ಅನಧಿಕೃತ ಬಡಾವಣೆಗಳ ನಿರ್ಮಾಣಕ್ಕೆ ಕಡಿವಾಣ: ಸಚಿವ ಕೃಷ್ಣ ಬೈರೇಗೌಡ

ಬೆಂಗಳೂರು : ಬೆಂಗಳೂರು ನಗರದ ಸುತ್ತಮುತ್ತಲಿನಲ್ಲಿ ಅನಧಿಕೃತ ಬಡಾವಣೆ(ಲೇಔಟ್)ಗಳ ನಿರ್ಮಾಣಕ್ಕೆ ಕಡಿವಾಣ ಹಾಕಲು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಭರವಸೆ ನೀಡಿದ್ದಾರೆ.
ಸೋಮವಾರ ವಿಧಾನಸಭೆಯಲ್ಲಿ ಬಿಜೆಪಿ ಸದಸ್ಯ ಎಸ್.ಆರ್.ವಿಶ್ವನಾಥ್ ಗಮನ ಸೆಳೆಯುವ ಸೂಚನೆಯಡಿ ಪ್ರಸ್ತಾಪಿಸಿದ ವಿಷಯಕ್ಕೆ ಉತ್ತರ ನೀಡಿದ ಅವರು, ‘ಕೃಷಿ ಭೂಮಿಯನ್ನು ಅಕ್ರಮವಾಗಿ ಬಡಾವಣೆಗಳನ್ನಾಗಿ ಪರಿವರ್ತಿಸಿ ನೋಂದಣಿ ಮಾಡಿಸುತ್ತಿದ್ದು, ಈ ಪ್ರಕ್ರಿಯೆ ನಿಯಮಬಾಹಿರ. ಅಕ್ರಮಗಳನ್ನೇ ಕಾನೂನು ಬದ್ಧ ಮಾಡುವ ಬುದ್ಧಿವಂತಿಕೆಯನ್ನು ಪ್ರದರ್ಶಿಸಲಾಗುತ್ತಿದೆ. ‘ನಾವು ಚಾಪೆಯ ಕೆಳಗೆ ನುಸುಳಿದರೆ ಅವರು ರಂಗೋಲೆಯ ಕೆಳಗೆ ನುಸುಳುತ್ತಿದ್ದಾರೆ’ ಎಂದು ಹೇಳಿದರು.
‘ಉಪನೊಂದಣಿ ಅಧಿಕಾರಿಗಳ ಕಚೇರಿಯಲ್ಲಿ ‘ಇತರೆ’ ಎಂಬ ವರ್ಗೀಕೃತ ವ್ಯವಸ್ಥೆಯಿದು, ಅದನ್ನು ಗ್ರಾಮ ಠಾಣಾ ಹಾಗೂ ಇತರ ಸ್ವತ್ತುಗಳ ನೋಂದಣಿಗೆ ಬಳಕೆ ಮಾಡಬಹುದು. ಆದರೆ ಅಕ್ರಮ ಮಾಡುವವರು ಬಡಾವಣೆಗಳ ನೋಂದಣಿಗೆ ಈ ವ್ಯವಸ್ಥೆಯನ್ನೆ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಹೀಗಾಗಿ ಇದನ್ನು ತೆಗೆದುಹಾಕುವ ಬಗ್ಗೆ ಪರಿಶೀಲಿಸಲಾಗುತ್ತಿದೆ ಎಂದು ಅವರು ಹೇಳಿದರು.
ಗ್ರಾ.ಪಂ., ನಗರಸಭೆ ಸೇರಿದಂತೆ ಸ್ಥಳೀಯ ಸಂಸ್ಥೆಗಳು ನೀಡುವ ಇ-ಖಾತಾ ಸೌಲಭ್ಯ ನೇರವಾಗಿ ಉಪ ನೋಂದಣಾಧಿಕಾರಿಗಳ ಆನ್‍ಲೈನ್ ಸಂಪರ್ಕಗೊಂಡರೆ ಅಕ್ರಮ ನೋಂದಣಿ ತಡೆಯಲು ಸಾಧ್ಯ. ಈ ನಿಟ್ಟಿನಲ್ಲಿ ಎಲ್ಲ ಪ್ರತ್ಯೇಕ ಖಾತೆಗಳ ಆನ್‍ಲೈನ್ ಇಂಟಿಗ್ರೇಶನ್‍ಗೆ ಈ ಹಿಂದೆ ವಿಧಾನಮಂಡಲದಲ್ಲಿ ತಿದ್ದುಪಡಿ ಮಸೂದೆ ಅಂಗೀಕರಿಸಲಾಗಿದೆ. ರಾಷ್ಟ್ರಪತಿ ಸಹಿಯ ನಿರೀಕ್ಷೆಯಲ್ಲಿದ್ದೇವೆ. ಆ ಮಸೂದೆ ಅನುಷ್ಠಾನಕ್ಕೆ ಬಂದರೆ ಅನಧಿಕೃತ ಬಡಾವಣೆಗಳ ನೋಂದಣಿಗೆ ಕಡಿವಾಣ ಬೀಳಲಿದೆ ಎಂದರು.
8 ಕೋಟಿ ರೂ.ವಸೂಲಿ: ಆರಂಭಕ್ಕೆ ವಿಷಯ ಪ್ರಸ್ತಾಪಿಸಿದ ವಿಶ್ವನಾಥ್, ಬೆಂಗಳೂರು ನಗರ ಮತ್ತು ಗ್ರಾಮಾಂತರ ಪ್ರದೇಶದಲ್ಲಿ ಕೃಷಿ ಭೂಮಿಯನ್ನು ಅಕ್ರಮವಾಗಿ ನೋಂದಣಿ ಮಾಡುತ್ತಿದ್ದು, ಅಕ್ರಮ ಬಡಾವಣೆ ಒಂದಕ್ಕೆ 35ಸಾವಿರ ರೂ.ಲಂಚ ಪಡೆಯಲಾಗುತ್ತಿದೆ. ದಿನಕ್ಕೆ 100 ಲೇಔಟ್‍ಗಳು ನೋಂದಣಿಯಾಗುತ್ತಿದ್ದು, 35ಲಕ್ಷ ರೂ.ಗಳ ವರೆಗೂ ವಹಿವಾಟು ನಡೆಯುತ್ತಿದೆ. ಪ್ರತಿ ತಿಂಗಳು 8 ಕೋಟಿ ರೂ.ಗಳಷ್ಟು ಹಣವನ್ನು ಲಂಚದ ರೂಪದಲ್ಲಿ ವಸೂಲಿ ಮಾಡಲಾಗುತ್ತಿದೆ ಎಂದು ಉಲ್ಲೇಖಿಸಿದರು.







