ನ.26ರಿಂದ ಆರೆಸ್ಸೆಸ್ ವಿರುದ್ಧ ಜನಜಾಗೃತಿ, ದಸಂಸ ಸದಸ್ಯತ್ವ ಆಂದೋಲನ: ಮಾವಳ್ಳಿ ಶಂಕರ್

ಮಾವಳ್ಳಿ ಶಂಕರ್ (File Photo)
ಬೆಂಗಳೂರು: ಸಂವಿಧಾನ ಸಮರ್ಪಣಾ ದಿನ ಪ್ರಯುಕ್ತ ನ.26ರಿಂದ ಆರೆಸ್ಸೆಸ್ ವಿರುದ್ಧ ಜನಜಾಗೃತಿ ಹಾಗೂ ದಲಿತ ಸಂಘರ್ಷ ಸಮಿತಿಯ ಸದಸ್ಯತ್ವ ಆಂದೋಲನ ನಡೆಸಲಾಗುತ್ತದೆ ಎಂದು ದಸಂಸ ಪ್ರದಾನ ಸಂಚಾಲಕ ಮಾವಳ್ಳಿ ಶಂಕರ್ ತಿಳಿಸಿದ್ದಾರೆ.
ನಗರದ ಪ್ರೆಸ್ಕ್ಲಬ್ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸದಸ್ಯತ್ವ ಆಂದೋಲನವು ನ.26ರಂದು ಬೀದರ್ ನಲ್ಲಿ ಚಾಲನೆಗೊಳ್ಳಲಿದೆ. ರಾಜ್ಯದ ಎಲ್ಲ ಜಿಲ್ಲೆ, ತಾಲೂಕು, ಗ್ರಾಮಮಟ್ಟದಲ್ಲಿ ಜನರ ಸದಸ್ಯತ್ವನ್ನು ಮಾಡಿಕೊಳ್ಳಲಾಗುವುದು. 18 ವರ್ಷ ಮೇಲ್ಪಟ್ಟ ಒಂದು ಲಕ್ಷ ಜನರ ಸದಸ್ಯತ್ವವನ್ನು ಮಾಡಿಕೊಳ್ಳುವ ಗುರಿಯನ್ನು ಹೊಂದಲಾಗಿದೆ ಎಂದು ತಿಳಿಸಿದರು.
ಸಮಾಜವನ್ನು ಜಾತಿ ಆಧಾರದಲ್ಲಿ ವಿಭಜನೆ ಮಾಡಿ, ಧರ್ಮ ಧರ್ಮಗಳ ನಡುವೆ ವಿಷ ಬೀಜವನ್ನು ಬಿತ್ತಿ, ಮಹಿಳೆಯರನ್ನು ದಾಸಿಯರನ್ನಾಗಿ ಮಾಡಿದಂತಹ ಮನುಸ್ಮೃತಿಯನ್ನು ನಂಬಿರುವ ಆರೆಸ್ಸೆಸ್ ಸಂವಿಧಾನವನ್ನು ವಿರೋಧಿಸುತ್ತಿದೆ. ಅಂಬೇಡ್ಕರ್ ಅವರು ಬಹುಸಂಖ್ಯಾತರು ಮತ್ತು ಮಹಿಳೆಯರಿಗೆ ಕಾನೂನಾತ್ಮಕ ಹಕ್ಕು ಮತ್ತು ಅವಕಾಶಗಳನ್ನು ನೀಡುವ ಹಿಂದೂ ಕೋಡ್ ಬಿಲ್ ಅನ್ನು ಸುಟ್ಟವರು ಆರೆಸ್ಸೆಸ್ನ ಮನುವಾದಿಗಳು ಎಂದು ಅವರು ಟೀಕಿಸಿದರು.
