ಶಾಲೆಗಳಲ್ಲಿ ಅಡುಗೆ ಮಾಡುವವರಿಗೆ ಸರಕಾರದ ನಿಯಮಗಳೇ ಪಾಲನೆಯಾಗಲಿ: ಪ್ರೊ. ನಿರಂಜನಾರಾಧ್ಯ ವಿ.ಪಿ.

ಬೆಂಗಳೂರು: ಶಾಲೆಗಳಲ್ಲಿ ಅಡುಗೆಯವರು ಪಾಲಿಸಬೇಕಾದ ಸರಕಾರದ ನಿಯಮಗಳು ಸರಿಯಾಗಿದ್ದು, ಅವುಗಳನ್ನೇ ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು ಎಂದು ಶಿಕ್ಷಣ ತಜ್ಞ ಪ್ರೊ. ನಿರಂಜನಾರಾಧ್ಯ ವಿ.ಪಿ. ಒತ್ತಾಯಿಸಿದ್ದಾರೆ.
ರವಿವಾರ ಪ್ರಕಟನೆ ಹೊರಡಿಸಿರುವ ಅವರು, ಮಕ್ಕಳ ಸುರಕ್ಷತೆ, ಆರೋಗ್ಯ ಮತ್ತು ಬಿಸಿಯೂಟದ ತಯಾರಿ ಮತ್ತು ಉಣಬಡಿಸುವ ಪ್ರಕ್ರಿಯೆಯಲ್ಲಿ ಶುಚಿತ್ವ ಕಾಪಾಡುವ ದೃಷ್ಟಿಯಿಂದ ಅಡುಗೆಯವರು ಪಾಲಿಸಬೇಕಾದ ನಿಯಮಗಳ ಬಗ್ಗೆ ಸರಕಾರ ಹೊರಡಿಸಿರುವ ಆದೇಶ ಮತ್ತು ಪ್ರಮಾಣೀಕರಿಸಿದ ಕಾರ್ಯನಿರ್ವಹಣಾ ನಿಯಮಗಳು(ಎಸ್‍ಒಪಿ) ಮಕ್ಕಳ ಹಿತದೃಷ್ಟಿಯಿಂದ ಮತ್ತು ಐಎಸ್‍ಒ ನಿಯಮಾನುಸಾರ ಸರಿಯಾದ ಕ್ರಮವಾಗಿದೆ. ಈ ನಿಯಮಗಳು ಅಡಿಗೆ ಸಿಬ್ಬಂದಿ ಕೆಲಸ ಮಾಡುವ ಸಂದರ್ಭದಲ್ಲಿ ಮಾತ್ರ ಜಾರಿಯಲ್ಲಿರುತ್ತವೆ ಎಂದು ತಿಳಿಸಿದ್ದಾರೆ.
ಈ ವಿಷಯವನ್ನೂ ರಾಜಕೀಯಕರಣಗೊಳಿಸುತ್ತಿರುವುದು ಖಂಡನೀಯ. ಇದರಲ್ಲಿ ಧರ್ಮ ಹಾಗು ಭಾವನಾತ್ಮಕತೆ ಬೆರೆಸಿ ವಿರೋಧಿಸುತ್ತಿರುವುದು ಮಕ್ಕಳ ಹಿತಾಸಕ್ತಿಗೆ ಧಕ್ಕೆಯಾಗುತ್ತದೆ. ಸರಕಾರ ಈ ಒತ್ತಡಕ್ಕೆ ಮಣಿಯದೆ ಪ್ರಮಾಣೀಕರಿಸಿದ ಕಾರ್ಯನಿರ್ವಹಣಾ ನಿಯಮಗಳನ್ನು(ಎಸ್‍ಒಪಿ) ಜಾರಿಗೊಳಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.





