ದೇಶದ 2.68 ಲಕ್ಷ ಗ್ರಾಮ ಪಂಚಾಯ್ತಿಗಳಿಗೆ ಗಾಂಧೀಜಿ ಹೆಸರಿಡಿ : ಸಚಿವ ಈಶ್ವರ್ ಖಂಡ್ರೆ

ಹೊಸದಿಲ್ಲಿ : ಉದ್ಯೋಗ ಖಾತ್ರಿ ಯೋಜನೆಯಲ್ಲಿ ಗ್ರಾಮ ಸ್ವರಾಜ್ಯದ ಪ್ರತಿಪಾದಕರಾಗಿದ್ದ ಮಹಾತ್ಮ ಗಾಂಧೀಜಿ ಹೆಸರು ಕೈಬಿಟ್ಟಿರುವ ಕೇಂದ್ರ ಸರಕಾರವು, ‘ಮಹಾತ್ಮ ಗಾಂಧೀ ವಿಬಿ ಜಿ ರಾಮ್ ಜೀ’ ಎಂದು ಮರುನಾಮಕರಣ ಮಾಡಬೇಕು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರ್ ಬಿ.ಖಂಡ್ರೆ ಆಗ್ರಹಿಸಿದ್ದಾರೆ.
ಸೋಮವಾರ ದಿಲ್ಲಿಯಲ್ಲಿ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅಧ್ಯಕ್ಷತೆಯಲ್ಲಿ ನಡೆದ ಎಲ್ಲ ರಾಜ್ಯಗಳ ಗ್ರಾಮೀಣಾಭಿವೃದ್ಧಿ ಸಚಿವರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಗಾಂಧೀಜಿ ಅವರು ಭಾರತ ಹಳ್ಳಿಗಳ ದೇಶವಾಗಿದ್ದು, ದೇಶದ ಆತ್ಮ ಇರುವುದೇ ಗ್ರಾಮಗಳಲ್ಲಿ ಎಂದು ಹೇಳಿದ್ದರು. ಗ್ರಾಮಗಳ ಅಭಿವೃದ್ಧಿ ಆಗದೆ ದೇಶದ ಅಭಿವೃದ್ಧಿ ಆಗದು ಎಂದು ಪ್ರತಿಪಾದಿಸಿದ್ದರು. ಇಂತಹ ಮಹಾಪುರುಷರ ಹೆಸರನ್ನು ಕೈಬಿಟ್ಟಿರುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.
ಕೇಂದ್ರ ಸರಕಾರ ವಿಬಿಜಿ ರಾಮ್ ಜಿಗೆ ಮಹಾತ್ಮಾ ಗಾಂಧೀ ಹೆಸರು ಸೇರಿಸಬೇಕು ಇಲ್ಲವೇ ದೇಶದಲ್ಲಿರುವ 2.68 ಲಕ್ಷ ಗ್ರಾಮ ಪಂಚಾಯ್ತಿಗಳಿಗೆ ಗಾಂಧೀಜಿ ಹೆಸರಿಡಬೇಕು. ಈ ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಬದುಕನ್ನೇ ಮುಡಿಪಾಗಿಟ್ಟು, ಸತ್ಯ, ಶಾಂತಿ, ಅಹಿಂಸೆ ಎಂಬ ಅಸ್ತ್ರದಿಂದ ಭಾರತಾಂಬೆಯನ್ನು ಬಂಧಮುಕ್ತಗೊಳಿಸಿದ ಮಹಾತ್ಮನಿಗೆ ನೈಜ ಶ್ರದ್ಧಾಂಜಲಿ ಸಲ್ಲಿಸಿದಂತಾಗುತ್ತದೆ ಎಂದು ಅವರು ಕೋರಿದರು.
365 ದಿನವೂ ಉದ್ಯೋಗ ಖಾತ್ರಿಗೆ ತಾಕೀತು: ಗ್ರಾಮೀಣ ಜನರಿಗೆ ಸುಗ್ಗಿಯ ಕಾಲದಲ್ಲಿ 60 ದಿನಗಳ ಕಾಲ ಉದ್ಯೋಗ ನೀಡುವುದಿಲ್ಲ ಎಂಬುದು ಸರಿಯಲ್ಲ. ಗ್ರಾಮೀಣ ಕುಟುಂಬದ ಜನರು ಉದ್ಯೋಗಕ್ಕೆ ಬೇಡಿಕೆ ಇಟ್ಟಾಗ ಅವರಿಗೆ ಉದ್ಯೋಗ ನೀಡಬೇಕು. ವರ್ಷದ 365 ದಿನವೂ ಉದ್ಯೋಗದ ಖಾತ್ರಿ ನೀಡಬೇಕು ಎಂದು ಅವರು ಸಲಹೆ ನೀಡಿದರು.
ಕೇಂದ್ರ ಸರಕಾರ ವಿಬಿಜಿ ರಾಮ್ ಜಿಯಲ್ಲಿ ಶೇ.60ಃ40ರ ಅನುಪಾತ ಮಾಡಿರುವ ಹಿನ್ನೆಲೆಯಲ್ಲಿ ರಾಜ್ಯ ಸರಕಾರಗಳಿಗೆ ಅಧಿಕ ಹೊರೆಯಾಗುತ್ತಿದೆ. ಗ್ರಾಮೀಣ ಬಡವರ ಉದ್ಯೋಗದ ಖಾತ್ರಿಗೆ ಕೇಂದ್ರ ಸರಕಾರ ನರೇಗಾದಲ್ಲಿ ಇದ್ದಂತೆ ಶೇ. 90ಃ10ರ ಅನುಪಾತವನ್ನೇ ಮುಂದುವರಿಸಬೇಕು ಎಂದು ಅವರು ಒತ್ತಾಯ ಮಾಡಿದರು.
ಬಾಕಿ ಬಿಡುಗಡೆಗೆ ಒತ್ತಾಯ: 15ನೇ ಹಣಕಾಸು ಆಯೋಗದ ಶಿಫಾರಸಿನಂತೆ ರಾಜ್ಯಕ್ಕೆ 2,186 ಕೋಟಿ ರೂ. ಬಾಕಿ ಬರಬೇಕಾಗಿದ್ದು, ವರ್ಷದಿಂದ ಬಂದಿಲ್ಲ. ಕೂಡಲೇ ಈ ಹಣವನ್ನು ಬಿಡುಗಡೆ ಮಾಡಬೇಕು. ಗ್ರಾಮೀಣ ಬಡವರ, ವಂಚಿತರ, ದುರ್ಬಲರ, ಎಸ್‍ಸಿ-ಎಸ್‍ಟಿ ವರ್ಗದ ಹಿತದೃಷ್ಟಿಯಿಂದ ರಾಜ್ಯ ಸರಕಾರ ವಿರೋಧ ವ್ಯಕ್ತಪಡಿಸುತ್ತಲೇ ಜುಲೈ 1ರಿಂದ ಹೊಸ ಯೋಜನೆ ಜಾರಿಗೆ ಸಿದ್ಧತೆ ನಡೆಸಿದೆ ಎಂದರು.






