ಕೆರೆಗಳ ಒತ್ತುವರಿ ಮಾಡಿದರೆ ಕ್ರಿಮಿನಲ್ ಕೇಸ್ ದಾಖಲು : ಸಚಿವ ಈಶ್ವರ್ ಖಂಡ್ರೆ

ಬೆಂಗಳೂರು : ಗ್ರಾಮಪಂಚಾಯತಿಗೆ ಸೇರಿದ ಮತ್ತು ನಿರ್ವಹಿಸುತ್ತಿರುವ ಯಾವುದೇ ಕೆರೆಯನ್ನು ಒತ್ತುವರಿ ಮಾಡಿದ್ದರೆ ನಿರ್ದಾಕ್ಷಿಣ್ಯವಾಗಿ ತೆರವು ಮಾಡಿಸಲಾಗುವುದು ಮತ್ತು ಒತ್ತುವರಿದಾರರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ್ ಖಂಡ್ರೆ ಎಚ್ಚರಿಕೆ ನೀಡಿದ್ದಾರೆ.
ಶುಕ್ರವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕದ ದೇಶದಲ್ಲೇ 2ನೆ ಅತಿ ಹೆಚ್ಚು ಬರಡು ಭೂಮಿ ಇರುವ ರಾಜ್ಯವಾಗಿದ್ದು, ಗ್ರಾಮೀಣ ಕುಡಿಯುವ ನೀರು ಪೂರೈಕೆ ದೊಡ್ಡ ಸವಾಲಾಗಿದೆ. ಅಂತರ್ಜಲ ದಿನದಿಂದ ದಿನಕ್ಕೆ ಕುಸಿಯುತ್ತಿದ್ದು, ಮೇಲ್ಮೈ ಜಲ ಮೂಲಗಳನ್ನು ರಕ್ಷಿಸದಿದ್ದರೆ ಮುಂದೆ ನೀರಿಗೆ ಹಾಹಾಕಾರ ಎದುರಾಗಲಿದೆ ಎಂದರು.
ಜಲಶಕ್ತಿ ಸಚಿವಾಲಯ ಹೊಸದಿಲ್ಲಿಯಲ್ಲಿ ಆಯೋಜಿಸಿದ್ದ 2 ದಿನಗಳ ಸುಸ್ಥಿರ ಜಲ ಕುರಿತ ಇಲಾಖಾ ಶೃಂಗಸಭೆಯಲ್ಲಿ ನಾನು ಭಾಗಿಯಾಗಿ, ಪ್ರಧಾನಿಯವರ ಸಮ್ಮುಖದಲ್ಲಿ ರಾಜ್ಯ ಸರಕಾರ ಜಲ ಸಂರಕ್ಷಣೆಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ಪ್ರಾತ್ಯಕ್ಷಿಕೆ ಪ್ರಸ್ತುತ ಪಡಿಸಲಾಗಿದೆ. ರಾಜ್ಯದ ಬಹುತೇಕ ಕಡೆ ಭೂಮಿಯೊಳಗೆ ಹೆಬ್ಬಂಡೆಗಳು ಮತ್ತು ಲ್ಯಾಟರೈಟ್ ಇರುವ ಕಾರಣ ಮಳೆಯ ನೀರು ಇಂಗದೆ ಅಂತರ್ಜಲ ಕುಸಿಯುತ್ತಿದೆ. ಅತಿಯಾದ ಅಂತರ್ಜಲ ಬಳಕೆಯಿಂದಲೂ ಭೂಮಿಯೊಳಗಿನ ಜಲ ಮಟ್ಟ ಕುಸಿದಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಮೇಲ್ಮೈ ಜಲ ಮೂಲಗಳೇ ಜೀವನಾಧಾರವಾಗಿದ್ದು, ನಾವು ಕೆರೆ, ಕಟ್ಟೆ, ಸರೋವರ, ನದಿಗಳನ್ನು ಸಂರಕ್ಷಿಸದಿದ್ದರೆ ಜಲಕ್ಷಾಮವೇ ಎದುರಾಗುತ್ತದೆ ಎಂದು ಅವರು ಹೇಳಿದರು.
ಇಡೀ ಭೂಮಿಯ ಸುತ್ತ ನೀರಿದೆ. ಆದರೆ ಕುಡಿಯುವ ನೀರು ಇರುವುದು ಶೇ.3ರಷ್ಟು ಮಾತ್ರ. ಹೀಗಾಗಿ ಜಲಮೂಲಗಳನ್ನು ರಕ್ಷಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಅದಕ್ಕಾಗಿಯೇ ನಾನು ಶೃಂಗ ಸಭೆಯ ಸಮಾರೋಪ ಸಮಾರಂಭದಲ್ಲಿ ಪ್ರಧಾನಿಯವರ ಸಮ್ಮುಖದಲ್ಲೇ ಕೆರೆ, ಸರೋವರ, ನದಿಗಳ ನೀರು ತ್ಯಾಜ್ಯ ಸೇರ್ಪಡೆಯಿಂದ ಕಲುಷಿತಗೊಳ್ಳದಂತೆ ಹಾಗೂ ಒತ್ತುವರಿಯಾಗದಂತೆ ಸಂರಕ್ಷಿಸಲು ರಾಷ್ಟ್ರೀಯ ಯೋಜನೆ ರೂಪಿಸಲು ಒತ್ತಾಯಿಸಿದ್ದೇನೆ ಎಂದೂ ಅವರು ತಿಳಿಸಿದರು.
11,671 ಎಕರೆ ಕೆರೆ ಒತ್ತುವರಿ ತೆರವಿಗೆ ಕ್ರಮ: ‘ರಾಜ್ಯದ ಗ್ರಾ.ಪಂ. ವ್ಯಾಪ್ತಿಯಲ್ಲಿ 32504 ಕೆರೆಗಳಿದ್ದು 11498 ಕೆರೆ ಒತ್ತುವರಿ ಆಗಿತ್ತು. ಈ ಪೈಕಿ 6670 ಕೆರೆ ಒತ್ತುವರಿ ತೆರವು ಮಾಡಲಾಗಿದ್ದು, ಇನ್ನೂ 4828 ಕೆರೆಗಳ 11671 ಎಕರೆ ಒತ್ತುವರಿ ತೆರವು ಮಾಡಬೇಕಿದೆ. ಕೂಡಲೇ ಕೆರೆ ಒತ್ತುವರಿ ತೆರೆವಿಗೆ ಸೂಚನೆ ನೀಡಿದ್ದು, ಇನ್ನು ಮುಂದೆ ಯಾರೇ ಹೊಸದಾಗಿ ಕೆರೆ ಒತ್ತುವರಿ ಮಾಡಿದರೆ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದು’ ಎಂದು ಸಚಿವ ಈಶ್ವರ್ ಖಂಡ್ರೆ ತಿಳಿಸಿದರು.






