ತಹಶೀಲ್ದಾರ್ ಕೋರ್ಟ್ ವ್ಯಾಜ್ಯ 90 ದಿನ ಮೀರಿದರೆ ಶಿಸ್ತು ಕ್ರಮ : ಅಧಿಕಾರಿಗಳಿಗೆ ಸಚಿವ ಕೃಷ್ಣಭೈರೇಗೌಡ ಎಚ್ಚರಿಕೆ

ಬೆಂಗಳೂರು ಆ.25: ತಹಶೀಲ್ದಾರ್ ನ್ಯಾಯಾಲಯಗಳಲ್ಲಿನ ತಕರಾರು ಪ್ರಕರಣಗಳ ವ್ಯಾಜ್ಯ 90 ದಿನ ಮೀರಿದರೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
ಸೋಮವಾರ ವಿಕಾಸಸೌಧದಿಂದ ವಿಡಿಯೊ ಸಂವಾದ ಮೂಲಕ ರಾಜ್ಯದ ಎಲ್ಲ ತಹಶೀಲ್ದಾರ್‌ಗಳ ಜೊತೆ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಅವರು, ತಹಶೀಲ್ದಾರ್ ನ್ಯಾಯಾಲಯಗಳಲ್ಲಿನ ತಕರಾರು ಪ್ರಕರಣಗಳು ನಿಗದಿತ ದಿನದೊಳಗೆ ವಿಲೇವಾರಿ ಆಗದಿದ್ದರೆ ಸಂಬಂಧಿತ ಅಧಿಕಾರಿಗಳ ವಿರುದ್ಧ ಮುಂದಿನ ದಿನಗಳಲ್ಲಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಕಳೆದ ಎರಡು ವರ್ಷಗಳಿಂದ ತಹಶೀಲ್ದಾರ್ ನ್ಯಾಯಾಲಯಗಳ ತಕರಾರು ಅರ್ಜಿಗಳ ವಿಲೇ ಕೆಲಸ ಗಮನಾರ್ಹ ರೀತಿಯಲ್ಲಿ ಪ್ರಗತಿ ಕಂಡಿತ್ತು. ಈ ಮೊದಲು ಒಂದು ಪ್ರಕರಣದ ಇತ್ಯರ್ಥಕ್ಕೆ 212 ದಿನ ತೆಗೆದುಕೊಳ್ಳುತ್ತಿದ್ದರೆ, ಪ್ರಸ್ತುತ 82 ದಿನಕ್ಕೆ ಇಳಿಸಲಾಗಿತ್ತು. ಆದರೆ, ಮತ್ತೆ ತಕರಾರು ಅರ್ಜಿಗಳ ವಿಲೇ ಕೆಲಸ ವೇಗ ಕಳೆದುಕೊಳ್ಳುತ್ತಿರುವುದನ್ನು ಒಪ್ಪಲು ಸಾಧ್ಯವಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ತಕರಾರು ಅರ್ಜಿಗಳ ವಿಲೇಗಾಗಿ ಜನ ಸಾಮಾನ್ಯರು ದಿನನಿತ್ಯ ತಹಶೀಲ್ದಾರ್ ಕಚೇರಿ ಅಲೆಯುವುದನ್ನು ಶಾಶ್ವತವಾಗಿ ತಡೆಯಬೇಕು ಎಂಬ ಕಾರಣದಿಂದಲೇ ಅಭಿಯಾನ ಮಾದರಿಯಲ್ಲಿ ಕೋರ್ಟ್ ಕೇಸ್ ವಿಲೇ ಅಂಕಿತ ಹಾಕಲಾಗಿತ್ತು. ಹಲವು ಅಧಿಕಾರಿಗಳು ಉತ್ತಮವಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಆದರೆ, ಕೆಲವು ಅಧಿಕಾರಿಗಳ ಅಸಡ್ಡೆ, ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿಯಿಂದ ಇಲಾಖೆ ಹಾಗೂ ಸರಕಾರಕ್ಕೆ ಕೆಟ್ಟ ಹೆಸರು ಬರುತ್ತಿದೆ ಎಂದು ಅವರು ಹೇಳಿದರು.
