ʼTrekkingʼ ಗೆ ನೇಚರ್ ಗೈಡ್ ಕಡ್ಡಾಯ : ಸಚಿವ ಈಶ್ವರ್ ಖಂಡ್ರೆ

ಸಾಂದರ್ಭಿಕ ಚಿತ್ರ | PC : Gemini AI
ಬೆಂಗಳೂರು : ರಾಜ್ಯದಲ್ಲಿ ಅರಣ್ಯ ಇಲಾಖೆ ವ್ಯಾಪ್ತಿಗೆ ಒಳಪಡುವ ಎಲ್ಲ ಅನುಮೋದಿತ ಚಾರಣ ಪಥಗಳಲ್ಲಿ ಪ್ರಕೃತಿ ಮಾರ್ಗದರ್ಶಕ (ನೇಚರ್ ಗೈಡ್) ಕಡ್ಡಾಯ ಮಾಡಲಾಗಿದ್ದು, ಇವರು ಇಲ್ಲದಿದ್ದಲ್ಲಿ ಚಾರಣಕ್ಕೆ ಅವಕಾಶ ಇರುವುದಿಲ್ಲ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಹೇಳಿದ್ದಾರೆ.
ಶುಕ್ರವಾರ ನಗರದ ತಮ್ಮ ಕಚೇರಿಯಲ್ಲಿ ಚಾರಣಿಗರ ಸುರಕ್ಷತೆಗಾಗಿ ರೂಪಿಸಲಾಗಿರುವ ಪ್ರಮಾಣಿತ ಕಾರ್ಯಾಚರಣೆ ವಿಧಾನ(ಎಸ್ಓಪಿ) ಬಿಡುಗಡೆಗೊಳಿಸಿ ಮಾತನಾಡಿದ ಅವರು, ಚಾರಣಕ್ಕೆ ಬರುವವರು ಆನ್ ಲೈನ್ ನಲ್ಲಿ ನೋಂದಾಯಿಸಿಕೊಳ್ಳುವುದು ಕಡ್ಡಾಯ ಮಾಡಲಾಗಿದೆ. ಒಂದೊಮ್ಮೆ ಯಾವುದೇ ದಿನ ಒಬ್ಬರೇ ಚಾರಣಿಗರು ನೋಂದಾಯಿಸಿದ್ದರೂ ಗೈಡ್ ಸೌಲಭ್ಯ ಕಲ್ಪಿಸಲಾಗುವುದು.ಆದರೆ, ಗೈಡ್ ಇಲ್ಲದೆ ಚಾರಣಕ್ಕೆ ಅವಕಾಶ ಇರುವುದಿಲ್ಲ ಎಂದರು.
ಇತ್ತೀಚೆಗೆ ಕೊಡಗಿನ ತಡಿಯಾಂಡಮೋಳ್ ಬೆಟ್ಟದಲ್ಲಿ ಕೇರಳದಿಂದ ಚಾರಣಕ್ಕೆ ಬಂದಿದ್ದ ಮಹಿಳೆ ನಾಪತ್ತೆಯಾಗಿ ಕಾಡಿನಲ್ಲಿ 3 ದಿನ ಕಳೆಯುವಂತಾದ ಹಾಗೂ ಅರಣ್ಯ ವ್ಯಾಪ್ತಿಗೊಳಪಡದ ಚಿಕ್ಕಮಗಳೂರಿನ ಮಾಣಿಕ್ಯಧಾರಾ ಬಳಿ ನಾಪತ್ತೆಯಾಗಿ ಶವವಾಗಿ ಬಾಲಕಿ ಪತ್ತೆಯಾದ ಹಿನ್ನೆಲೆಯಲ್ಲಿ ಚಾರಣಿಗರ ಸುರಕ್ಷತೆಗಾಗಿ ಈ ಎಸ್ಓಪಿ ರೂಪಿಸಲು ಸೂಚಿಸಲಾಗಿತ್ತು ಎಂದು ಅವರು ಉಲ್ಲೇಖಿಸಿದರು.
ಮುಂದೆ ಪ್ರತಿಯೊಂದು ಚಾರಣಪಥದಲ್ಲೂ ನೇಚರ್ ಗೈಡ್ಗಳಿಗೆ ಜಿಪಿಎಸ್ ಅಳವಡಿಸಿದ ವಾಕಿ ಟಾಕಿಯನ್ನು ಕಡ್ಡಾಯವಾಗಿ ನೀಡಲಾಗುವುದು. ಅದೇ ರೀತಿ ಪ್ರತಿಯೊಬ್ಬ ಚಾರಣಿಗರ ಮೊಬೈಲ್ಗೆ ಚಾರಣಪಥದ ನಕ್ಷೆ ಸಹಿತ ಆಪ್ ಅನ್ನು ಅಳವಡಿಸಲಾಗುವುದು. ಅಕಸ್ಮಾತ್ ಯಾರೇ ಚಾರಣಿಗರು ದಾರಿ ತಪ್ಪಿದರೆ ಅವರ ಶೋಧಕ್ಕೆ ಈ ಆ್ಯಪ್ ಸಹಕಾರಿಯಾಗಲಿದೆ ಎಂದು ಸಚಿವರು ತಿಳಿಸಿದರು.