ಬಿಜೆಪಿಯವರು ಅಂಬೇಡ್ಕರ್ ಅವರನ್ನು ಗೌರವಿಸುವ ದೊಡ್ಡ ನಾಟಕವನ್ನು ಆಡುತ್ತಿದ್ದಾರೆ. ಇದರ ಹಿಂದೆ ಯಾವ ಹುನ್ನಾರವಿದೆ ಎನ್ನುವುದನ್ನು ದೇಶದ ಜನರು ಅರ್ಥ ಮಾಡಿಕೊಂಡಿದ್ದಾರೆ. ದೇಶದ ಬಹುಸಂಖ್ಯಾತರು ಹಸಿವಿನಿಂದ ನರಳುತಿದ್ದಾರೆ. ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಉದ್ಯೋಗಗಳು ಸಿಗುತ್ತಿಲ್ಲ. ಈ ರೀತಿಯ ಸಮಸ್ಯೆಯ ಬಗ್ಗೆ ಆರೆಸ್ಸೆಸ್ ಯಾವತ್ತೂ ಮಾತನಾಡುವುದಿಲ್ಲ. ಕೇವಲ ಒಂದು ಧರ್ಮವನ್ನು ಗುತ್ತಿಗೆ ಹಿಡದ ರೀತಿಯಲ್ಲಿ ಧರ್ಮದ ಆಧಾರದಲ್ಲಿ ದೇಶವನ್ನು ವಿಭಜನೆ ಮಾಡಿ ರಾಜಕೀಯ ಲಾಭ ಪಡೆಯುತ್ತಿದೆ. ಆದ್ದರಿಂದ ಇದರ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.
ದಲಿತ ಹೋರಾಟಗಾರ್ತಿ ಇಂದಿರಾ ಕೃಷ್ಣಪ್ಪ ಮಾತನಾಡಿ, ದೇಶದಲ್ಲಿ ಈ ಸಂದರ್ಭದಲ್ಲಿ ಅನೇಕ ಅಲ್ಲೋಲ ಕಲ್ಲೋಲಗಳು ಆಗುತ್ತಿವೆ. ದಸಂಸ ಪ್ರಾರಂಭದಿಂದಲೂ ಸನಾತನ ಮತ್ತು ಮತೀಯವಾದದ ಹೇರುವಿಕೆಯನ್ನು ವಿರೋಧಿಸತ್ತಲೇ ಬರಲಾಗುತ್ತಿದೆ. ಈಗ ಆರೆಸ್ಸೆಸ್-ಬಿಜೆಪಿಯವರು ಅಂಬೇಡ್ಕರ್ ಮತ್ತು ಸಂವಿಧಾನದ ಬಗ್ಗೆ ಮಾತನಾಡುತ್ತಿವೆ. ಬಿಜೆಪಿಯಿಂದ ಭೀಮ ನಡಿಗೆ ಎಂಬ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಅಂಬೇಡ್ಕರ್ ಇದ್ದಾಗಿನಿಂದಲೂ ಅವರನ್ನು ವಿರೋಧಿಸಿದ, ಸಂವಿಧಾನ, ರಾಷ್ಟ್ರ ಧ್ವಜವನ್ನು ವಿರೋಧಿಸಿರುವುದನ್ನು ನಾವು ಕಂಡಿದ್ದೇವೆ. ಅದಕ್ಕಾಗಿ ಬಿಜೆಪಿ-ಆರೆಸ್ಸೆಸ್ ವಿರುದ್ಧ ಕರ್ನಾಟಕದಾದ್ಯಂತ ಅಭಿಯಾನಗಳನ್ನು ನಡೆಸಲಾಗುವುದು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ದಸಂಸ ರಾಜ್ಯ ಸಂಚಾಲಕ ಕಾರಳ್ಳಿ ಶ್ರೀನಿವಾಸ್, ಬೆಂಗಳೂರು ವಿಭಾಗೀಯ ಸಂಚಾಲಕ ಮಣಿಪಾಲ್ ರಾಜಪ್ಪ, ನಾಗರಾಜ್, ದಲಿತ ಮಹಿಳಾ ಒಕ್ಕೂಟದ ರಾಜ್ಯ ಸಂಚಾಲಕಿ ನಿರ್ಮಲ, ದನಮ್ಮ ಮತ್ತಿತರರು ಹಾಜರಿದ್ದರು.







