೋಣಗಳನ್ನು ಸಾಕುವುದಕ್ಕೆ15 ರಿಂದ 20 ಲಕ್ಷ ರೂ.ಖರ್ಚು ಮಾಡುತ್ತಾರೆ. ಮಕ್ಕಳಂತೆ ಪೋಷಣೆ ಮಾಡುತ್ತಾರೆ. ಕಂಬಳ ನಡೆಸಲು 3 ಸಾವಿರ ಜನ ಬಂದಿದ್ದಾರೆ. ಲಕ್ಷಾಂತರ ಜನ ನೋಡಿದ್ದಾರೆ. ನಾವು ದಸರಾದಲ್ಲಿ ಹೊಸ ಪರಂಪರೆ ಪ್ರಾರಂಭ ಮಾಡಿದ್ದೇವೆ. ಹೊಸದಾಗಿ ನಾವು ಏರ್ ಶೋ ಆರಂಭಿಸಿದ್ದೇವೆ. ಯುವ ದಸರಾ ಮಾಡಿ ಹೊರಗಡೆ ರಾಜ್ಯದವರನ್ನು ಕರೆದು ಲಕ್ಷಾಂತರ ಜನ ಯುವಕರಿಗೆ ಮನೋರಂಜನೆಯನ್ನು ಕೊಟ್ಟಿದ್ದೇವೆ ಎಂದು ಅವರು ಹೇಳಿದರು.
ತುಳುನಾಡು, ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕ, ಕೊಡಗು, ತುಮಕೂರು, ಚಾಮರಾಜನಗರ, ಶ್ರೀರಂಗಪಟ್ಟಣದಲ್ಲಿ ಹೀಗೆ ರಾಜ್ಯದ ಎಲ್ಲ ಕಡೆ ದಸರಾ ನಡೆಯುತ್ತಿದೆ. ಇದು ನಮ್ಮ ದೇಶದ ಸಂಸ್ಕೃತಿ. ಕಲೆ, ಸಾಹಿತ್ಯ ನಮ್ಮ ಆಸ್ತಿ. ಇದನ್ನು ಉಳಿಸುವುದಕ್ಕೆ ಬೆಳೆಸುವುದಕ್ಕೆ ಪ್ರೋತ್ಸಾಹ ನೀಡಬೇಕು. ಈ ಕೆಲಸ ನಾವು ಮಾಡುತ್ತಿದ್ದೇವೆ ಎಂದು ಮುಖ್ಯಮಂತ್ರಿ ನುಡಿದರು.