ಚಾರಣ ಆರಂಭಕ್ಕೂ ಮುನ್ನ ಮೂಲ ನೆಲೆಯಲ್ಲಿ ಚಾರಣಿಗರಿಗೆ ಸಂಕ್ಷಿಪ್ತವಾಗಿ ಚಾರಣದ ದೂರ, ಅವಧಿ ಮತ್ತು ಅಲ್ಲಿನ ಪರಿಸ್ಥಿತಿಯ ಬಗ್ಗೆ ಮಾಹಿತಿ ನೀಡಲಾಗುವುದು. ಅದೇ ರೀತಿ ವನ್ಯಜೀವಿಗಳು ಎದುರಾದರೆ ಏನು ಮಾಡಬೇಕು ಎಂದೂ ತಿಳಿಸಲಾಗುವುದು. ಹೆಚ್ಚು ಶಬ್ದ ಮಾಡುವ ಯಾವುದೇ ಸಾಧನಗಳಿಗೆ, ಹರಿತವಾದ ಲೋಹದ ವಸ್ತು, ಆಯುಧಗಳನ್ನು ತೆಗೆದುಕೊಂಡು ಹೋಗಲು ಮತ್ತು ಕ್ಯಾಂಪ್ ಫೈರ್ ಮಾಡಲು ಚಾರಣ ಪಥದಲ್ಲಿ ಅವಕಾಶ ಇರುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಚಾರಣಿಗರಿಗೆ ಮೂಲ ನೆಲೆಯಲ್ಲಿ ಮಹಿಳೆಯರು ಮತ್ತು ಪುರುಷರಿಗೆ ಪ್ರತ್ಯೇಕ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗುವುದು. ಚಾರಣ ಪಥದಲ್ಲಿ ಬೇಸ್ ಕ್ಯಾಂಪ್ ಗೆ ಹೋಗುವ ಮಾರ್ಗಸೂಚಿ, ಬಾಣದಾಕಾರದ ಗುರುತು ಹಾಕಲಾಗುವುದು. ಮಾರ್ಗಮಧ್ಯೆ ವಿರಮಿಸಿಕೊಳ್ಳಲು ವಿಶ್ರಾಂತಿ ತಾಣ ಮಾಡಲಾಗುವುದು ಎಂದರು.
ಬೇಸ್ ಕ್ಯಾಂಪ್, ವಿಶ್ರಾಂತಿ ತಾಣಗಳಲ್ಲಿ ಕಡ್ಡಾಯವಾಗಿ ಚಾರಣಿಗರ ಎಣಿಕೆ ಮಾಡಬೇಕು. ಪ್ರತಿ ಅರ್ಧಗಂಟೆಗೊಮ್ಮೆ ತಮ್ಮ ವಾಕಿ ಟಾಕಿ ಮೂಲಕ ಬೇಸ್ ಕ್ಯಾಂಪ್ ನೊಂದಿಗೆ ಸಂವಹನ ನಡೆಸಬೇಕು. ಚಾರಣಿಗರ ಜವಾಬ್ದಾರಿ ಹೊರುವಂತೆ ಅವರಿಗೆ ಹೊಣೆಗಾರಿಕೆ ನೀಡಲಾಗುವುದು. ಚಾರಣ ಆರಂಭವಾದ ಒಂದು ಗಂಟೆಯೊಳಗೆ ವಾಕಿ ಟಾಕಿ ಸಂವಹನ ಗೈಡ್ ಕಡೆಯಿಂದ ನಡೆಯದಿದ್ದರೆ ಬೇಸ್ ಕ್ಯಾಂಪ್ ಸಿಬ್ಬಂದಿಯೇ ಕರೆ ಮಾಡಿ ಖಚಿತಪಡಿಸಿಕೊಳ್ಳುತ್ತಾರೆ ಎಂದೂ ಅವರು ವಿವರಿಸಿದರು.
ಅಪ್ರಾಪ್ತ ವಯಸ್ಕರು ಚಾರಣಕ್ಕೆ ತೆರಳಲು ಅವರ ಪಾಲಕರ, ಪೋಷಕರ ಅನುಮತಿ ಪತ್ರ ಕಡ್ಡಾಯ. ಅದೇ ರೀತಿ ಹಿರಿಯ ನಾಗರಿಕರು ಚಾರಣ ಕೈಗೊಳ್ಳಲು ತಮ್ಮ ದೈಹಿಕ ಸಾಮಥ್ರ್ಯ ಮತ್ತು ಸದೃಢತೆಯ ಪ್ರಮಾಣ ಪತ್ರ ಒದಗಿಸಬೇಕಾಗುತ್ತದೆ ಎಂದ ಅವರು, ಯಾವುದೇ ಚಾರಣಿಗರಿಗೆ ಆರೋಗ್ಯ ಸಮಸ್ಯೆ ಕಂಡುಬಂದರೆ ಆರೈಕೆಗಾಗಿ ಗೈಡ್ ತಮ್ಮ ಜೊತೆ ಪ್ರಥಮ ಚಿಕಿತ್ಸಾ ಕಿಟ್ ಅನ್ನು ತೆಗೆದುಕೊಂಡು ಹೋಗಬೇಕಾಗುತ್ತದೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಅರಣ್ಯ ಪಡೆ ಮುಖ್ಯಸ್ಥೆ ಮೀನಾಕ್ಷಿ ನೇಗಿ, ಮುಖ್ಯ ವನ್ಯಜೀವಿ ಪರಿಪಾಲಕ ಕುಮಾರ್ ಪುಷ್ಕರ್, ಎಪಿಸಿಸಿಎಫ್ ಬಿಸ್ವಜಿತ್ ಮಿಶ್ರ ಹಾಗೂ ಪ್ರಧಾನ ಕಾರ್ಯದರ್ಶಿ ಮನೋಜ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.






