ಚಾರಣಿಗರ ಸುರಕ್ಷತೆಗೆ ವಿಮೆ, ಆ್ಯಪ್ ಜೊತೆಗೆ ಎಸ್ಒಪಿ ರೂಪಿಸಲು ಸಚಿವ ಈಶ್ವರ್ ಖಂಡ್ರೆ ಸೂಚನೆ

ಸಾಂದರ್ಭಿಕ ಚಿತ್ರ | PC : Gemini AI
ಬೆಂಗಳೂರು : ರಾಜ್ಯದ ಗಿರಿಶ್ರೇಣಿಗಳಿಗೆ ಬರುವ ಚಾರಣಿಗರ ಸುರಕ್ಷತೆಯ ದೃಷ್ಟಿಯಿಂದ ದೇಶಕ್ಕೆ ಮಾದರಿಯಾಗುವಂತಹ ವಿಮೆ, ಆ್ಯಪ್ ಜೊತೆಗೆ ಪ್ರಮಾಣಿತ ಮಾನದಂಡ (ಎಸ್ಒಪಿ) ರೂಪಿಸುವಂತೆ ಅರಣ್ಯ ಸಚಿವ ಈಶ್ವರ ಬಿ.ಖಂಡ್ರೆ ಸೂಚನೆ ನೀಡಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ತಡಿಯಾಂಡಮೋಲ್ ಚಾರಣದ ವೇಳೆ ಕೇರಳದ ಶರಣ್ಯ ಎಂಬ ಮಹಿಳೆ 3 ದಿನ ಕಾಡಿನಲ್ಲಿ ದಿನ ಕಳೆದಿರುವುದು ಹಾಗೂ ಚಂದ್ರದ್ರೋಣ ಪರ್ವತ ಶ್ರೇಣಿಯ ಮಾಣಿಕ್ಯಧಾರ ಜಲಪಾತದ ಬಳಿ ಬಾಲಕಿ ನಾಪತ್ತೆಯಾಗಿರುವ ಹಿನ್ನೆಲೆಯಲ್ಲಿ, ಮುಖ್ಯ ವನ್ಯಜೀವಿ ಪರಿಪಾಲಕರಿಗೆ ಖಂಡ್ರೆ ಈ ಲಿಖಿತ ಸೂಚನೆ ಕೊಟ್ಟಿದ್ದಾರೆ.
ಅರಣ್ಯ ಇಲಾಖೆ ಈಗಾಗಲೇ ಅಭಿವೃದ್ಧಿಪಡಿಸಿರುವ ಇ-ಗಸ್ತು, ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಬಳಕೆ ಮಾಡುವ ಆ್ಯಪ್ ಮಾದರಿಯಲ್ಲಿಯೇ ಚಾರಣ ಅವಧಿಯಲ್ಲಿ ತಾತ್ಕಾಲಿಕವಾಗಿ ಚಾರಣಿಗರ ಮೊಬೈಲ್ನಲ್ಲಿ ಆ್ಯಪ್ ಅಳವಡಿಸಿದರೆ, ಯಾರೇ ದಾರಿ ತಪ್ಪಿಸಿಕೊಂಡರೂ ಅವರ ಶೋಧಕಾರ್ಯ ಸುಲಭವಾಗುತ್ತದೆ. ಹೀಗಾಗಿ ಆ್ಯಪ್ ಅಭಿವೃದ್ಧಿಗೆ ಕ್ರಮ ವಹಿಸುವಂತೆ ಮತ್ತು ಚಾರಣಿಗರಿಗೆ ಗುಂಪು ವಿಮೆ ಮಾಡಿಸುವಂತೆ ಅರಣ್ಯ ಸಚಿವರು ನಿರ್ದೇಶಿಸಿದ್ದಾರೆ.
ಇದರೊಂದಿಗೆ ಚಾರಣಿಗರಿಗೆ ಮಾರ್ಗದರ್ಶನ ಮಾಡುವ ನೇಚರ್ ಗೈಡ್ಗಳಿಗೆ ಕಡ್ಡಾಯವಾಗಿ ವೈರ್ಲೆಸ್ ಸೆಟ್ ನೀಡಬೇಕು. ಚಾರಣಿಗರನ್ನು ತಮ್ಮೊಂದಿಗೆ ಕರೆದುಕೊಂಡು ಹೋಗುವ ಗೈಡ್ಗಳಿಗೆ ಹೊಣೆಗಾರಿಕೆ ನಿಗದಿ ಮಾಡುವಂತೆಯೂ ಸಚಿವರು ಸೂಚಿಸಿದ್ದಾರೆ.







