ದಕ್ಷಿಣ ಕನ್ನಡದಲ್ಲಿ ಜಯದೇವ, ಕಿದ್ವಾಯಿ ಸ್ಯಾಟಲೈಟ್ ಸೆಂಟರ್ ಸ್ಥಾಪನೆ ಪ್ರಸ್ತಾವ ಇಲ್ಲ : ಸಚಿವ ಭೋಸರಾಜು

ಬೆಂಗಳೂರು, ಆ.13 : ದಕ್ಷಿಣ ಕನ್ನಡ ಜಿಲ್ಲೆಯ ಸರಕಾರಿ ವೆನ್‍ಲಾಕ್ ಆಸ್ಪತ್ರೆಯ ಸ್ಥಳದಲ್ಲಿ ಜಯದೇವ ಹೃದ್ರೋಗ ಆಸ್ಪತ್ರೆ ಮತ್ತು ಕಿದ್ವಾಯಿ ಕ್ಯಾನ್ಸರ್ ಸಂಸ್ಥೆಯ ಸ್ಯಾಟಲೈಟ್ ಸೆಂಟರ್‍ಗಳನ್ನು ಸ್ಥಾಪಿಸುವ ಸಂಬಂಧ ಯಾವುದೇ ಪ್ರಸ್ತಾವ ಸರಕಾರದ ಮುಂದೆ ಇಲ್ಲ ಎಂದು ಪರಿಷತ್ ಸಭಾನಾಯಕ ಎನ್.ಎಸ್. ಭೋಸರಾಜು ಸ್ಪಷ್ಟಪಡಿಸಿದ್ದಾರೆ.
ಬುಧವಾರ ವಿಧಾನ ಪರಿಷತ್ತಿನಲ್ಲಿ ನಿಯಮ 72ರ ಮೇರೆಗೆ ಗಮನ ಸೆಳೆಯುವ ಸೂಚನೆ ವೇಳೆ ಆಡಳಿತ ಪಕ್ಷದ ಸದಸ್ಯ ಐವನ್ ಡಿಸೋಜಾ ವಿಷಯ ಪ್ರಸ್ತಾಪಿಸಿ, ದಕ್ಷಿಣ ಕನ್ನಡ ಜಿಲ್ಲೆಯ ಸರಕಾರಿ ವೆನ್‍ಲಾಕ್ ಆಸ್ಪತ್ರೆಯ ಅಧೀನದಲ್ಲಿರುವ ಮೂಡಶೆಡ್ಡೆಯಲ್ಲಿ ಕ್ಷಯ ಮತ್ತು ಎದೆರೋಗಗಳ ಆಸ್ಪತ್ರೆಯ 8ಎಕರೆ ಸ್ಥಳದಲ್ಲಿ ಜಯದೇವ ಹೃದ್ರೋಗ ಆಸ್ಪತ್ರೆ ಮತ್ತು ಕಿದ್ವಾಯಿ ಕ್ಯಾನ್ಸರ್ ಸಂಸ್ಥೆಯ ಸ್ಯಾಟಲೈಟ್ ಸೆಂಟರ್‍ಗಳನ್ನು ಮೈಸೂರು ಮತ್ತು ಗುಲ್ಬರ್ಗಾ ಮಾದರಿಯಲ್ಲಿ ಪ್ರಾರಂಭ ಮಾಡಬೇಕು ಎಂದು ಕೋರಿದರು.
