ಹತ್ತು ದಿನಗಳ ಕಾಲ ರಾಜ್ಯದಲ್ಲಿ ಮಳೆ ಸಾಧ್ಯತೆ : ಹವಾಮಾನ ಇಲಾಖೆ

ಸಾಂದರ್ಭಿಕ ಚಿತ್ರ | PC : freepik
ಬೆಂಗಳೂರು, ಅ.18: ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತವಾಗಿ ಮಾರ್ಪಾಡಾಗುವ ಲಕ್ಷಣಗಳಿದ್ದು, ಮುಂದಿನ ಹತ್ತು ದಿನಗಳ ಕಾಲ ರಾಜ್ಯದಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಅ.24ರಿಂದ ದಕ್ಷಿಣ ಒಳನಾಡು, ಮಲೆನಾಡು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಉತ್ತಮ ಮಳೆಯ ಸೂಚನೆಗಳಿವೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಅಲ್ಲಲ್ಲಿ ಮಧ್ಯಾಹ್ನ ನಂತರ, ಸಂಜೆ, ರಾತ್ರಿ ಗುಡುಗು ಸಹಿತ ಉತ್ತಮ ಮಳೆಯ ಮುನ್ಸೂಚನೆ ಇದೆ. ಉತ್ತರ ಕನ್ನಡ, ಕೊಡಗು, ಹಾಸನ, ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳ ಅಲ್ಲಲ್ಲಿ ಮಧ್ಯಾಹ್ನ ನಂತರ, ಸಂಜೆ, ರಾತ್ರಿ ಗುಡುಗು ಸಹಿತ ಉತ್ತಮ ಮಳೆಯ ಮುನ್ಸೂಚನೆ ಇದೆ ಎಂದು ಹೇಳಿದೆ.
ಉತ್ತರ ಒಳನಾಡಿನ ಬಹುತೇಕ ಭಾಗಗಳಲ್ಲಿ ಬಿಸಿಲು ಹಾಗೂ ಅಲ್ಲಲ್ಲಿ ಸಣ್ಣ ಪ್ರಮಾಣದ ಮೋಡದ ವಾತಾವರಣದ ಮುನ್ಸೂಚನೆ ಇದೆ. ಹಾವೇರಿ ಹಾಗೂ ಧಾರವಾಡ ಜಿಲ್ಲೆಗಳ ಒಂದೆರಡು ಭಾಗಗಳಲ್ಲಿ ಸಾಮಾನ್ಯ ಮಳೆಯ ಸಾಧ್ಯತೆ ಇದೆ. ದಕ್ಷಿಣ ಒಳನಾಡಿನ ಮೈಸೂರು, ಚಾಮರಾಜನಗರ, ಮಂಡ್ಯ, ರಾಮನಗರ, ಬೆಂಗಳೂರು ಗ್ರಾಮಾಂತರ ಹಾಗೂ ನಗರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು ಜಿಲ್ಲೆಗಳಲ್ಲಿ ಅಲ್ಲಲ್ಲಿ ರಾತ್ರಿ ಗುಡುಗು ಗುಡುಗು ಸಹಿತ ಉತ್ತಮ ಮಳೆಯ ಮುನ್ಸೂಚನೆ ಇದೆ ಎಂದು ತಿಳಿಸಿದೆ.





