ಎತ್ತಿನಹೊಳೆ ಯೋಜನೆಗೆ ಜೆಜೆಎಂನಲ್ಲಿ 4,708ಕೋಟಿ ರೂ.ವೆಚ್ಚ ಭರಿಸಲು ಕೇಂದ್ರ ಸರಕಾರಕ್ಕೆ ಸಚಿವ ಈಶ್ವರ್ ಖಂಡ್ರೆ ಮನವಿ

ಹೊಸದಿಲ್ಲಿ : ಬರ ಪೀಡಿತ ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಸುವ ಎತ್ತಿನಹೊಳೆ ಯೋಜನೆಯ ವೆಚ್ಚದ ಪೈಕಿ 4,708.14 ಕೋಟಿ ರೂ.ಗಳನ್ನು ಜಲ ಜೀವನ್ ಮಿಷನ್ ಅಡಿಯಲ್ಲಿ ಭರಿಸುವಂತೆ ಕೇಂದ್ರ ಸರಕಾರಕ್ಕೆ ಮನವಿ ಮಾಡಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರ ಬಿ.ಖಂಡ್ರೆ ತಿಳಿಸಿದ್ದಾರೆ.
ಹೊಸದಿಲ್ಲಿ ಪ್ರವಾಸದಲ್ಲಿರುವ ಈಶ್ವರ್ ಖಂಡ್ರೆ, ಮಂಗಳವಾರ ಕೇಂದ್ರ ಜಲಶಕ್ತಿ ಸಚಿವ ಸಿ.ಆರ್.ಪಾಟೀಲ್ ಹಾಗೂ ರಾಜ್ಯ ಸಚಿವ ವಿ.ಸೋಮಣ್ಣರನ್ನು ಭೇಟಿ ಮಾಡಿ, ನೀರಿನ ಕೊರತೆಯಿರುವ ಕೋಲಾರ, ಚಿಕ್ಕಬಳ್ಳಾಪುರ, ಹಾಸನ, ಬೆಂ.ಗ್ರಾಮಾಂತರ, ಚಿಕ್ಕಮಗಳೂರು, ಚಿತ್ರದುರ್ಗ, ತುಮಕೂರು ಜಿಲ್ಲೆಗಳ 6,657ಹಳ್ಳಿಗಳು ಮತ್ತು 38ಪಟ್ಟಣಗಳ 75.59ಲಕ್ಷ ಜನರಿಗೆ ಸುಸ್ಥಿರ ಕುಡಿಯುವ ನೀರು ಪೂರೈಸುವ ಈ ಯೋಜನೆಯನ್ನು ಜೆಜೆಎಂ ಯೋಜನೆಯಡಿ ಪರಿಗಣಿಸಬೇಕು ಎಂದು ಕೋರಿದರು.
ಕರ್ನಾಟಕ ರಾಜ್ಯದ ಜಲಸಂಪನ್ಮೂಲ ಇಲಾಖೆಯ ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತದಿಂದ ಅನುಷ್ಠಾನಗೊಳಿಸಲಾಗುತ್ತಿರುವ ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯನ್ನು ರಾಜ್ಯ ಸರಕಾರವೇ ಬಹುತೇಕ ಪೂರ್ಣಗೊಳಿಸಿದೆ. ಇನ್ನೂ ಸುಮಾರು 9,416.28ಕೋಟಿ ರೂ.ಉಳಿಕೆ ಕಾಮಗಾರಿಗಳನ್ನು ಪೂರ್ಣಗೊಳಿಸಲು ಕೇಂದ್ರದಿಂದ ಶೇ.50ರಷ್ಟು ತನ್ನ ಪಾಲು ನೀಡುವಂತೆ ಕೋರಿ ಈ ಮನವಿ ಪತ್ರ ಸಲ್ಲಿಸಲಾಗಿದೆ ಎಂದು ಈಶ್ವರ ಖಂಡ್ರೆ ವಿವರಿಸಿದರು.
ಪಶ್ಚಿಮಘಟ್ಟಗಳ ಮೇಲ್ಭಾಗದಿಂದ ಬರಪೀಡಿತ ಜಿಲ್ಲೆಗಳಿಗೆ 24.01 ಟಿಎಂಸಿ ನೀರನ್ನು ಎತ್ತುವಳಿ ಮಾಡಲು ಎತ್ತಿನಹೊಳೆ ಯೋಜನೆಯನ್ನು ವಿನ್ಯಾಸಗೊಳಿಸಲಾಗಿದ್ದು, ಇದರಲ್ಲಿ 14.056 ಟಿಎಂಸಿ ಕುಡಿಯುವ ನೀರು ಪೂರೈಕೆಗೆ ಸಂಬಂಧಿಸಿದ್ದಾಗಿದೆ. ಈ ಪೈಕಿ ಗ್ರಾಮೀಣ ಪ್ರದೇಶಕ್ಕೆ 8.393 ಟಿಎಂಸಿ ಮತ್ತು ನಗರಕ್ಕೆ 5.538 ಟಿಎಂಸಿ ನೀರು ಪೂರೈಕೆ ಆಗುತ್ತದೆ. 9.953 ಟಿಎಂಸಿ ನೀರನ್ನು ಅಂತರ್ಜಲ ಮರುಪೂರಣಕ್ಕಾಗಿ 527 ಕೆರೆಗಳನ್ನು ತುಂಬಿಸಲುದ್ದೇಶಿಸಲಾಗಿದೆ.
ಏಳು ಜಿಲ್ಲೆಗಳ ಗ್ರಾಮೀಣ ವಸತಿಗಳಿಗೆ 8.393 ಟಿಎಂಸಿ ನೀರನ್ನು ಮೀಸಲಿಡಲಾಗಿದೆ ಎಂಬ ವಿಷಯವನ್ನು ಕೇಂದ್ರ ಸಚಿವರ ಗಮನಕ್ಕೆ ತರಲಾಗಿದೆ. ರಾಜ್ಯ ಸರಕಾರ ಜಲ ಜೀವನ ಮಿಷನ್ ಅಡಿಯಲ್ಲಿ ಗ್ರಾಮೀಣ ಪ್ರದೇಶದ ಜನರಿಗೆ ಕೊಳವೆ ಮೂಲಕ ಶುದ್ಧ ಕುಡಿಯುವ ನೀರು ಪೂರೈಸಲು ಮತ್ತು ಪ್ರತಿ ಗ್ರಾಮೀಣ ಮನೆಗಳಿಗೆ ಸುರಕ್ಷಿತ ಮತ್ತು ಸುಸ್ಥಿರ ಕುಡಿಯುವ ನೀರು ಸರಬರಾಜು ಮಾಡಲು ಬದ್ಧವಾಗಿದೆ ಎಂದು ಈಶ್ವರ ಖಂಡ್ರೆ ತಿಳಿಸಿದರು.






