ಮುಂಗಾರು ಅಧಿವೇಶನ | ಕೌನ್ಸಿಲಿಂಗ್ ಮೂಲಕ 55 ಸಾವಿರ ಸಿಬ್ಬಂದಿ ವರ್ಗಾವಣೆ : ಸಚಿವ ದಿನೇಶ್ ಗುಂಡೂರಾವ್

ಬೆಂಗಳೂರು, ಆ. 14 : ಆರೋಗ್ಯ ಇಲಾಖೆಯಲ್ಲಿ ಮೊದಲ ಬಾರಿಗೆ ಪಾರದರ್ಶಕವಾಗಿ ಕೌನ್ಸಿಲಿಂಗ್ ನಡೆಸಿ 55 ಸಾವಿರ ಸಿಬ್ಬಂದಿ ವರ್ಗಾವಣೆ ಮಾಡಲಾಗಿದೆ. ವೈದ್ಯರ ನಿಯೋಜನೆ ರದ್ದು ಮಾಡಿದ್ದು, ಹೊಸದಾಗಿ ನಿಯೋಜನೆಗೆ ಅವಕಾಶ ನೀಡುತ್ತಿಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ವಿಧಾನಸಭೆಗೆ ತಿಳಿಸಿದ್ದಾರೆ.
ಗುರುವಾರ ವಿಧಾನಸಭೆ ಪ್ರಶ್ನೋತ್ತರ ಅವಧಿಯಲ್ಲಿ ಆಡಳಿತ ಪಕ್ಷದ ಸದಸ್ಯ ಕೆ.ಎಸ್.ಆನಂದ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಮೊದಲ ಬಾರಿಗೆ ಯಾವುದೇ ಶಿಫಾರಸ್ಸಿಲ್ಲದೇ ಮೆರಿಟ್ ಆಧಾರದ ಮೇಲೆ ವರ್ಗಾವಣೆ ಮಾಡಲಾಗಿದೆ. ಇದರಿಂದ ಕೆಲವು ಸಮಸ್ಯೆಗಳಾಗಿವೆ. ವರ್ಗಾವಣೆಯಾದ ಸ್ಥಾನಕ್ಕೆ ವೈದ್ಯರು ಬಂದಿಲ್ಲ. ಬಹಳಷ್ಟು ವರ್ಷಗಳಿಂದ ಬೆಂಗಳೂರು ನಗರದಲ್ಲಿ ಬೇರುಬಿಟ್ಟಿದ ವೈದ್ಯರನ್ನು ವರ್ಗಾವಣೆ ಮಾಡಲಾಗಿದೆ ಎಂದು ತಿಳಿಸಿದರು.
ತಾಲೂಕು ಆಸತ್ರೆಗಳು ದಿನದ 24 ಗಂಟೆಗಳು ಕಾರ್ಯನಿರ್ವಹಿಸುವಂತೆ ಮಾಡಲಾಗುವುದು. ಈ ಆಸ್ಪತ್ರೆಗಳಲ್ಲಿರುವ ತಜ್ಞ ವೈದ್ಯರ ಸಂಖ್ಯೆಯನ್ನು ದುಪ್ಪಟ್ಟು ಮಾಡಲಾಗುವುದು. ಅಂದರೆ ಇಬ್ಬರು ಅರವಳಿಕೆ, 2 ಪ್ರಯೋಗ ತಜ್ಞರು, ಇಬ್ಬರು ಮಕ್ಕಳ ವೈದ್ಯರನ್ನು ಒದಗಿಸಲಾಗುವುದು. ಪ್ರತಿ ತಾಲೂಕು ಆಸ್ಪತ್ರೆಯೂ ಚೆನ್ನಾಗಿ ನಡೆಯಬೇಕು. ಮೇಲ್ದರ್ಜೆಗೇರಿಸಿದ ವೈದ್ಯಕೀಯ ಸಿಬ್ಬಂದಿ ಅಲ್ಲಿ ದೊರೆಯಬೇಕು ಎಂಬುದು ತಮ ಉದ್ದೇಶವಾಗಿದೆ ಎಂದರು.
