ಮುಂದಿನ ವರ್ಷದ ವೇಳೆಗೆ ಮೆಟ್ರೋ ವಾಣಿಜ್ಯ ಸಂಚಾರಕ್ಕೆ ಮುಕ್ತಗೊಳಿಸಲು ಸೂಚನೆ : ಸಚಿವ ಕೃಷ್ಣಬೈರೇಗೌಡ

ಬೆಂಗಳೂರು : ಈ ವರ್ಷದ ಅಕ್ಟೋಬರ್ ನಿಂದ ಮೆಟ್ರೋ ಟ್ರಯಲ್ ರನ್ ಆರಂಭಿಸಿ, ಮುಂದಿನ ವರ್ಷದ ವೇಳೆಗೆ ವಾಣಿಜ್ಯ ಸಂಚಾರಕ್ಕೆ ಮುಕ್ತಗೊಳಿಸಲು ಮೆಟ್ರೋ ಸಂಸ್ಥೆಯ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಗ್ರೇಟರ್ ಬೆಂಗಳೂರು ಅಭಿವೃದ್ಧ ಸಚಿವ ಕೃಷ್ಣಬೈರೇಗೌಡ ತಿಳಿಸಿದ್ದಾರೆ.
ಶನಿವಾರ ನಗರದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ರಸ್ತೆ ಕಾಮಗಾರಿ ಮತ್ತು ಮೆಟ್ರೋ ಕಾಮಗಾರಿಗಳು ಒಂದಕ್ಕೊಂದು ಅಡಚಣೆಯಾಗದಂತೆ ಹಂತ-ಹಂತವಾಗಿ ಕೆಲಸಗಳನ್ನು ಕೈಗೆತ್ತಿಕೊಳ್ಳಲಾಗುವುದು. ಇದರೊಂದಿಗೆ ಮೆಟ್ರೋ ಮಾರ್ಗದುದ್ದಕ್ಕೂ ಸ್ಕೈವಾಕ್ ಹಾಗೂ ‘ಲಾಸ್ಟ್ ಮೈಲ್ ಕನೆಕ್ಟಿವಿಟಿ' ಸೌಲಭ್ಯಗಳನ್ನು ಅಭಿವೃದ್ಧಿಪಡಿಸಲಾಗುತ್ತಿದ್ದು, ಕರಡು ವಿನ್ಯಾಸದ ಕುರಿತು ಸಾರ್ವಜನಿಕರು ಮತ್ತು ಸ್ಥಳೀಯರಿಂದ ಸಲಹೆಗಳನ್ನು ಸ್ವೀಕರಿಸಿ ಅಂತಿಮ ಯೋಜನೆ ರೂಪಿಸಲಾಗುವುದು ಎಂದರು.
ಹೊರ ವರ್ತುಲ ರಸ್ತೆ ವ್ಯಾಪ್ತಿಯಲ್ಲಿ ಸಂಚಾರ ದಟ್ಟಣೆ ಹೆಚ್ಚಿರುವ ಜಂಕ್ಷನ್‍ಗಳನ್ನು ಗುರುತಿಸಿ ವೈಜ್ಞಾನಿಕ ಟ್ರಾಫಿಕ್ ನಿರ್ವಹಣಾ ಯೋಜನೆ ರೂಪಿಸಬೇಕು. ಅಗತ್ಯವಿರುವ ಸ್ಥಳಗಳಲ್ಲಿ ಜಂಕ್ಷನ್ ಮರುವಿನ್ಯಾಸ, ಸಿಗ್ನಲ್ ಸಮನ್ವಯ, ಯು-ಟರ್ನ್ ವ್ಯವಸ್ಥೆ ಹಾಗೂ ಸರ್ವಿಸ್ ರಸ್ತೆಗಳ ಸುಧಾರಣೆ ಮೂಲಕ ವಾಹನ ಸಂಚಾರವನ್ನು ಸುಗಮಗೊಳಿಸುವಂತೆ ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.
ಸಂಚಾರ ನಿರ್ವಹಣೆ ಹಾಗೂ ರಸ್ತೆ ವಿನ್ಯಾಸದಲ್ಲಿ ಅಗತ್ಯವಿರುವ ಸ್ಥಳಗಳಲ್ಲಿ ಮೊದಲಿಗೆ ಪ್ರಾಯೋಗಿಕ ಮಾದರಿಯನ್ನು ಜಾರಿಗೊಳಿಸಿ ಅದರ ಫಲಿತಾಂಶವನ್ನು ಪರಿಶೀಲಿಸಬೇಕು. ಯಶಸ್ವಿಯಾದ ಯೋಜನೆಗಳನ್ನು ನಂತರ ಶಾಶ್ವತವಾಗಿ ಅನುಷ್ಠಾನಗೊಳಿಸುವಂತೆ ಅಧಿಕಾರಿಗಳಿಗೆ ಸಚಿವರು ನಿರ್ದೇಶನ ನೀಡಿದರು.
