ಒಳಮೀಸಲಾತಿ | ಬಿಜೆಪಿ ನಾಯಕರಿಂದ ದಾರಿ ತಪ್ಪಿಸುವ ಮಾತು : ಸಚಿವ ಡಾ.ಮಹದೇವಪ್ಪ

ಬೆಂಗಳೂರು : ಪರಿಶಿಷ್ಟರ ಒಳ ಮೀಸಲಾತಿ ಜಾರಿಗೊಳಿಸುವ ವಿಚಾರವಾಗಿ ಬಿಜೆಪಿ ನಾಯಕರು ಜನರನ್ನು ದಾರಿ ತಪ್ಪಿಸುವ ಮಾತುಗಳನ್ನು ಹುಟ್ಟು ಹಾಕುತ್ತಿದ್ದಾರೆ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ.ಎಚ್.ಸಿ.ಮಹದೇವಪ್ಪ ದೂರಿದ್ದಾರೆ.
ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿವೃತ್ತ ನ್ಯಾಯಮೂರ್ತಿ ನಾಗಮೋಹನ್‍ದಾಸ್ ಅವರ ಆಯೋಗದ ವರದಿ ಸಲ್ಲಿಕೆಯಾದ 20 ದಿನಗಳಲ್ಲೇ ರಾಜ್ಯ ಸರಕಾರ ಒಳಮೀಸಲಾತಿ ಜಾರಿ ಮಾಡಲಿದೆ. ಆದರೆ, ನಾವು ಒಳಮೀಸಲಾತಿ ಜಾರಿಗೊಳಿಸುವ ಹಂತದಲ್ಲಿರುವಾಗ ಬಿಜೆಪಿಯವರು ಪ್ರತಿಭಟನೆ ನಡೆಸಲು ಮುಂದಾಗಿರುವುದರ ಹಿಂದೆ ರಾಜಕೀಯ ಕಾರಣ ಇದೆ ಎಂದು ಟೀಕಿಸಿದರು.
ಬಿಜೆಪಿಯವರಿಗೆ ಪ್ರತಿಭಟನೆ ನಡೆಸುವ ಯಾವುದೇ ರೀತಿಯ ನೈತಿಕ ಹಕ್ಕಿಲ್ಲ. ಈ ಹಿಂದೆ ಒಳಮೀಸಲಾತಿ ವರದಿಯನ್ನು ತಿರಸ್ಕರಿಸಿದ್ದು ಇವರೇ. ಹೀಗೆ, ಮೀಸಲಾತಿ ವಿರುದ್ಧವಾಗಿರುವವರಿಂದ ನಾವು ನೈತಿಕತೆ ಪಾಠ ಕಲಿಯಬೇಕಿಲ್ಲ ಎಂದ ಅವರು, ಒಳಮೀಸಲಾತಿಯ ಬದ್ಧತೆಯನ್ನು ಚಿತ್ರದುರ್ಗದ ಸಮಾವೇಶದಲ್ಲೇ ಕಾಂಗ್ರೆಸ್ ಘೋಷಣೆ ಮಾಡಿದ್ದು, ಪಕ್ಷ ತನ್ನ ಮಾತಿಗೆ ಬದ್ಧವಾಗಿದೆ ಎಂದು ನುಡಿದರು.
ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಆಡಳಿತದಲ್ಲಿ ಹಸ್ತಕ್ಷೇಪ ಮಾಡುತ್ತಿಲ್ಲ. ಅವರು ಯಾವುದೇ ಸಾಂವಿಧಾನಿಕ ಸ್ಥಾನಮಾನವನ್ನು ಹೊಂದಿಲ್ಲ. ಹೀಗಾಗಿ ಸಭೆ ನಡೆಸುವ ಅಧಿಕಾರವು ಅವರಿಗಿಲ್ಲ ಎಂದು ಡಾ.ಮಹದೇವಪ್ಪ ಇದೇ ವೇಳೆ ಸ್ಪಷ್ಟನೆ ನೀಡಿದರು.
ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗೆ ಯಾರನ್ನು ಹೋಲಿಕೆ ಮಾಡಲು ಸಾಧ್ಯವಿಲ್ಲ. ಇವರು ಅಭಿವೃದ್ಧಿಯ ವಿಚಾರದಲ್ಲಿ ಬದ್ಧತೆ ಹೊಂದಿದ್ದವರು. ಅವರ ಆಡಳಿತ ಎಲ್ಲರಿಗೂ ಸ್ಪೂರ್ತಿ. ಪರಿಷತ್ತಿನ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಅಭಿವೃದ್ದಿ ವಿಚಾರವಾಗಿ ಮಾತನಾಡಿದ್ದಾರೆ ಹೊರತು ಯಾರಿಗೆ ಯಾರನ್ನು ಹೋಲಿಕೆ ಮಾಡಿಲ್ಲ ಎಂದು ಡಾ.ಮಹದೇವಪ್ಪ ಸ್ಪಷ್ಟನೆ ನೀಡಿದರು.