ರಾಜ್ಯಾದ್ಯಂತ ಪೋಡಿ ದುರಸ್ಥಿ ಅಭಿಯಾನಕ್ಕೆ ಚಾಲನೆ ನೀಡಿದ್ದರೂ ಈ ಕೆಲಸ ನಿರೀಕ್ಷಿತ ವೇಗ ಪಡೆದಿಲ್ಲ ಎಂದು ಅಸಮಾಧಾನ ಹೊರಹಾಕಿದ ಅವರು, ದಶಕಗಳ ಹಿಂದೆಯೇ ಸರಕಾರ ಬಡ ರೈತರಿಗೆ ಜಮೀನು ಮಂಜೂರು ಮಾಡಿದೆ. ಆದರೆ, ನಾನಾ ಕಾರಣಗಳಿಂದ ಜಮೀನು ದುರಸ್ಥಿಯಾಗದೆ ಲಕ್ಷಾಂತರ ರೈತರು ಸಂಕಷ್ಟಕ್ಕೆ ಒಳಗಾಗಬೇಕಾದ ಸ್ಥಿತಿ ಇದೆ. ರೈತರು ತಮ್ಮ ಪಾಲಿನ ಜಮೀನು ಇದ್ದರೂ ಸಹ ಅದರ ಪೋಡಿಯಾಗದೆ ಸರಕಾರಿ ಕಚೇರಿಗಳಿಗೆ ಸುತ್ತುವುದು ಪರಿಪಾಟವಾಗಿದೆ. ಹೀಗಾಗಿಯೇ ಪೋಡಿ ಅಭಿಯಾನಕ್ಕೆ ಚಾಲನೆ ನೀಡುವ ಮೂಲಕ ನಮೂನೆ 1-5 ಹಾಗೂ 6-10 ಪ್ರಕ್ರಿಯೆಯನ್ನು ಸರಳೀಕರಣಗೊಳಿಸಲಾಗಿತ್ತು.
ನಿಯಮದಂತೆ ತಹಶೀಲ್ದಾರರು ನಿಗದಿತ ಜಮೀನಿಗೆ ಸಂಬಂಧಿಸಿದ ನಮೂನೆ 1-5 ದಾಖಲೆಯನ್ನು ಸಿದ್ದಪಡಿಸಿ ಮುಂದಿನ ಹಂತಕ್ಕೆ ನಮೂನೆ 6-10 ಕೆಲಸಕ್ಕಾಗಿ ಭೂ ಮಾಪನ ಇಲಾಖೆಗೆ ಕಡತ ಕಳುಹಿಸಬೇಕು. ಆದರೆ, ಬಹುತೇಕ ಜಿಲ್ಲೆಗಳಲ್ಲಿ ಈ ಸಂಖ್ಯೆ ಸಮಾಧಾನಕರವಾಗಿಲ್ಲ ಎಂದು ಅವರು ತಿಳಿಸಿದರು.
ರಾಜ್ಯದ ಎಲ್ಲ ತಹಶೀಲ್ದಾರ್ ಕಚೇರಿಗಳಲ್ಲಿರುವ ಭೂ ದಾಖಲೆಗಳನ್ನು ಈಗಾಗಲೇ ಅಭಿಯಾನ ಮಾದರಿಯಲ್ಲಿ ಸ್ಕ್ಯಾನ್ ಮಾಡಿ ಡಿಜಿಟಲೀಕರಣಗೊಳಿಸಲಾಗುತ್ತಿದೆ. ಆದರೆ, ಈ ಕೆಲಸದಲ್ಲೂ ಅಸಡ್ಡೆ ತೋರಿರುವ ಕೆಲ ತಹಶೀಲ್ದಾರರಿಗೆ ನೊಟೀಸ್ ನೀಡಲಾಗುವುದು ಎಂದು ಸಭೆಯಲ್ಲಿ ಸಚಿವರು ಎಚ್ಚರಿಕೆ ನೀಡಿದರು.