ಮೆಟ್ರೋ ನಿಲ್ದಾಣಗಳು, ಐಟಿ ಪಾರ್ಕ್‍ಗಳು ಹಾಗೂ ವಾಣಿಜ್ಯ ಪ್ರದೇಶಗಳ ಸುತ್ತಮುತ್ತ ಪಾದಚಾರಿಗಳಿಗೆ ಸುರಕ್ಷಿತ, ನಿರಂತರ ಹಾಗೂ ಅಡೆತಡೆ ರಹಿತ ಫುಟ್‍ಪಾತ್ ನಿರ್ಮಾಣಕ್ಕೆ ಆದ್ಯತೆ ನೀಡಬೇಕು. ಸಾರ್ವಜನಿಕರು ರಸ್ತೆ ದಾಟುವ ಸ್ಥಳಗಳಲ್ಲಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವ ಜೊತೆಗೆ ಅಗತ್ಯವಿರುವ ಕಡೆಗಳಲ್ಲಿ ಪಾದಚಾರಿ ದಾಟುವ ವ್ಯವಸ್ಥೆ ಕಲ್ಪಿಸುವಂತೆ ಸಚಿವರು ಸೂಚಿಸಿದರು.
ರಸ್ತೆ ಬದಿಯ ಖಾಲಿ ಜಾಗಗಳು ಹಾಗೂ ಬಳಕೆಯಾಗದ ಸಾರ್ವಜನಿಕ ಸ್ಥಳಗಳನ್ನು ಅಕ್ರಮ ಚಟುವಟಿಕೆಗಳಿಗೆ ಅವಕಾಶ ನೀಡದೆ ಸಾರ್ವಜನಿಕರ ಉಪಯೋಗಕ್ಕೆ ತಕ್ಕಂತೆ ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳಬೇಕು. ಹಸಿರು ಪ್ರದೇಶ, ವಿಶ್ರಾಂತಿ ಸ್ಥಳ ಹಾಗೂ ಸಾರ್ವಜನಿಕ ಸೌಲಭ್ಯಗಳ ಅಭಿವೃದ್ಧಿಗೆ ಯೋಜನೆ ರೂಪಿಸುವಂತೆ ಸಚಿವರು ತಿಳಿಸಿದರು.
ಬಿಎಂಆರ್‍ಸಿಎಲ್ ಕೈಗೊಳ್ಳುತ್ತಿರುವ ಮೆಟ್ರೋ ಕಾಮಗಾರಿಗಳು ಹಾಗೂ ರಸ್ತೆ ಅಭಿವೃದ್ಧಿ ಕಾಮಗಾರಿಗಳ ನಡುವೆ ಸಮನ್ವಯ ಸಾಧಿಸಿ ಸಾರ್ವಜನಿಕರಿಗೆ ಕನಿಷ್ಠ ತೊಂದರೆಯಾಗುವಂತೆ ಕಾಮಗಾರಿಗಳನ್ನು ಯೋಜಿಸಬೇಕು. ರಸ್ತೆ ಅಗಲೀಕರಣ, ಯುಟಿಲಿಟಿಗಳ ಸ್ಥಳಾಂತರ ಹಾಗೂ ಸಂಚಾರ ನಿರ್ವಹಣೆಯನ್ನು ಸಮನ್ವಯದೊಂದಿಗೆ ಕೈಗೊಳ್ಳುವಂತೆ ಸಚಿವರು ಸೂಚಿಸಿದರು.
ಹೊರ ವರ್ತುಲ ರಸ್ತೆ ವ್ಯಾಪ್ತಿಯಲ್ಲಿ ಸಾರ್ವಜನಿಕ ಶೌಚಾಲಯಗಳ ಕೊರತೆ ಇರುವ ಪ್ರದೇಶಗಳನ್ನು ಗುರುತಿಸಿ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಬೇಕು. ಜೊತೆಗೆ ವಾಹನ ನಿಲುಗಡೆ ವ್ಯವಸ್ಥೆ, ಬಸ್ ನಿಲ್ದಾಣಗಳು ಹಾಗೂ ಪಾದಚಾರಿ ಸೌಲಭ್ಯಗಳನ್ನು ಸುಧಾರಿಸಲು ಯೋಜನೆ ರೂಪಿಸುವಂತೆ ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.