ಇದಕ್ಕೆ ಉತ್ತರ ನೀಡಿದ ಸಚಿವ ಭೋಸರಾಜು, ಸರಕಾರಿ ವೆನ್‍ಲಾಕ್ ಆಸ್ಪತ್ರೆಯ ಅಧೀನದಲ್ಲಿರುವ ಮೂಡಶೆಡ್ಡೆಯಲ್ಲಿ ಕ್ಷಯ ಮತ್ತು ಎದೆ ರೋಗಗಳ ಆಸ್ಪತ್ರೆಯ 8 ಎಕರೆ ಸ್ಥಳದಲ್ಲಿ ಜಯದೇವ ಕಿದ್ವಾಯಿ ಸ್ಯಾಟಲೈಟ್ ಸೆಂಟರ್ ಸ್ಥಾಪನೆ ಪ್ರಸ್ತಾಪ ಸರಕಾರದ ಮುಂದೆ ಇಲ್ಲ. ಮುಂದಿನ ದಿನಗಳಲ್ಲಿ ಸೆಂಟರ್ ಪ್ರಾರಂಭ ಮಾಡುವ ಕುರಿತು ವೈದ್ಯಕೀಯ ಶಿಕ್ಷಣ ಇಲಾಖೆ ಮತ್ತು ಆರೋಗ್ಯ ಸಚಿವರ ಜೊತೆಗೆ ಚರ್ಚೆ ಮಾಡಿ ಕ್ರಮ ಕೈಗೊಳ್ಳಬಹುದು ಎಂದು ಹೇಳಿದರು.
ಸದಸ್ಯ ಐವನ್ ಡಿಸೋಜಾ ಮಾತನಾಡಿ, ದಕ್ಷಿಣ ಕನ್ನಡ ಜಿಲ್ಲೆ ಮತ್ತು ಮಂಗಳೂರು ಕಡೆಗಳಲ್ಲಿ ತಿಂಗಳಿಗೆ 500 ರಿಂದ 600 ಹೃದಯಾಘಾತ ಪ್ರಕರಣಗಳು ಕಂಡುಬರುತ್ತಿವೆ. ಮಂಗಳೂರಿನ 2024ರ ಎ.20 ರಿಂದ 2025ರ ಮಾ.20ರವರೆಗೆ ಜಿಲ್ಲಾಸ್ಪತ್ರೆಯಿಂದ ಸೂಚನೆ ಮೇರೆಗೆ, ವೃದ್ದರ ಆಸ್ಪತ್ರೆಗಳಲ್ಲಿ 422 ಕಾರ್ಡಿಯೋ ಸರ್ಜರಿಯಾಗಿದೆ. ಮೆಡಿಕೋ ಅಂಕೋ ಸರ್ಜರಿ-250, ರೇಡಿಯೇಷನ್ ಅಂಕೋ ಪ್ರಕರಣಗಳು-119 ಒಟ್ಟು ಎಲ್ಲ ಆಸ್ಪತ್ರೆಗಳಲ್ಲಿ 3,471 ಕಾರ್ಡಿಯೋ ಚಿಕಿತ್ಸೆಗಳಾಗಿವೆ ಎಂದರು.
ಇನ್ನೂ ಕ್ಯಾನ್ಸರ್‍ಗೆ ಸಂಬಂಧಿಸಿದಂತೆ ಮೆಡಿಕೋ ಆಂಕೋ - 3,081, ರೇಡಿಯೇಷನ್ ಆಂಕೋ -2,144 ಚಿಕಿತ್ಸೆಗಳು ನಡೆದಿವೆ. ಈ ಮೆಡಿಕೋ ಅಂಕೋ ಆಯುಷ್ಮಾನ್ ಯೋಜನೆಯು 1 ಲಕ್ಷ ರೂ. ಇದ್ದು, ರೇಡಿಯೇಷನ್ ಅಂಕೋ ಆಯುಷ್ಮಾನ್ ಯೋಜನೆ 75 ಸಾವಿರ ರೂ. ಇದೆ. ಇದೇ ವ್ಯವಸ್ಥೆ ಸರಕಾರಿ ಆಸ್ಪತ್ರೆಗಳಿದ್ದರೆ, ಬಡವರಿಗೆ ಸಹಾಯವಾಗಲಿದೆ ಎಂದು ಐವನ್ ಡಿಸೋಜಾ ತಿಳಿಸಿದರು.