ರಾಜ್ಯದ ಎಲ್ಲ ತಹಶೀಲ್ದಾರ್ ಕಚೇರಿಗಳ ರೆಕಾರ್ಡ್ ಕೊಠಡಿಗಳಲ್ಲಿ ಅಂದಾಜು 100 ಕೋಟಿ ಪುಟಗಳಷ್ಟು ಭೂ ದಾಖಲೆಗಳಿವೆ ಎಂದು ಅಂದಾಜಿಸಲಾಗಿದೆ. ಈ ಪೈಕಿ 37.6 ಕೋಟಿ ಪುಟಗಳನ್ನು ಸ್ಕ್ಯಾನ್ ಮಾಡಲಾಗಿದೆ. ಈಗಾಗಲೇ 6.32 ಲಕ್ಷ ಪುಟಗಳನ್ನು ಸ್ಕ್ಯಾನ್ ಮಾಡಿ ದಾಖಲೆಗಳನ್ನು ಪರಿಶೀಲಿಸಿ ಸಾರ್ವಜನಿಕ ಡೊಮೈನ್‍ನಲ್ಲೂ ಉಲ್ಲೇಖಿಸಲಾಗಿದೆ. ಉಳಿದ ಕಡತ ಈ ವರ್ಷಾಂತ್ಯ ದೊಳಗೆ ಅಭಿಯಾನ ಮಾದರಿ ಸ್ಕ್ಯಾನ್ ಮಾಡಿ ಡಿಜಿಟಲೀಕರಿಸಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
ರಾಜ್ಯದಲ್ಲಿ 52 ಲಕ್ಷ ಜಮೀನುಗಳು ಮೃತರ ಹೆಸರಿನಲ್ಲಿದೆ. ಈ ಪೈಕಿ ಫೌತಿ ಖಾತೆ ಆಂದೋಲನದ ಮೂಲಕ 3,35,727 ಪ್ರಕರಣಗಳಲ್ಲಿ ಮೃತರ ಹೆಸರಿನಿಂದ ಅವರ ವಾರಸುದಾರರ ಹೆಸರಿಗೆ ಜಮೀನು ವರ್ಗಾವಣೆ ಮಾಡಲಾಗಿದೆ. ಆದರೆ, ಈ ಸಾಧನೆ ತೃಪ್ತಿಕರವಾಗಿಲ್ಲ. ಹೀಗಾಗಿ ಶೀಘ್ರದಲ್ಲಿ ಎಲ್ಲಾ ತಾಲೂಕುಗಳಲ್ಲೂ ಅಭಿಯಾನ ಮಾದರಿಯಲ್ಲಿ ಫೌತಿಖಾತೆ ಕೆಲಸ ನಡೆಯಬೇಕು ಎಂದು ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದರು.
ಮೃತರ ಹೆಸರಿನಲ್ಲಿರುವ ಜಮೀನುಗಳಿಗೆ ಪಿಎಂ ಕಿಸಾನ್, ಹನಿ ನೀರಾವರಿ ಹಾಗೂ ಯಂತ್ರೋಪಕರಣ ಖರೀದಿ ಸಬ್ಸಿಡಿ ನೀಡದಂತೆ ಕೇಂದ್ರ ಸರಕಾರ ಆದೇಶ ಹೊರಡಿಸಿದೆ. ಇದರಿಂದ ರೈತರಿಗೆ ತೊಂದರೆಯಾಗಲಿದೆ, ಅನ್ಯಾಯವಾಗಲಿದೆ. ಹೀಗಾಗಿ ಜನರಿಂದ ಅರ್ಜಿ ಕರೆಯದೆ ನಾವೇ ರೈತರ ಮನೆ ಬಾಗಿಲಿಗೆ ತೆರಳಿ ಅಭಿಯಾನ ಮಾದರಿಯಲ್ಲಿ ಫೌತಿ ಖಾತೆ ಮಾಡಿಕೊಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಈ ಅಭಿಯಾನಕ್ಕೆ ಮತ್ತಷ್ಟು ವೇಗ ತುಂಬಬೇಕು ಎಂದು ತಾಕೀತು ಮಾಡಿದರು.
ತಹಶೀಲ್ದಾರರು ಕಂದಾಯ ಗ್ರಾಮಗಳ ಫಲಾನುಭವಿಗಳಿಗೆ ಹಕ್ಕುಪತ್ರ ಹಕ್ಕುಪತ್ರ ನೀಡಿದಾಕ್ಷಣ ತಮ್ಮ ಕೆಲಸ ಮುಗಿಯಿತು ಎಂದು ವಿರಮಿಸುವಂತಿಲ್ಲ. ಬದಲಿಗೆ ಇ-ಖಾತಾ ಜನರೇಟ್ ಮಾಡಿ ಇ-ಆಸ್ತಿ ಮಾಡಿಕೊಡಬೇಕು ಎಂದೂ ಸಚಿವರು ಸಭೆಯಲ್ಲಿ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಸಭೆಯಯಲ್ಲಿ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ ಸೇರಿದಂತೆ ಸಂಬಂಧಿತ ಅಧಿಕಾರಿಗಳು ಉಪಸ್ಥಿತರಿದ್ದರು.