2011ರಲ್ಲಿ ಜಾರಿಯಾಗಿದ್ದ ಕಾಯ್ದೆಯನ್ನು ಈ ವರ್ಷ ಜಾರಿಗೆ ತಂದು ವೈದ್ಯಕೀಯ ಸಿಬ್ಬಂದಿಯನ್ನು ಕೌನ್ಸಿಲಿಂಗ್ ಮೂಲಕ ವರ್ಗಾವಣೆ ಮಾಡಲಾಗಿದೆ. ಕ್ರಿಟಿಕಲ್ ಹುದ್ದೆಗಳ ಭರ್ತಿಗೆ ಹೆಚ್ಚು ಆದ್ಯತೆ ನೀಡಲಾಗಿದೆ ಎಂದು ವಿಪಕ್ಷ ಮುಖ್ಯಸಚೇತಕ ದೊಡ್ಡಗೌಡ ಪಾಟೀಲ್ ಕೇಳಿದ ಪ್ರಶ್ನೆಗೆ ದಿನೇಶ್ ಗುಂಡೂರಾವ್ ಉತ್ತರಿಸಿದರು.
ವೈದ್ಯರ ಕೊರತೆ ನಿವಾರಣೆ: ಕಡ್ಡಾಯ ಗ್ರಾಮೀಣ ವೈದ್ಯಕೀಯ ಸೇವೆಯಡಿ 400 ವೈದ್ಯರು ನೋಂದಣಿಯಾಗಿದ್ದು, ಶೀಘ್ರವೇ ರಾಷ್ಟ್ರೀಯ ಆರೋಗ್ಯ ಮಿಷನ್ ಯೋಜನೆಯಡಿ ಗುತ್ತಿಗೆ ವೈದ್ಯರ ವೇತನವನ್ನು 50-60ಸಾವಿರ ರೂ.ಗೆ, ತಜ್ಞ ವೈದ್ಯರ ವೇತನವನ್ನ 1.10ಲಕ್ಷದಿಂದ 2ಲಕ್ಷ ರೂ.ವರೆಗೆ ಹೆಚ್ಚಿಸಲಾಗಿದೆ.
ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸಿದ ಸಮಯದಲ್ಲೇ ಸಿಬ್ಬಂದಿ ಹಾಗೂ ಸಲಕರಣೆಗೆ ಮಂಜೂರಾತಿ ದೊರೆಯದಿರುವುದರಿಂದ 30 ಆಸ್ಪತ್ರೆಗಳು ಮೇಲ್ದರ್ಜೆಗೇರಿಸಲಾಗಿಲ್ಲ. ಅದರ ಅಗತ್ಯತೆ ಇದೆ. ಇಂತಹ ಆಸ್ಪತ್ರೆಗಳಿಗೆ ಸಿಬ್ಬಂದಿ ಮತ್ತು ಸಲಕರಣೆ ಒದಗಿಸಲು ಸಂಪುಟದ ಅನುಮೋದನೆ ದೊರೆತಿದ್ದು, ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಕಳುಹಿಸಲಾಗಿದೆ. ಒಪ್ಪಿಗೆ ದೊರೆತ ನಂತರ ಸೌಲಭ್ಯ ಒದಗಿಸಲಾಗುವುದು.
ಉಡುಪಿ ಜಿಲ್ಲಾಸ್ಪತ್ರೆಯನ್ನು 250 ಹಾಸಿಗೆಗಳ ಸಾಮಥ್ರ್ಯಕ್ಕೆ ಮೇಲ್ದರ್ಜೆಗೇರಿಸಲು ಯೋಜನೆಯನ್ನು ಶೀಘ್ರವೇ ಪೂರ್ಣಗೊಳಿಸಲಾಗುವುದು. ಕಾಮಗಾರಿಯ ಅಂದಾಜು ವೆಚ್ಚ 115-146 ಕೋಟಿ ರೂ.ಗಳಿಗೆ ಹೆಚ್ಚಳವಾಗಿದೆ. ಅಲ್ಲದೆ, ಮೂಲಸೌಕರ್ಯ ಕಾಮಗಾರಿ 4,500ಕೋಟಿ ರೂ.ಅಗತ್ಯವಿದ್ದು, ತಾವು ಖುದ್ದು ಆಸ್ಪತ್ರೆಗೆ ಭೇಟಿ ನೀಡಿ ಹಣದ ಕೊರೆತೆಯಿದ್ದರೆ ಸರಿಪಡಿಸಲಾಗುವುದು’ ಎಂದರು.







